ಸಾರಾಂಶ
ಜಿಲ್ಲೆಯ ಜನರ ಪೊರೆಯುತ್ತಿರುವ ತಾಯಿ ವೇದಾವತಿ ನೀರು ಸ್ವೇಚ್ಚಾಚಾರ ಬಳಕೆಗೆ ಕಡಿವಾಣ ಹಾಕದಿದ್ರೆ ಭವಿಷ್ಯದಲ್ಲಿ ಸಂಕಷ್ಟ ಸಾಧ್ಯತೆಚಿಕ್ಕಪ್ಪನಹಳ್ಳಿ ಷಣ್ಮುಖ
ಕನ್ನಡಪ್ರಭ ವಾರ್ತೆ ಚಿತ್ರದುರ್ಗ70 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ, 10 ಬ್ಯಾರೇಜುಗಳು, ಹದಿನಾಲ್ಕುವರೆ ಟಿಎಂಸಿ ನೀರು ಬಳಕೆಯ ಅವಕಾಶಗಳನ್ನು ತಮ್ಮದಾಗಿಸಿಕೊಂಡಿರುವ ಹಿರಿಯೂರು ತಾಲೂಕಿನ ಮಂದಿಗೆ ಇನ್ನೂ ಸಮಾಧಾನವಾಗಿಲ್ಲ. ಹೆಚ್ಚುವರಿಯಾಗಿ ಅರ್ಧ ಟಿಎಂಸಿ ನೀರಿಗಾಗಿ ವ್ಯರ್ಥ ಹೋರಾಟ ಕೈಗೆತ್ತಿಕೊಂಡು ಫಲಪ್ರದವಾಗದೆ ಸುಮ್ಮನಾಗಿದ್ದಾರೆ. ವಾಣಿ ವಿಲಾಸ ಸಾಗರ ಹಿರಿಯೂರು ತಾಲೂಕಿನ ಸಾರ್ವಭೌಮತ್ವವಲ್ಲ. ಜಿಲ್ಲೆಯ 721 ಹಳ್ಳಿ, ಮೂರು ನಗರ ಪ್ರದೇಶಗಳ ಜನರ ಕುಡಿವ ನೀರಿನ ದಾಹ ಇಂಗಿಸುವ ಮಹಾತಾಯಿ ಆಕೆ. ನೀರನ್ನು ಮಿತವಾಗಿ ಬಳಸಿಕೊಳ್ಳಲು ಸೂಕ್ತ ಮಾರ್ಗೋಪಾಯ ಹುಡುಕದಿದ್ದರೆ ಭವಿಷ್ಯದಲ್ಲಿ ಕೃಷಿಗೆ ನೀರು ಕಳೆದುಕೊಳ್ಳಬೇಕಾಗುತ್ತದೆ.
ವಿವಿ ಸಾಗರ ಜಲಾಶಯವ ಆಧುನೀಕರಣ ಮಾಡಿ ಹನಿ ನೀರಾವರಿ ವ್ಯವಸ್ಥೆ ಜಾರಿಗೆ ತರಲು ಡಿಪಿಆರ್ ತಯಾರು ಮಾಡಲಾಗಿದೆ. ಇದಲ್ಲದೇ ಭದ್ರಾ ಮೇಲ್ದಂಡೆ ಯೋಜನೆಯಡಿ ಕೂಡಾ 50 ಸಾವಿರ ಹೆಕ್ಟೇರು ಪ್ರದೇಶಕ್ಕೆ ಹನಿ ನೀರಾವರಿ ಸೌಲಭ್ಯ ಕಲ್ಪಿಸಲಾಗುತ್ತಿದೆ. ನೀರಿನ ಮಿತವ್ಯಯ ಮಾಡುವ ಉದ್ದೇಶದಿಂದ ನೀರಾವರಿ ನಿಗಮ ಇಂತಹದ್ದೊಂದು ಕಾರ್ಯಕ್ಕೆ ಮುಂದಾಗಿದೆ. ಆದರೆ ಹಿರಿಯೂರಿನ ಕೆಲ ಹೋರಾಟಗಾರರು ಡ್ರಿಪ್ ಅಳವಡಿಕೆಗೆ ಅಡ್ಡಗಾಲು ಹಾಕುತ್ತಿದ್ದಾರೆ. ಇಂತಹ ಅತಿರೇಕದ ನಡವಳಿಕೆಗಳಿಗೆ ನೀರಾವರಿ ನಿಗಮದ ಅಧಿಕಾರಿಗಳು ಬೇಸತ್ತಿದ್ದಾರೆ ಎನ್ನಲಾಗಿದೆ.ವಿವಿ ಸಾಗರ ಜಲಾಶಯದಿಂದ ಜಿಲ್ಲೆಯ ವಿವಿಧ ತಾಲೂಕುಗಳ ಕುಡಿವ ನೀರಿಗಾಗಿ ಒಟ್ಟು 2.368 ಟಿಎಂಸಿ ನೀರು ಕಾಯ್ದಿರಿಸಲಾಗಿದೆ. ಚಳ್ಳಕೆರೆ ವಿಧಾನಸಭೆ ಕ್ಷೇತ್ರದ ಬ್ಯಾರೇಜುಗಳ ಭರ್ತಿ ಮಾಡಲು 0.25 ಟಿಎಂಸಿ (ಅರ್ಧದಷ್ಟು ನೀರನ್ನು ಹಿರಿಯೂರು ಬ್ಯಾರೇಜುಗಳು ಕುಡಿಯುತ್ತವೆ) ನೀರು ಕಾಯ್ದಿರಿಸಲಾಗಿದೆ. ಉಳಿದಂತೆ ಹಿರಿಯೂರು, ಚಳ್ಳಕೆರೆ, ಚಿತ್ರದುರ್ಗ ನಗರ, ಡಿಆರ್‌ಡಿಒ, ಐಐಎಸ್‌ಸಿ, ಬಿಎಎಆರ್ ಸಂಸ್ಥೆ ಸೇರಿದಂತೆ ಮಾರ್ಗದ 18 ಹಳ್ಳಿಗಳ ಕುಡಿವ ನೀರಿಗಾಗಿ ವಾರ್ಷಿಕ 0.770 ಟಿಎಂಸಿ ಹಾಗೂ 0.210 ಟಿಎಂಸಿ ನೀರು ಬಳಕೆಯಾಗುತ್ತಿದೆ.
ಹಿರಿಯೂರು ತಾಲೂಕಿನ ಐಮಂಗಲ ಮತ್ತು 37 ಹಳ್ಳಿಗಳಿಗೆ ರಾಜೀವಗಾಂಧಿ ಸಬ್ ಮಿಷನ್ ಯೋಜನೆಯಡಿ ಕುಡಿವ ನೀರು ಪೂರೈಕೆ ಹಾಗೂ ಐಮಂಗಲ ಮತ್ತು 37 ಗ್ರಾಮಗಳಿಗೆ ಬಹುಗ್ರಾಮ ಕುಡಿವ ನೀರು ಯೋಜನೆಯಡಿ 0.150 ಟಿಎಂಸಿ ಬಳಕೆಗೆ ಅವಕಾಶ ಮಾಡಿಕೊಳ್ಳಲಾಗಿದೆ. ಇದಲ್ಲದೇ ಹಿರಿಯೂರು ವಿಧಾನಸಭಾ ಕ್ಷೇತ್ರದ 131 ಗ್ರಾಮಗಳಿಗೆ ಬಹುಗ್ರಾಮ ಕುಡಿವ ನೀರು ಯೋಜನೆಯಡಿ ಹೆಚ್ಚುವರಿಯಾಗಿ 0.220 ನೀರು ಬಳಸಲು ವಿವಿ ಸಾಗರ ಜಲಾಶಯದಿಂದ ಅವಕಾಶ ನೀಡಲಾಗಿದೆ.