ಸಾರಾಂಶ
ಔರಾದ್ : ಲೋಕಸಭೆ ಚುನಾವಣೆಯಲ್ಲಿ ಮರಾಠ ಸಮಾಜದ ವ್ಯಕ್ತಿ, ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಲಿದ್ದಾರೆ ಎಂದು ಬಿಜೆಪಿ ಓಬಿಸಿ ಮೋರ್ಚಾದ ರಾಜ್ಯ ಉಪಾಧ್ಯಕ್ಷ ಪದ್ಮಾಕರ ಪಾಟೀಲ್, ಜಿಪಂ ಮಾಜಿ ಉಪಾಧ್ಯಕ್ಷ ಡಾ. ಪ್ರಕಾಶ ಪಾಟೀಲ್, ಡಾ. ದಿನಕರ್ ಮೋರೆ, ವಿಜಯಕುಮಾರ ಪಾಟೀಲ್ ಕಣಜಿ ಹೇಳಿದರು.
ಪಟ್ಟಣದಲ್ಲಿ ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖಂಡರು, ಬಿಜೆಪಿ, ಕಾಂಗ್ರೆಸ್ ಪಕ್ಷಗಳು ಮರಾಠಾ ಸಮುದಾಯಕ್ಕೆ ಅನ್ಯಾಯ ಮಾಡುತ್ತಿವೆ. ಆದ್ದರಿಂದ ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಸಮಾಜದ ವ್ಯಕ್ತಿಯನ್ನು ಕಣಕ್ಕಿಳಿಸಿ ಮರಾಠಾ ಸಮುದಾಯದ ಶಕ್ತಿ ತೋರಿಸಲಾಗುತ್ತದೆ ಎಂದು ಹೇಳಿದರು.
ಭಗವಂತ ಖೂಬಾ ಕಳೆದ 10 ವರ್ಷದಿಂದ ಸಂಸದರಾಗಿದ್ದರೂ ಕೂಡ ಮರಾಠಾ ಸಮಾಜದ ಸಮಸ್ಯೆಗಳ ಬಗ್ಗೆ ಸಂಸತ್ತಿನಲ್ಲಿ ಮಾತನಾಡಿಲ್ಲ. ಇದರಿಂದ ಸಮಾಜದ ಜನತೆಯಲ್ಲಿ ಬೇಸರ ಮೂಡಿಸಿದೆ. ಇನ್ನು ಖಂಡ್ರೆ ಪರಿವಾರ ಕುಟುಂಬ ರಾಜಕೀಯ ಮಾಡುತ್ತಿದೆ ಇದೂ ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲೇಲಿ 3.5 ಲಕ್ಷ ಮರಾಠಾ ಮತದಾರರಿದ್ದಾರೆ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕೊಟ್ಟ ಮಾತಿನಂತೆ ಮರಾಠ ಸಮಾಜದ ನಿಗಮ ಮಂಡಳಿ ರಚಿಸಿದ್ದರಿಂದ ವಿಧಾನಸಭೆ ಚುನಾವಣೆಯಲ್ಲಿ ಬಸವಕಲ್ಯಾಣದ ಶರಣು ಸಲಗರ ಅವರನ್ನು ಗೆಲ್ಲಿಸಿದ್ದೇವೆ. ಈಗ ನಮ್ಮ ಸಮುದಾಯ ಬಿಜೆಪಿ ಮತ್ತು ಕಾಂಗ್ರೆಸ್ ಬೆಂಬಲಿಸುವುದಿಲ್ಲ. ಜಿಲ್ಲೆಯಲ್ಲಿ ಸಮಾಜದ ಮೂರುವರೆ ಲಕ್ಷ ಮತದಾರರಿದ್ದಾರೆ. ನಮ್ಮ ಸಮಾಜದಿಂದ ವ್ಯಕ್ತಿಗೆ ಕಣಕ್ಕಿಳಿಸಿ ಗೆಲ್ಲಿಸಿಕೊಂಡು ಬರಲಾಗುತ್ತದೆ ಎಂದರು.ಸಮಾಜದ ಜನರಿಗೆ ನಿಗಮ ಮಂಡಳಿ ಮಾಡಿಲ್ಲ. ಜಿಲ್ಲಾಧ್ಯಕ್ಷರನ್ನಾಗಿಯೂ ಮಾಡಿಲ್ಲ. ಸಮಾಜದ ಜನರಿಗೆ ದೇಶ ದ್ರೋಹಿಗಳಂತೆ ನೋಡುತ್ತಿರುವುದು ಖಂಡನಾರ್ಹ ನಾವುಗಳು ಕಾಂಗ್ರೆಸ್, ಬಿಜೆಪಿಯ ಗುಲಾಮರಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪ್ರಮುಖರಾದ ತಾತೆರಾವ್ ಪಾಟೀಲ್, ವಿಠಲ್ ಸಾವಳೆ, ರಮೇಶ ಹಂದಿಕೇರಾ, ರಾಮರಾವ್ ಪಾಟೀಲ್, ಪರಮೇಶ್ವರ ಬಿರಾದಾರ್, ಅಶೋಕರಾವ್, ಪ್ರಕಾಶರಾವ್ ಬೆಳಕೊಣಿ, ಭರತ ಕದಂ, ಶಿವಾಜಿರಾವ್ ಪಾಟೀಲ್, ಕೇರಬಾ ಪವಾರ್, ಖಂಡೇರಾವ್ ರಂಧವೆ ಸೇರಿದಂತೆ ಇನ್ನಿತರರಿದ್ದರು.