ಸಾರಾಂಶ
ಕನ್ನಡಪ್ರಭ ವಾರ್ತೆ ಮಳವಳ್ಳಿ
ನೀಲಗಾರರ ಪರಂಪರೆಯನ್ನು ಯುವ ಪೀಳಿಗೆಗೆ ತಿಳಿಸಿಕೊಡುವಲ್ಲಿ ಮಠಗಳಲ್ಲಿ ಹಮ್ಮಿಕೊಂಡಿರುವ ಮಂಟೇಸ್ವಾಮಿ ಕಾವ್ಯವಾಚನ ಸಹಕಾರಿಯಾಗಿದೆ ಎಂದು ಜಾನಪದ ಕಲಾವಿದ ಮಹೇಶ್ ತಿಳಿಸಿದರು.ಪಟ್ಟಣದ ಮಂಟೇಸ್ವಾಮಿ ಮಠದಲ್ಲಿ ಕಾರ್ತಿಕ ಮಾಸದ ಪ್ರಯುಕ್ತ ರಾಚಪ್ಪಾಜಿ ಟ್ರಸ್ಟ್‌ನಿಂದ ಮಂಟೇಸ್ವಾಮಿ ಮಠಾಧೀಪತಿ ವರ್ಚಸ್ವಿ ಎಂ.ಎಲ್ ಶ್ರೀಕಂಠ ಸಿದ್ದಲಿಂಗರಾಜೇ ಅರಸ್ ಅವರ ಸಹಕಾರದೊಂದಿಗೆ ಹಮ್ಮಿಕೊಂಡಿರುವ ಮಂಟೇಸ್ವಾಮಿ ಕಾವ್ಯವಾಚನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಂಟೇಸ್ವಾಮಿ, ಸಿದ್ದಪ್ಪಾಜಿ ಅವರ ನೀಲಗಾರರ ಪರಂಪರೆ ತನ್ನದೇ ಆದ ವೈಶಿಷ್ಯತೆಯನ್ನು ಪಡೆದುಕೊಂಡಿದೆ. ನೂರಾರು ವರ್ಷಗಳಿಂದ ಬಾಯಿಂದ ಬಾಯಿಗೆ ಬಂದ ಜಾನಪದವನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದರು.ಕತ್ತಲ ರಾಜ್ಯಕ್ಕೆ ಪರಂಜ್ಯೋತಿಯಾಗಿ ಬಂದ ಮಂಟೇಸ್ವಾಮಿ ಅವರು ಸಿದ್ದಪ್ಪಾಜಿ ಅವರನ್ನು ಶಿಷ್ಯನ್ನಾಗಿ ಪಡೆದು ಕಾಲ ಜ್ಞಾನವನ್ನು ಸಾರಿ ರಾಜಬೊಪ್ಪೇಗೌಡನಪುರದಲ್ಲಿ ಐಕ್ಯರಾಗಿ ಲಕ್ಷಾಂತರ ಭಕ್ತರನ್ನು ಪಡೆದಿದ್ದಾರೆ ಎಂದರು.
ಇತ್ತೀಚಿನ ದಿನಗಳಲ್ಲಿ ಟಿವಿ, ಮೊಬೈಲ್‌ಗಳ ಹಾವಳಿ ಹೆಚ್ಚಾಗಿ ಮೂಲ ಜಾನಪದವನ್ನೇ ಮರೆಮಾಡುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಮಠಾಧೀಪತಿಗಳಾದ ವರ್ಚಸ್ವಿ ಬುದ್ಧಿ ಅವರು ಎಲ್ಲಾ ಮಠಗಳಲ್ಲಿಯೂ ಮಂಟೇಸ್ವಾಮಿ ಕಾವ್ಯ ವಾಚನವನ್ನು ಮಾಡುವಂತೆ ನೀರಗಾರರಿಗೆ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಹೊನ್ನಾಯಕನಗಳ್ಳಿ, ಮಳವಳ್ಳಿ, ಬಿಜಿಪುರ, ಕಪ್ಪಡಿ ರಾಚಪ್ಪಾಜಿ, ಚಿಕ್ಕಲ್ಲೂರು ಸಿದ್ದಪ್ಪಾಜಿ ಮಠಗಳಲ್ಲಿ ಮೂಲ ಮಂಟೇಸ್ವಾಮಿ ಕಾವ್ಯವಚನವನ್ನು ಹಮ್ಮಿಕೊಳ್ಳಲಾಗಿದೆ ಎಂದರು.ಮೂಲ ತಂಬೂರಿ ಜಾನಪದರು ಮಂಟೇಸ್ವಾಮಿ, ಸಿದ್ದಪ್ಪಾಜಿ, ಮಹದೇಶ್ವರ ದೇವರ ಜಾನಪದ ಹಾಡುಗಳನ್ನು ಹಾಡುವುದೇ ಕಾಯಕವಾಗಿದೆ. ಆದಿಹೊನ್ನಾಯಕಹಳ್ಳಿ, ಮಳವಳ್ಳಿ ಮಂಟೇಸ್ವಾಮಿ ಮಠ ಹಾಗೂ ಕಪ್ಪಡಿ ಶ್ರೀಕ್ಷೇತ್ರದ ಮಠಾಧೀಪತಿಗಳಾದ ವರ್ಚಸ್ವಿ ಶ್ರೀಕಂಠ ಸಿದ್ದಲಿಂಗರಾಜೇ ಅರಸು ಅವರು ಜಾನಪದ ಕಲೆಗಾರರನ್ನು ಪ್ರೋತ್ಸಾಹಿಸುವ ಜೊತೆಗೆ ಮೂಲ ಮಂಟೇಸ್ವಾಮಿ ಕಾವ್ಯವನ್ನು ಆಧುನಿಕ ಯುಗದ ಹೊಸ ಪೀಳಿಗೆಗೆ ಪರಿಚಯಿಸುತ್ತಿರುವುದು ಪ್ರಶಂಸನೀಯ ಎಂದರು.
ಕಾರ್ತಿಕಮಾಸದ ಅಂಗವಾಗಿ ಮಂಟೇಸ್ವಾಮಿ ಬಸಪ್ಪ ಹಾಗೂ ಕಂಡಾಯಗಳಿಗೆ ವಿಶೇಷ ಪೂಜೆ ನೆರೆವೇರಿಸಲಾಯಿತು. ಹಿರಿಯ ಕಲಾವಿದ ತಂಬೂರಿ ಗುರುಬಸವಯ್ಯ, ಶ್ರೀನಿವಾಸ್ ಮೂರ್ತಿ, ಗೌರೀಶ್ ಶಂಕರ್ ಅವರ ತಂಡ ಮಂಟೇಸ್ವಾಮಿ ಸಿದ್ದಪ್ಪಾಜಿ ಅವರ ಕಥೆಯನ್ನು ಪ್ರಸ್ತುತ ಪಡಿಸಿದರು. ಮಂಟೇಸ್ವಾಮಿ ಮಠಕ್ಕೆ ಬಂದ ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು.;Resize=(128,128))
;Resize=(128,128))