ಹೊಳಲ್ಕೆರೆ ತಾಲೂಕಿನ 198 ಗ್ರಾಮ, ಹಾಗೂ ಹೊಳಲ್ಕೆರೆ ಪಟ್ಟಣಕ್ಕೆ ಕುಡಿವ ನೀರು ಒದಗಿಸಲು ಬಹುಗ್ರಾಮ ಕುಡಿವ ನೀರು ಯೋಜನೆಯಡಿ 0.357 ಟಿಎಂಸಿ ನೀರು ಬಳಸಲು ಅನುಮತಿ ನೀಡಲಾಗಿದೆ. ಚಿತ್ರದುರ್ಗ ಮತ್ತು ಹಿರಿಯೂರು ತಾಲೂಕುಗಳಲ್ಲಿ ಬಿಟ್ಟು ಹೋದ 300 ಜನವಸತಿ ಪ್ರದೇಶಗಳಿಗೆ ಜಲ್ ಜೀವನ್ ಮಿಷನ್ ಯೋಜನೆ ಹಾಗೂ ನಬಾರ್ಡ್, ಆರ್‌ಐಡಿಎಫ್ ಅಡಿ 0.369 ಟಿಎಂಸಿ ನೀರು ಬಳಕೆಗೆ ಪ್ರಸ್ತಾಪಿಸಲಾಗಿದೆ. ವಿಎಸ್‌ಎಲ್ ಸ್ಟೀಲ್ ಲಿಮಿಟೆಡ್ ಕಾರ್ಖಾನೆಗೆ 0.387 ಟಿಎಂಸಿ ಸೇರಿ ಒಟ್ಟಾರೆ 2.368 ಟಿಎಂಸಿ ನೀರನ್ನು ವಾರ್ಷಿಕವಾಗಿ ವಿವಿ ಸಾಗರ ಜಲಾಶಯದಿಂದ ಬಳಕೆ ಮಾಡಿಕೊಳ್ಳಲು ಯೋಜನೆಗಳ ರೂಪಿಸಲಾಗಿದೆ.
ಕೃಷ್ಣ ಟ್ರಿಬ್ಯುನಲ್‌ನಲ್ಲಿ ವಿವಿ ಸಾಗರ ಜಲಾಶಯಕ್ಕೆ 5.25ನಷ್ಟು ನೀರು ಅಲೋಕೇಷನ್ ಕೊಡಲಾಗಿದೆ. ಮಳೆಯಿಂದಲೋ, ಭದ್ರಾ ದಿಂದಲೋ ಹೇಗೋ ಜಲಾಶಯಕ್ಕೆ ನೀರು ಹರಿಸಿ ರೈತರು, ನಗರ ಪ್ರದೇಶದ ಜನರ ಕುಡಿವ ನೀರಿನ ಅಗತ್ಯಗಳ ಪೂರೈಕೆ ಮಾಡಲಾಗುತ್ತಿದೆ. 60 ವರ್ಷಗಳಷ್ಟು ಸುದೀರ್ಘ ಕಾಲ ಜಲಾಶಯ ನೀರು ಕಾಣದೇ ಇದ್ದಾಗ ಮೌನವಾಗಿದ್ದವರು, ಜಲಾಶಯ ಭರ್ತಿಯಾದ ನಂತರ ಹೆಚ್ಚುವರಿ ನೀರು ಬೇಕೆಂದು ಪಟ್ಟು ಹಿಡಿಯುತ್ತಿದ್ದಾರೆ. ನೀರಿಲ್ಲದಿದ್ದರೂ ನೀರಿದೆ ಎಂದು ಹೋರಾಟ ನಡೆಸಿದರೆ ಆಂಧ್ರಪ್ರದೇಶ ಆಕ್ಷೇಪ ಮಾಡಿದರೆ, ಭವಿಷ್ಯದಲ್ಲಿ ವಿವಿ ಸಾಗರ ಜಲಾಶಯ ಕೇವಲ ಕುಡಿವ ನೀರಿಗಾಗಿ ಮೀಸಲಾಗುವ ಸಾಧ್ಯತೆಗಳಿವೆ.