ಹಸ್ತಪ್ರತಿಗಳು ನಮ್ಮೊಂದಿಗೆ ಜ್ಞಾನವನ್ನು ಹಂಚಿಕೊಳ್ಳಲು ಕಾಯುತ್ತಿರುವ ಅಮೂಲ್ಯ ಮಾಧ್ಯಮಗಳಾಗಿವೆ ಎಂದು ಹಂಪಿ ಕನ್ನಡ ವಿವಿ ಕುಲಪತಿ ಡಾ.ಡಿ.ವಿ.ಪರಮಶಿವಮೂರ್ತಿ ನುಡಿದರು.
ಕನ್ನಡಪ್ರಭ ವಾರ್ತೆ ಬೀದರ್
ಹಸ್ತಪ್ರತಿಗಳು ನಮ್ಮೊಂದಿಗೆ ಜ್ಞಾನವನ್ನು ಹಂಚಿಕೊಳ್ಳಲು ಕಾಯುತ್ತಿರುವ ಅಮೂಲ್ಯ ಮಾಧ್ಯಮಗಳಾಗಿವೆ ಎಂದು ಹಂಪಿ ಕನ್ನಡ ವಿವಿ ಕುಲಪತಿ ಡಾ.ಡಿ.ವಿ.ಪರಮಶಿವಮೂರ್ತಿ ನುಡಿದರು.ಅವರು ಹಸ್ತಪ್ರತಿಶಾಸ್ತ್ರ ವಿಭಾಗ, ಕನ್ನಡ ವಿಶ್ವವಿದ್ಯಾಲಯ ಹಂಪಿ, ಕನ್ನಡ ವಿಭಾಗ, ಕರ್ನಾಟಕ ಮಹಾವಿದ್ಯಾಲಯ ಬೀದರ್ ಹಾಗೂ ಕರಾಶಿ ಸಂಸ್ಥೆಯ ಕಲ್ಯಾಣ ಕರ್ನಾಟಕ ಸಂಶೋಧನಾ ಕೇಂದ್ರ, ಬೀದರ್ ಮತ್ತು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಬೀದರ್ ಸಹಯೋಗದಲ್ಲಿ ನಡೆದ ಅಖಿಲ ಕರ್ನಾಟಕ 23ನೇ ಹಸ್ತಪ್ರತಿ ಸಮ್ಮೇಳನದ ಉದ್ಘಾಟಿಸಿ ಮಾತನಾಡಿ, ಓದುವ ಮತ್ತು ಅರ್ಥಮಾಡಿಕೊಳ್ಳುವ ತಾಳ್ಮೆ ಹಾಗೂ ಆಸಕ್ತಿ ನಮ್ಮಲ್ಲಿದ್ದರೆ, ಅವು ತಮ್ಮೊಳಗೆ ಅಡಗಿಸಿಕೊಂಡಿರುವ ಜ್ಞಾನಸಂಪತ್ತನ್ನು ನಮ್ಮ ಮುಂದೆ ತೆರೆದಿಡುತ್ತವೆ ಎಂದು ಹೇಳಿದರು.
ಹಸ್ತಪ್ರತಿಗಳು ನಮ್ಮ ಹಿರಿಯರು ನಮಗೆ ಕೊಡುಗೆಯಾಗಿ ನೀಡಿರುವ ಜ್ಞಾನ ಮತ್ತು ಪರಂಪರೆಯನ್ನು ಮುಂದಿನ ತಲೆಮಾರಿಗೆ ತಲುಪಿಸುವ ಪ್ರಮುಖ ಮಾಧ್ಯಮಗಳಾಗಿವೆ. ಕಾಲಕ್ರಮೇಣ ಕನ್ನಡ ಲಿಪಿಯಲ್ಲಿ ಹಲವು ಬದಲಾವಣೆಗಳಾಗಿದ್ದು, ಕಳೆದ ಸುಮಾರು ಒಂದು ಸಾವಿರ ವರ್ಷಗಳಲ್ಲಿ ಲಿಪಿಯ ಸ್ವರೂಪದಲ್ಲಿ ಮಹತ್ವದ ಪರಿರ್ತನೆಗಳು ಸಂಭವಿಸಿವೆ. ಹೀಗಾಗಿ, ಪ್ರಾಚೀನ ಹಸ್ತಪ್ರತಿಗಳಲ್ಲಿರುವ ಲಿಪಿಯನ್ನು ಇಂದಿನವರು ಸುಲಭವಾಗಿ ಓದುವುದು ಸಾಧ್ಯವಾಗುತ್ತಿಲ್ಲ ಎಂದು ಅಭಿಪ್ರಾಯಪಟ್ಟರು.ಸಮ್ಮೇಳನಾಧ್ಯಕ್ಷ ಹಿರಿಯ ಹಸ್ತಪ್ರತಿ ಪಂಡಿತ ಡಾ.ನಾ.ಗೀತಾಚಾರ್ಯ ಮಾತನಾಡಿ, ರಾಜ್ಯದ ಅಮೂಲ್ಯ ಜ್ಞಾನಸಂಪತ್ತಾಗಿರುವ ಹಸ್ತಪ್ರತಿಗಳ ಸಂರಕ್ಷಣೆ ಹಾಗೂ ನಿರ್ವಹಣೆಗೆ ಸಮಗ್ರ ನೀತಿ ರೂಪಿಸಿ, ಹಸ್ತಪ್ರತಿಗಳಿಗಾಗಿಯೇ ಮೀಸಲಾದ ಪ್ರತ್ಯೇಕ ಹಸ್ತಪ್ರತಿ ಸಂಗ್ರಹಾಲಯ ಇಲಾಖೆಯನ್ನು ಸರ್ಕಾರ ಸ್ಥಾಪಿಸಬೇಕು ಎಂದರು.
