ಮನುಷ್ಯನ ಪ್ರಭುತ್ವದಿಂದ ಅವಸಾನದತ್ತ ಪರಿಸರ

| Published : Jun 18 2024, 12:51 AM IST

ಮನುಷ್ಯನ ಪ್ರಭುತ್ವದಿಂದ ಅವಸಾನದತ್ತ ಪರಿಸರ
Share this Article
  • FB
  • TW
  • Linkdin
  • Email

ಸಾರಾಂಶ

ಆಧುನಿಕತೆಯ ಸೋಗಿನಲ್ಲಿ ಪರಿಸರದ ಮೇಲೆ ಪ್ರಭುತ್ವ ಸಾಧಿಸಲು ಹೊರಟ ಮಾನವ ಪರಿಸರವನ್ನು ಅವಸಾನದೆಡೆಗೆ ಮನುಷ್ಯ ಕೊಂಡೊಯ್ಯುತ್ತಿದ್ದಾನೆ.

ಹುಬ್ಬಳ್ಳಿ:

ಅವ್ಯಾಹತವಾಗಿ ನಾಶವಾಗುತ್ತಿರುವ ಪರಿಸರ ಸಂರಕ್ಷಣೆ ಅಳಿವು-ಉಳಿವಿನ ಪ್ರಶ್ನೆಯಾಗಿರದೇ, ಅದು ಮಾನವಕುಲದ ಅಳಿವು-ಉಳಿವಿನ ಪ್ರಶ್ನೆಯಾಗಿದೆ. ಪ್ರಕೃತಿಯಿಂದ ಎಲ್ಲವನ್ನೂ ಪಡೆದುಕೊಳ್ಳುವ ನಾವು ಅದಕ್ಕೆ ಕೃತಜ್ಞರಾಗಿರುವುದು ಅವಶ್ಯ. ಪ್ರಕೃತಿ ನಮ್ಮಿಂದ ಪ್ರಾಮಾಣಿಕ ಬದ್ಧತೆ ಬೇಡುತ್ತಿದೆ, ಪೂರೈಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಪಾಲಿಕೆ ಸದಸ್ಯ ಶಿವಕುಮಾರ ರಾಯನಗೌಡ್ರ ಅಭಿಪ್ರಾಯಟ್ಟರು.ಗೋಪನಕೊಪ್ಪದ ಸಪ್ತಗಿರಿ ಲೇ ಔಟ್ ಬಡಾವಣೆಯಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಹಾಗೂ ಸಪ್ತಗಿರಿ ಲೇ ಔಟ್ ನಿವಾಸಿಗಳ ಸಂಘದಿಂದ ಜಂಟಿಯಾಗಿ ಏರ್ಪಡಿಸಿದ್ದ ಸಸಿ ನೆಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಮಾನವ ಪರಿಸರದ ಕೂಸು. ಭೂಮಿಯ ಮೇಲೆ ಜನ್ಮವೆತ್ತಿದ ಮಾನವನು ಪರಿಸರದೊಂದಿಗೆ ಪರಿಸರ ಅವಲಂಬಿಸಿ ಅದರ ನೆರಳಿನಲ್ಲಿ ಬದುಕಬೇಕಾದ ಅನಿವಾರ್ಯತೆ ಹೊಂದಿದ್ದಾನೆ. ಆದರೆ ಇತ್ತೀಚೆಗೆ ಆಧುನಿಕತೆಯ ಸೋಗಿನಲ್ಲಿ ಪರಿಸರದ ಮೇಲೆ ಪ್ರಭುತ್ವ ಸಾಧಿಸಲು ಹೊರಟ ಮಾನವ ಪರಿಸರವನ್ನು ಅವಸಾನದೆಡೆಗೆ ಕೊಂಡೊಯ್ಯುತ್ತಿದ್ದಾನೆ ಎಂದರು.

ಯುವ ಮುಖಂಡ ಮುತ್ತು ಪಾಟೀಲ ಮಾತನಾಡಿ, ವರ್ಷದಿಂದ ವರ್ಷಕ್ಕೆ ತೀವ್ರವಾಗಿ ಏರುತ್ತಿರುವ ತಾಪಮಾನ, ನಿರಂತರ ವಾಯುಮಾಲಿನ್ಯ, ಜಲಮಾಲಿನ್ಯ, ಭೂಮಾಲಿನ್ಯ ಹೀಗೆ ಇನ್ನೂ ಹಲವಾರು ಪ್ರಕಾರದ ಮಾಲಿನ್ಯವನ್ನು ಪರಿಸರ ಎದುರಿಸುತ್ತಿದೆ. ವಿಶ್ವದ ಬಹು ಜನಸಂಖ್ಯೆಗೆ ಉಸಿರಾಡಲು ಶುದ್ಧಗಾಳಿ ಸಿಗುತ್ತಿಲ್ಲ. ಹಾಗಂತ ನಾವು ಉಸಿರಾಡುವುದನ್ನು ನಿಲ್ಲಿಸಲು ಸಾಧ್ಯವಿಲ್ಲ. ಆದರೆ ಉಸಿರಾಡಲು ಬೇಕಾದ ಶುದ್ಧ ಗಾಳಿಗೆ ಕೊಡುಗೆ ಕೊಡಬಹುದಲ್ಲವೇ? ಈ ಕುರಿತು ಪ್ರತಿಯೊಬ್ಬರೂ ಗಂಭೀರವಾಗಿ ಚಿಂತಿಸಬೇಕಿದೆ. ಸಾಕಷ್ಟು ಗಿಡಗಳನ್ನು ಮನೆಯ ಮುಂದೆ ನೆಟ್ಟು ಬೆಳೆಸಿ, ಪೋಷಿಸುವುದು ಎಲ್ಲರ ಆದ್ಯ ಕರ್ತವ್ಯವಾಗಬೇಕಿದೆ ಎಂದರು.

ಈ ವೇಳೆ ಸಪ್ತಗಿರಿ ಲೇ ಔಟ್‌ನಲ್ಲಿ ನಿರ್ಮಾಣ ಹಂತದಲ್ಲಿರುವ ಉದ್ಯಾನದಲ್ಲಿ ಒಟ್ಟು ೩೦ ಗಿಡಗಳನ್ನು ನೆಡಲಾಯಿತು. ಕಾರ್ಯಕ್ರಮವನ್ನು ವಿಜಯಕುಮಾರ ಪಾಟೀಲ ಕುಲಕರ್ಣಿ ನಿರೂಪಿಸಿದರು. ಪಾಲಿಕೆಯ ಜೋನಲ್-೬ ಕಮೀಷನರ್ ಎಸ್.ಸಿ. ಬೇವೂರ, ಆರೋಗ್ಯ ನಿರೀಕ್ಷಕ ಪ್ರಶಾಂತ ಶಿವಯೋಗಿ, ಈರಣ್ಣ ಪೂಜಾರಮಠ, ಹಜರತ್‌ನವರ, ಉಮೇಶ ರಾಮಾಪುರ, ಸಜ್ಜನ, ಮಂಜುನಾಥ, ಸಂಜಯ ರೊಳ್ಳಿ, ಅಜೀಜ್ ಅಹ್ಮದ್ ಹಾಗೂ ಸಪ್ತಗಿರಿ ಲೇ ಔಟ್‌ನ ನಾಗರಿಕರು ಉಪಸ್ಥಿತರಿದ್ದರು.