ಸಮಾಜಕ್ಕೆ ಸಂಸ್ಕಾರ ನೀಡುವ ಸಂತರ ಜವಾಬ್ದಾರಿ ಅತ್ಯಂತ ಕಠಿಣ: ಡಾ. ಶಾಂತವೀರ ಸ್ವಾಮೀಜಿ

| Published : Jan 21 2024, 01:35 AM IST

ಸಮಾಜಕ್ಕೆ ಸಂಸ್ಕಾರ ನೀಡುವ ಸಂತರ ಜವಾಬ್ದಾರಿ ಅತ್ಯಂತ ಕಠಿಣ: ಡಾ. ಶಾಂತವೀರ ಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ಜಗತ್ತು ಆಧುನೀಕರಣವಾದಂತೆ, ಮನುಷ್ಯನ ಮನಸ್ಸು ಮತ್ತು ಭಾವನೆಗಳು ಕಲುಷಿತಗೊಂಡಿವೆ.

ಕನ್ನಡಪ್ರಭ ವಾರ್ತೆ ಹಾವೇರಿ

ಜಗತ್ತು ಆಧುನೀಕರಣವಾದಂತೆ, ಮನುಷ್ಯನ ಮನಸ್ಸು ಮತ್ತು ಭಾವನೆಗಳು ಕಲುಷಿತಗೊಂಡಿವೆ. ಇಂಥ ವಿಷಮ ಪರಿಸ್ಥಿತಿಯಲ್ಲಿ ಸಮಾಜಕ್ಕೆ ಸಂಸ್ಕಾರ ನೀಡುವ ಸಂತ, ಮಹಾತ್ಮರ ಜವಾಬ್ದಾರಿ ಅತ್ಯಂತ ಕಠಿಣವಾಗಿದೆ ಎಂದು ಹೊಸದುರ್ಗದ ಕುಂಚಟಿಗ ಮಹಾಸಂಸ್ಥಾನಮಠದ ಡಾ. ಶಾಂತವೀರ ಸ್ವಾಮೀಜಿ ಹೇಳಿದರು.

ನಗರದ ಹುಕ್ಕೇರಿಮಠದ ಶಿವಲಿಂಗೇಶ್ವರ ಮಹಿಳಾ ಮಹಾವಿದ್ಯಾಲಯದ ಆವರಣದಲ್ಲಿ ಲಿಂ.ಶಿವಬಸವ ಸ್ವಾಮಿಗಳ ೭೮ನೇ ಮತ್ತು ಲಿಂ.ಶಿವಲಿಂಗ ಸ್ವಾಮೀಜಿಗಳ ೧೫ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ಹಮ್ಮಿಕೊಂಡರುವ ನಮ್ಮೂರ ಜಾತ್ರೆಯ ನಾಲ್ಕನೇ ದಿನ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

ಸಮಾಜವು ಶುದ್ಧ ಕುಡಿಯುವ ನೀರು ಇದ್ದಂತೆ, ಅದನ್ನು ಬಳಸುವ ಕುರಿ ತಾನು ಕುಡಿದು ಪರರಿಗೂ ಕುಡಿಯಲು ಕೊಡುತ್ತದೆ. ಆದರೆ ಎಮ್ಮೆ ಕುಡಿಯುವ ನೀರಲ್ಲಿ ರಾಡಿ ಎಬ್ಬಿಸಿ, ತಾನು ಕುಡಿದು, ಮತ್ತೊಬ್ಬರಿಗೆ ಕುಡಿಯಲು ಯೋಗ್ಯ ಇಲ್ಲದಂತೆ ಮಾಡುತ್ತದೆ. ಅದೇ ರೀತಿ ಮನುಷ್ಯನು ತನ್ನ ಸ್ವಾರ್ಥಕ್ಕಾಗಿ ಸಮಾಜವನ್ನು ಬಳಸುತ್ತಿದ್ದಾನೆ ಎಂದು ಹೇಳಿದರು.