ರಾಜ್ಯದಲ್ಲಿ ಹಸ್ತಪ್ರತಿಗಳ ಸಂಗ್ರಹ, ಸಂರಕ್ಷಣೆ, ಅಧ್ಯಯನ ಹಾಗೂ ಸಂಶೋಧನೆಗೆ ಉತ್ತೇಜನ ನೀಡಲು ಪ್ರತ್ಯೇಕ ರಾಜ್ಯಮಟ್ಟದ ಹಸ್ತಪ್ರತಿ ಇಲಾಖೆ ಸ್ಥಾಪಿಸಬೇಕು. ಇದರ ಜೊತೆಗೆ ಕೇಂದ್ರೀಕೃತ ಹಸ್ತಪ್ರತಿ ಭಂಡಾರವನ್ನು ನಿರ್ಮಿಸಬೇಕು. ತಾಲೂಕು ಹಾಗೂ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಹಸ್ತಪ್ರತಿ ಸಂಗ್ರಹಾಲಯಗಳನ್ನು ಸ್ಥಾಪಿಸುವ ಮೂಲಕ ಗ್ರಾಮೀಣ ಪ್ರದೇಶಗಳಲ್ಲಿರುವ ಅಮೂಲ್ಯ ಹಸ್ತಪ್ರತಿಗಳನ್ನು ಗುರುತಿಸಿ ಸಂರಕ್ಷಿಸುವ ಕಾರ್ಯಕ್ಕೆ ಆದ್ಯತೆ ನೀಡಬೇಕು ಎಂದರು.ಹಂಪಿ ಕನ್ನಡ ವಿವಿ ಹಸ್ತಪ್ರತಿಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ವೀರೇಶ ಬಡಗೇರ ಪ್ರಾಸ್ತಾವಿಕ ಮಾತನಾಡಿ, ಕನ್ನಡ ವಿಶ್ವವಿದ್ಯಾಲಯದ ಹಸ್ತಪ್ರತಿಶಾಸ್ತ್ರ ವಿಭಾಗವು ಹಸ್ತಪ್ರತಿ ಅಧ್ಯಯನಕ್ಕಾಗಿಯೇ ಸ್ಥಾಪಿತವಾದ ದೇಶದ ಮೊದಲ ಹಾಗೂ ಏಕೈಕ ಅಧ್ಯಯನ ವಿಭಾಗವಾಗಿದೆ ಎಂದರು.
ಬೀದರ್ ವಿವಿ ಕುಲಪತಿ ಡಾ.ಬಿ.ಎಸ್. ಬಿರಾದರ್ ಹಸ್ತಪ್ರತಿ ವ್ಯಾಸಂಗ-26 ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿ, ಇಂದಿನ ಸಮಾಜಕ್ಕೆ ಹಸ್ತಪ್ರತಿಗಳು ಬೇರು ಇದ್ದಂತೆ, ಅವುಗಳನ್ನು ನಿರ್ಲಕ್ಷಿಸಿದರೆ ಸಾಹಿತ್ಯ ಬೆಳವಣಿಗೆ ಸಾಧ್ಯವಿಲ್ಲ. ಇಂದಿನ ಡಿಜಿಟಲ್ ಯುಗದಲ್ಲಿಯೂ ಹಸ್ತಪ್ರತಿಗಳು ಸಂಶೋಧಕರು, ಲೇಖಕರ ಅಧ್ಯಯನಕ್ಕೆ ಅಮೂಲ್ಯ ಸಂಪತ್ತಾಗಿದೆ ಎಂದರು.ಬಸವಕಲ್ಯಾಣ ಅನುಭವ ಮಂಟಪ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು ಸಾನ್ನಿಧ್ಯ ವಹಿಸಿದ್ದರು.
ಕರಾಶಿ ಸಂಸ್ಥೆಯ ಬಸವರಾಜ ಜಾಬಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಕರಾಶಿ ಸಂಸ್ಥೆ ನ್ಯಾಸ ಅಧ್ಯಕ್ಷ ಡಾ.ಬಸವರಾಜ ಜಿ.ಪಾಟೀಲ್ ಮಾತನಾಡಿದರು.ಹಿರಿಯ ಸಾಹಿತಿ ಡಾ.ಕಲ್ಯಾಣರಾವ್ ಜಿ.ಪಾಟೀಲ್, ಜಿಲ್ಲಾ ಕಸಾಪ ಅಧ್ಯಕ್ಷ ಸುರೇಶ ಚನ್ನಶೆಟ್ಟಿ, ಕರ್ನಾಟಕ ಮಹಾವಿದ್ಯಾಲಯ ಪ್ರಾಚಾರ್ಯ ಸೋಮನಾಥ ಬಿರಾದಾರ, ಉಪ ಪ್ರಾಚಾರ್ಯ ಡಾ.ಶಶಿಧರ ಪಾಟೀಲ್, ಕನ್ನಡ ವಿಭಾಗದ ಮುಖ್ಯಸ್ಥೆ ಡಾ.ಮಹಾನಂದ ಮಡಕಿ, ಶಿವಶಂಕರ ಟೋಕರೆ, ಶಾಂತಕುಮಾರ ಪಾಟೀಲ್ ಸೇರಿದಂತೆ ಹಂಪಿ ಕನ್ನಡ ವಿವಿ, ಕರ್ನಾಟಕ ಮಹಾವಿದ್ಯಾಲಯ ಪ್ರಾಧ್ಯಾಪಕರು, ಸಂಶೋಧಕರು ಹಾಗೂ ಜಿಲ್ಲಾ ಕಸಾಪ ಪದಾಧಿಕಾರಿಗಳು ಭಾಗವಹಿಸಿದ್ದರು.