ಪರೀಕ್ಷಾ ಹೊಸ ಮಾದರಿ ಪ್ರಶ್ನೆಪತ್ರಿಕೆ ಪದ್ಧತಿ ಹಿಂಪಡೆಯಲು ಮರಿತಿಬ್ಬೇಗೌಡ ಆಗ್ರಹ

| Published : Sep 22 2024, 01:52 AM IST

ಪರೀಕ್ಷಾ ಹೊಸ ಮಾದರಿ ಪ್ರಶ್ನೆಪತ್ರಿಕೆ ಪದ್ಧತಿ ಹಿಂಪಡೆಯಲು ಮರಿತಿಬ್ಬೇಗೌಡ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

2024- 25ನೇ ಸಾಲಿನ ಪದವಿ ಪೂರ್ವ ಶಿಕ್ಷಣ ಇಲಾಖೆಯ ಶೈಕ್ಷಣಿಕ ವೇಳಾಪಟ್ಟಿಯ ಕಾರ್ಯಸೂಚಿಯಂತೆ 1.6.2024 ರಿಂದ 3.3.2025 ರವರೆಗೂ ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ. ಸೆಪ್ಟೆಂಬರ್ ಅಂತ್ಯಕ್ಕೆ ಶೇ.50 ಹೆಚ್ಚು ಪಠ್ಯಕ್ರಮವನ್ನು ಉಪನ್ಯಾಸಕರು ಮುಗಿಸಿ, ಕಳೆದ ಸಾಲಿನ ನೀಲನಕ್ಷೆಯಂತೆ ಪರೀಕ್ಷಾ ಬೋಧನಾ ಕಾರ್ಯದಲ್ಲಿ ಪ್ರಶ್ನೆ ಪತ್ರಿಕೆಗಳನ್ನು ತಯಾರಿಸಿ, ಮಕ್ಕಳಿಗೆ ವಿವರಣೆಯನ್ನು ನೀಡಿರುತ್ತಾರೆ.

ಕನ್ನಡಪ್ರಭ ವಾರ್ತೆ ಮೈಸೂರು

ಪಿಯುಸಿ ಪರೀಕ್ಷಾ ಹೊಸ ಮಾದರಿ ಪ್ರಶ್ನೆಪತ್ರಿಕೆ ಪದ್ಧತಿ ಹಿಂಪಡೆಯುವಂತೆ ವಿಧಾನ ಪರಿಷತ್ ಮಾಜಿ ಸದಸ್ಯ ಮರಿತಿಬ್ಬೇಗೌಡ ಆಗ್ರಹಿಸಿದ್ದಾರೆ.

ಈ ಸಂಬಂಧ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವರಿಗೆ ಪತ್ರ ಬರೆದಿರುವ ಅವರು, 2024- 25ನೇ ಸಾಲಿನ ಪದವಿ ಪೂರ್ವ ಶಿಕ್ಷಣ ಇಲಾಖೆಯ ಶೈಕ್ಷಣಿಕ ವೇಳಾಪಟ್ಟಿಯ ಕಾರ್ಯಸೂಚಿಯಂತೆ 1.6.2024 ರಿಂದ 3.3.2025 ರವರೆಗೂ ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ. ಸೆಪ್ಟೆಂಬರ್ ಅಂತ್ಯಕ್ಕೆ ಶೇ.50 ಹೆಚ್ಚು ಪಠ್ಯಕ್ರಮವನ್ನು ಉಪನ್ಯಾಸಕರು ಮುಗಿಸಿ, ಕಳೆದ ಸಾಲಿನ ನೀಲನಕ್ಷೆಯಂತೆ ಪರೀಕ್ಷಾ ಬೋಧನಾ ಕಾರ್ಯದಲ್ಲಿ ಪ್ರಶ್ನೆ ಪತ್ರಿಕೆಗಳನ್ನು ತಯಾರಿಸಿ, ಮಕ್ಕಳಿಗೆ ವಿವರಣೆಯನ್ನು ನೀಡಿರುತ್ತಾರೆ.