ಪ್ರತಿ ವ್ಯಕ್ತಿಗೆ ಗುರು ರಕ್ಷಣೆ ಅವಶ್ಯವಾಗಿದೆ. ಗುರು-ಶಿಷ್ಯ ಸಂಬಂಧವು ಶಿವ ನಂದಿಯಂತೆ ಇರಬೇಕು. ಸಮ ಸಮಾಜದ ಕನಸು ಸಾಕಾರವಾಗಲು ಗುರುಗಳ ಮಾರ್ಗದರ್ಶನದಲ್ಲಿ ತಾನೂ ಬದುಕಿ ಇತರರು ಬದುಕುವ ಮನೋಭಾವ ಬೆಳೆಯಲು ಇಂಥ ಮಹಾತ್ಮರ ಪುಣ್ಯ ಸ್ಮರಣೋತ್ಸವಗಳು ಸಹಾಯಕವಾಗುತ್ತವೆ. ದೇಶದಲ್ಲಿ ರಾಮಮಂದಿರ ಉದ್ಘಾಟನೆಯ ಈ ಸಂದರ್ಭದಲ್ಲಿ ರಾಮರಾಜ್ಯ ಸ್ಥಾಪನೆಯಾಗಬೇಕು. ಜೊತೆಗೆ ಬಸವ ರಾಜ್ಯವೂ ಆಗಬೇಕಾಗಿದೆ ಎಂದು ಹೇಳಿದರು.

ಜಾನಪದ ವಿದ್ವಾಂಸ ಡಾ. ಶಂಭು ಬಳಿಗಾರ ಮಾತನಾಡಿ, ಜಾತ್ರೆ ಎಂದರೆ ಎಲ್ಲರೂ ಕೂಡಿ ಬೆರೆಯುವುದು. ಕೂಡಿ ಬಾಳಿದರೆ ಸ್ವರ್ಗ ಸುಖ. ಸಂಬಂಧಗಳಿಗೆ ಇಂದು ಸಂಚಕಾರ ಬಂದಿದೆ. ಕಿರಿಯರ ಬೆಳವಣಿಗೆಯಲ್ಲಿ ಹಿರಿಯರ ಪಾತ್ರ ಹಿರಿದು. ಅವರು ನಮ್ಮನ್ನು ಅನುಕರಿಸುತ್ತಾರೆ ಹೊರತು ಮಾತು ಅನುಸರಿಸುವುದಿಲ್ಲ. ಆದ್ದರಿಂದ ನಮ್ಮ ನಡೆ, ನುಡಿ ಆದರ್ಶವಾಗಬೇಕು. ಸಮಾಜವನ್ನು ಜಾಗೃತಗೊಳಿಸುವ ಮಹಾತ್ಮರ ಪುಣ್ಯ ಸ್ಮರಣೆಗಳಿಗೆ ಕಿರಿಯರನ್ನು ಕರೆ ತಂದು ಸನ್ಮಾರ್ಗದ ದಾರಿ ತೋರಿಸಬೇಕು ಎಂದು ಹೇಳಿದರು. ಇದೇ ವೇಳೆ ಹಲವಾರು ಜಾನಪದ ಹಾಡುಗಳನ್ನು ಹೇಳಿ ನಮ್ಮ ನೆಲದ ಜಾನಪದ ಸೊಗಡನ್ನು ಬಣ್ಣಿಸಿದರು.

ಹಿರಿಯ ಸಾಹಿತಿ ಸತೀಶ ಕುಲಕರ್ಣಿ ಮಾತನಾಡಿ, ರಾಜ್ಯೋತ್ಸವ ಪುರಸ್ಕಾರ ಕೇವಲ ಒಬ್ಬ ವ್ಯಕ್ತಿಗೆ ಮಾತ್ರ ಬಂದಿರುವುದಿಲ್ಲ. ಸಾಹಿತ್ಯ, ಸಂಸ್ಕೃತಿ ಮತ್ತು ಪರಂಪರೆಗೆ ಸಂದ ಗೌರವವಾಗಿದೆ ಎಂದ ಅವರು, ತಾವು ಬರೆದ ಕ್ರಾಂತಿ ಗೀತೆ ಕಟ್ಟತೇವ ನಾವು ಕಟ್ಟೇ ಕಟ್ಟತೇವ ಹಾಡನ್ನು ಹಾಡಿದರು.

