ಕನ್ನಡಪ್ರಭ ವಾರ್ತೆ ಕುಶಾಲನಗರ
ಸಮಾಜದಲ್ಲಿ ನೊಂದವರ ಪರವಾಗಿ ಹಾಗೂ ವ್ಯವಸ್ಥೆಯ ಅಂಕು ಡೊಂಕುಗಳನ್ನು ತಿದ್ದುವ ಚಿಂತನೆಯೊಂದಿಗೆ ಸಮಾಜಕ್ಕೆ ನ್ಯಾಯ ಒದಗಿಸುವ ಪತ್ರಕರ್ತರು ತಮ್ಮ ವೈಯಕ್ತಿಕ ಜೀವನದ ಬಗ್ಗೆ ಚಿಂತನೆ ಹರಿಸುವುದು ಅಗತ್ಯವಾಗಿದೆ ಎಂದು ಕುಶಾಲನಗರ ರೋಟರಿ ಅಧ್ಯಕ್ಷರಾದ ಮನು ಪೆಮ್ಮಯ್ಯ ಅಭಿಪ್ರಾಯ ವ್ಯಕ್ತಪಡಿಸಿದರು.ಅವರು ಕುಶಾಲನಗರದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಘಟಕದ ವಾರ್ಷಿಕ ದತ್ತಿನಿಧಿ ಪ್ರಶಸ್ತಿ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಪ್ರಸಕ್ತ ಸಮಾಜದಲ್ಲಿ ಮಾಧ್ಯಮ ಕ್ಷೇತ್ರದ ದಿಕ್ಕು ಬದಲಾಗದಂತೆ ಪತ್ರಕರ್ತರು ಕಾರ್ಯನಿರ್ವಹಿಸುವ ಅಗತ್ಯ ಒದಗಿ ಬಂದಿದೆ ಎಂದು ಅವರು ಹೇಳಿದರು.ಸಮಾಜದ ನೈಜ ಸಮಸ್ಯೆಗಳನ್ನು ಹುಡುಕಿ ಹೊರಟ ಪತ್ರಕರ್ತ ಉತ್ತಮ ವರದಿಗಾರನಾಗಲು ಸಾಧ್ಯ ಎಂದ ಮನು ಪೆಮ್ಮಯ್ಯ ಪ್ರತಿಯೊಂದು ವಿಷಯಗಳ ಬಗ್ಗೆ ಆಳವಾಗಿ ಅರಿತು ತಾವು ಪ್ರತಿನಿಧಿಸುವ ಮಾಧ್ಯಮಗಳ ಮೂಲಕ ಉತ್ತಮ ಸುದ್ದಿಯನ್ನು ನೀಡಬೇಕಾಗಿದೆ ಎಂದರು.
ತಾಲೂಕು ಸಂಘದ ನೂತನ ಕಟ್ಟಡ ಆದಷ್ಟು ಶೀಘ್ರ ನಿರ್ಮಾಣವಾಗಲಿ ಎಂದು ಶುಭ ಕೋರಿದರು.
ಜಿಲ್ಲಾ ಸಂಘದ ಅಧ್ಯಕ್ಷರಾದ ಅನು ಕಾರ್ಯಪ್ಪ ಅವರು ಮಾತನಾಡಿ ದತ್ತಿನಿಧಿ ಪ್ರಶಸ್ತಿಗೆ ಭಾಜನರಾದ ಪತ್ರಕರ್ತರನ್ನು ಅಭಿನಂದಿಸಿದರು. ವಿವಿಧ ಕ್ಷೇತ್ರಗಳಲ್ಲಿ ಆಳವಾದ ವಿಚಾರಗಳನ್ನು ಹುಡುಕಿ ಸುದ್ದಿಗಳನ್ನು ಮಾಡುವ ಮೂಲಕ ತಾವು ಪ್ರತಿನಿಧಿಸುವ ಪತ್ರಿಕೆ ಅಥವಾ ಮಾಧ್ಯಮಕ್ಕೆ ನೀಡುವುದು ಪ್ರತಿಯೊಬ್ಬ ಪತ್ರಕರ್ತನ ಜವಾಬ್ದಾರಿಯಾಗಿದೆ ಎಂದರು.
