ಸಾರಾಂಶ
ಚನ್ನಪಟ್ಟಣ: ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಸುವರ್ಣ ಮಹೋತ್ಸವ ಅಂಗವಾಗಿ ನಗರದ ಡಿವೈಎಸ್‌ಪಿ ಕಚೇರಿ ಮುಂದೆ ಆಯೋಜಿಸಿದ್ದ ೫ಕೆ ಮ್ಯಾರಥಾನ್‌ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ ಚಾಲನೆ ನೀಡಿದರು.
ಚನ್ನಪಟ್ಟಣ: ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಸುವರ್ಣ ಮಹೋತ್ಸವ ಅಂಗವಾಗಿ ನಗರದ ಡಿವೈಎಸ್‌ಪಿ ಕಚೇರಿ ಮುಂದೆ ಆಯೋಜಿಸಿದ್ದ ೫ಕೆ ಮ್ಯಾರಥಾನ್‌ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ ಚಾಲನೆ ನೀಡಿದರು.
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ೫೦ನೇ ವರ್ಷದ ಸುವರ್ಣ ಮಹೋತ್ಸವದ ಪ್ರಯುಕ್ತ ಫಿಟ್ನೆಸ್ ಫಾರ್ ಆಲ್ ಮತ್ತು ಮಾದಕ ವಸ್ತು ಮುಕ್ತ ಕರ್ನಾಟಕ ಎಂಬ ಸಂಕಲ್ಪದೊಂದಿಗೆ ಸುವರ್ಣ ಸಂಭ್ರಮ ಹೆಸರಿನಲ್ಲಿ ಜಿಲ್ಲಾ ಪೊಲೀಸ್ ಇಲಾಖೆಯಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ ಮಾತನಾಡಿ, ಕರ್ನಾಟಕ ಪೊಲೀಸ್ ಇಲಾಖೆಗೆ ದೇಶದಲ್ಲೇ ಅತ್ಯಂತ ದಕ್ಷ ಮತ್ತು ಪ್ರಾಮಾಣಿಕ ಇಲಾಖೆ ಎಂಬ ಹೆಸರಿದೆ. ಇದು ಹೆಮ್ಮೆಯ ವಿಚಾರವಾಗಿದ್ದು, ಇದನ್ನು ಉಳಿಸಿಕೊಂಡು ಹೋಗುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.
ರಾಜ್ಯವನ್ನು ಮಾದಕ ವಸ್ತುಗಳಿಂದ ಮುಕ್ತವಾಗಿಸುವ ನಿಟ್ಟಿನಲ್ಲಿ ನಮ್ಮ ಇಲಾಖೆ ಎಲ್ಲರ ಸಹಕಾರದೊಂದಿಗೆ ಜಾಗೃತಿ ಮೂಡಿಸುತ್ತಿದೆ. ಮ್ಯಾರಥಾನ್ ಸಹ ಇದರ ಒಂದು ಭಾಗವಾಗಿದೆ. ಯುವಕರು ಸೇರಿದಂತೆ ಎಲ್ಲ ವಯೋಮಾನದವರು ಮಾದಕ ವಸ್ತುಗಳಿಂದ ದೂರವಿರಬೇಕು ಎಂದು ಮನವಿ ಮಾಡಿದರು.ನಗರ ಪೊಲೀಸ್ ಠಾಣೆ ಮುಂದೆ ಪ್ರಾರಂಭಗೊಂಡ ಮ್ಯಾರಥಾನ್ ಕೆಂಗಲ್ ದೇವಾಲಯದ ಬಳಿ ಮುಕ್ತಾಯಗೊಂಡಿತು. ರಾಮನಗರದ ದರ್ಶನ್ ಗೌಡ ಪ್ರಥಮ, ಕೋಡಂಬಳ್ಳಿ ಠಾಣೆಯ ಗುರುಕಿರಣ್ ದ್ವಿತೀಯ, ಚನ್ನಪಟ್ಟಣ ಗ್ರಾಮಾಂತರ ಠಾಣೆಯ ನಾಗಪ್ಪ ತೃತೀಯ ಸ್ಥಾನ ಗಳಿಸಿದರು. ಮ್ಯಾರಥಾನ್ ವಿಜೇತರಿಗೆ ಪ್ರಶಸ್ತಿ ವಿತರಿಸಲಾಯಿತು.
ಈ ವೇಳೆ ಎಎಸ್ಪಿ ಸುರೇಶ್, ಡಿವೈಎಸ್‌ಪಿಗಳಾದ ಗಿರಿ, ದಿನಕರ ಶೆಟ್ಟಿ, ನಗರ ವೃತ್ತ ನಿರೀಕ್ಷಕ ರವಿಕಿರಣ್, ಪುರ ಪಿಎಸ್‌ಐ ಹರೀಶ್, ಲಿಯಾಕತ್, ಇಲಾಖೆಯ ಎಲ್ಲಾ ಸಿಬ್ಬಂದಿ ಭಾಗವಹಿಸಿದ್ದರು.ಪೋಟೊ೧೦ಸಿಪಿಟಿ೩: ಪೊಲೀಸ್ ಇಲಾಖೆ ಆಯೋಜಿಸಿದ್ದ ಮ್ಯಾರಥಾನ್ ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ ಹಸಿರು ನಿಶಾನೆ ತೋರಿ ಚಾಲನೆ ನೀಡಿದರು.