ಹೊಳಲದ ಚನ್ನಬಸವ ಸ್ವಾಮೀಜಿ ಮಾತನಾಡಿದರು. ಮಾದನ ಹಿಪ್ಪರಗಿಯ ಅಭಿನವ ಶಿವಲಿಂಗ ಸ್ವಾಮೀಜಿ, ಅಕ್ಕಿಆಲೂರಿನ ಶಿವಬಸವ ಸ್ವಾಮೀಜಿ, ಕೂಡಲದ ಗುರುಮಹೇಶ್ವರ ಸ್ವಾಮೀಜಿ, ಆಸಂಗಿಯ ವೀರಬಸವ ದೇವರು, ಸಿ.ಜಿ. ತೋಟಣ್ಣನವರ, ಪಾರ್ವತಮ್ಮ ಹಾವೇರಿ, ಸಂಗಮೇಶಗೌಡ ಗೌಡಪ್ಪನವರ, ಸೇಹಾ ಹಿರೇಮಠ, ಗಣೇಶ ಹೋಟ್ಕರ, ಸುನಂದಾ ಸುರಳಿಹಳ್ಳಿ, ವಿ.ಎಂ. ಮಠದ, ಗಂಗಾಧರ ಹತ್ತಿ, ಪ್ರಕಾಶಗೌಡ ಭಗವಂತಗೌಡರ, ಸಿದ್ಧಲಿಂಗೇಶ ಶೆಟ್ಟರ, ರತ್ನಾ ಪಾಟೀಲ, ನಿರಂಜನ ಮರಡೂರಮಠ, ಮಹಾದೇವಪ್ಪ ಮೆಡ್ಲೇರಿ, ಪ್ರಭುಗೌಡ ಬಿಸ್ಟಗೌಡರ, ಪವನ ಬಹೂದ್ದೂರದೇಸಾಯಿ, ಕರಬಸಪ್ಪ ಹಲಗಣ್ಣನವರ, ಶಿವಯೋಗಿ ಹೂಲಿಕಂತಿಮಠ, ಬಿ.ಬಸವರಾಜ ಮತ್ತಿತರರು ಇದ್ದರು.

ಸಂಗಮೇಶ ಪಾಟೀಲ ಪ್ರಾರ್ಥಿಸಿದರು. ವಿಜಯಕುಮಾರ ಕೂಡ್ಲಪ್ಪನವರ ಸ್ವಾಗತಿಸಿದರು. ಶಿವಪ್ರಸಾದ ದೇವರು ಮತ್ತು ನಾಗರಾಜ ನಡುವಿನಮಠ ನಿರೂಪಿಸಿದರು. ಆನಂದ ಅಟವಾಳಗಿ ವಂದಿಸಿದರು.

ಪೂಜ್ಯದ್ವಯರ ಭಾವಚಿತ್ರದ ಮೆರವಣಿಗೆ ಇಂದು:

ಹುಕ್ಕೇರಿಮಠದ ಪೂಜದ್ವಯರ ಪುಣ್ಯಸ್ಮರಣೋತ್ಸವದ ನಿಮಿತ್ತ ಜ.೨೧ರಂದು ಬೆಳಗ್ಗೆ ೮ಕ್ಕೆ ಶಿವಬಸವ ಮಹಾಶಿವಯೋಗಿಗಳವರ ಹಾಗೂ ಶಿವಲಿಂಗ ಮಹಾಶಿವಯೋಗಿಗಳವರ ಗದ್ದುಗೆಗೆ ಮಹಾಪೂಜೆ ಹಾಗೂ ಬಿಲ್ವಾರ್ಚನೆ ಮಧ್ಯಾಹ್ನ ೧೨ಕ್ಕೆ ಮಹಾಗಣಾರಾಧನೆ ಜರುಗಲಿದೆ. ಸಂಜೆ ೪ಕ್ಕೆ ಶಿವಬಸವ ಮಹಾಶಿವಯೋಗಿಗಳವರ ಹಾಗೂ ಶಿವಲಿಂಗ ಮಹಾಶಿವಯೋಗಿಗಳವರ ಭಾವಚಿತ್ರದ ಮೆರವಣಿಗೆಯು ನಾಡಿನ ಖ್ಯಾತ ಕಲಾತಂಡಗಳು ಹಾಗೂ ವಿವಿಧ ವಾದ್ಯ ವೈಭವದೊಂದಿಗೆ ಜರುಗಲಿದೆ.