ರಾಜ್ಯ ಉಪಾಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಮಾತನಾಡಿ, ತಾಲೂಕು ಪತ್ರಕರ್ತರ ಭವನ ನಿರ್ಮಾಣಕ್ಕೆ ಅಗತ್ಯವಿರುವ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ತಿಳಿಸಿದರು.ರಾಜ್ಯ ನಿರ್ದೇಶಕರಾದ ಸವಿತಾ ರೈ ಮಾತನಾಡಿ ಸಂಘದ ಅಧ್ಯಕ್ಷರು ಎಲ್ಲ ಸದಸ್ಯರ ಸಹಕಾರದೊಂದಿಗೆ ಮುಂದಿನ ವರ್ಷದ ಅವಧಿಯಲ್ಲಿ ನೂತನ ಭವನ ನಿರ್ಮಾಣಕ್ಕೆ ಪ್ರಯತ್ನಿಸುವಂತಾಗಬೇಕು. ಆರ್ಥಿಕ ಸಂಪನ್ಮೂಲಗಳ ಕ್ರೋಡೀಕರಣಕ್ಕೆ ಸಿದ್ಧತೆ ನಡೆಸುವಂತೆ ಸಲಹೆ ನೀಡಿದರು.
ತಾಲೂಕು ಸಂಘದ ಅಧ್ಯಕ್ಷ ಎಂ ಎನ್ ಚಂದ್ರಮೋಹನ್ ಅಧ್ಯಕ್ಷತೆ ವಹಿಸಿದ್ದರು.ವಾರ್ಷಿಕ ದತ್ತಿ ನಿಧಿ ಪ್ರಶಸ್ತಿ ವಿಜೇತರಾದ ಎಂ ಎನ್ ಚಂದ್ರಮೋಹನ್, ಕೆ ಜೆ ಶಿವರಾಜ್, ಟಿ ಆರ್ ಪ್ರಭುದೇವ್, ಕೆ ಎಸ್ ಸಂಶುದ್ದೀನ್, ಪಿ ವಿ ಅಕ್ಷಯ್, ವನಿತಾ ಚಂದ್ರಮೋಹನ್ ಮತ್ತು ಶಶಿಕುಮಾರ್ ರೈ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸಂಘದ ರಾಷ್ಟ್ರೀಯ ಸಮಿತಿ ಸದಸ್ಯರಾದ ಪಾರ್ಥ ಚಿನ್ನಪ್ಪ ಪ್ರಧಾನ ಕಾರ್ಯದರ್ಶಿ ಕೆ ಜೆ ಶಿವರಾಜ್, ಜಿಲ್ಲಾ ಸಮಿತಿಯ ಪದಾಧಿಕಾರಿಗಳು ಆಡಳಿತ ಮಂಡಳಿ ಸದಸ್ಯರು ಇದ್ದರು.ದತ್ತಿನಿಧಿ ಪ್ರಶಸ್ತಿ ಸ್ಥಾಪಿಸಿದ ದಾನಿಗಳಿಗೆ ನೆನಪಿನ ಕಾಣಿಕೆ ನೀಡಲಾಯಿತು.
ಕಳೆದ ಬಾರಿ ಜಿಲ್ಲಾ ಸಂಘದ ಪ್ರಶಸ್ತಿಗೆ ಭಾಜನರಾಗಿದ್ದ ಪಿ ವಿ ಅಕ್ಷಯ್ ಚಂದ್ರಮೋಹನ್ ಮತ್ತು ಶಿವರಾಜು ಅವರನ್ನು ಸನ್ಮಾನಿಸಲಾಯಿತು. ಕಾರ್ಯದರ್ಶಿ ನಾಗರಾಜ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಕುಡೆಕಲ್ ಗಣೇಶ ಪ್ರಾರ್ಥನೆ, ವಿನೋದ್ ವಂದಿಸಿದರು.