10.6.2024 ರಂದು ಹೊಸದಾಗಿ ಪರೀಕ್ಷಾ ಮಂಡಳಿಯವರು ಪ್ರಶ್ನೆ ಪತ್ರಿಕೆಗಳ ಮಾದರಿಯನ್ನು (ನೀಲಿ ನಕ್ಷೆ) ಬದಲಾವಣೆ ಮಾಡಿ, ಆದೇಶ ಮಾಡಿರುತ್ತಾರೆ. ಈ ಆದೇಶದಿಂದಾಗಿ ಉಳಿದಿರುವ ಅಲ್ಪ ಅವಧಿಯಲ್ಲಿ ಹೊಸ ಬದಲಾವಣೆ ಬಗ್ಗೆ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಸಿದ್ಧತೆಗಳನ್ನು ಮಾಡುವುದು ತುಂಬಾ ಕಷ್ಟ ಸಾಧ್ಯ. ಇದರಿಂದ ವಿದ್ಯಾರ್ಥಿಗಳ ಭವಿಷ್ಯತ್ತಿನ ಶಿಕ್ಷಣಕ್ಕೆ ತುಂಬಾ ತೊಂದರೆ ಉಂಟಾಗಲಿದೆ.

2021-22, 2022-23, 2023-24ನೇ ಸಾಲುಗಳಲ್ಲಿ ಸತತವಾಗಿ ಪ್ರಶ್ನೆಪತ್ರಿಕೆಗಳ ನೀಲಿ ನಕ್ಷೆಯಲ್ಲಿ ಪರಿಪೂರ್ಣ ಬದಲಾವಣೆ ತರುತ್ತಿರುವುದರಿಂದ ವಿದ್ಯಾರ್ಥಿಗಳ ಭವಿಷ್ಯತ್ತಿನ ಶಿಕ್ಷಣಕ್ಕೆ ತೊಂದರೆ ಆಗುತ್ತಿರುವುದನ್ನು ಗಮನಿಸದೆ ಇರುವುದು ಶೋಚನೀಯ ಸಂಗತಿ. ಈ ಸಾಲಿನಲ್ಲಿ ಡಿಸೆಂಬರ್ ಅಂತ್ಯಕ್ಕೆ ಬೋಧನಾ ಕಾರ್ಯವನ್ನು ಪೂರ್ಣಗೊಳಿಸಬೇಕೆಂದು ಇಲಾಖೆ ಸುತ್ತೋಲೆ ಹೊರಡಿಸಿದೆ. ಆದರೆ, ಶೈಕ್ಷಣಿಕ ವರ್ಷ ಪ್ರಾರಂಭವಾಗಿ 4 ತಿಂಗಳ ನಂತರ ಮುಂಬರುವ ವಾರ್ಷಿಕ ಪರೀಕ್ಷೆಗೆ ಪ್ರಶ್ನೆ ಪತ್ರಿಕೆಯ ನೀಲಿ ನಕ್ಷೆಯನ್ನು ತಯಾರಿಸಿ, ಅದರಲ್ಲಿ ಪರಿಪೂರ್ಣ ಬದಲಾವಣೆ ತಂದಿರುವುದರಿಂದ ವಿದ್ಯಾರ್ಥಿಗಳ ಅದರಲ್ಲೂ ಇಂಗ್ಲಿಷ್ ಮತ್ತು ವಿಜ್ಞಾನ ವಿಷಯಗಳಲ್ಲಿನ ವಿದ್ಯಾರ್ಥಿಗಳ ಭವಿಷ್ಯಕ್ಕೆ ತುಂಬಾ ತೊಂದರೆ ಉಂಟಾಗಲಿದೆ.

ಈ ರೀತಿ ಬದಲಾವಣೆ ಮಾಡುವ ಸಮಯದಲ್ಲಿ ಉಪನ್ಯಾಸಕರಿಗೆ, ಪ್ರಾಂಶುಪಾಲರಿಗೆ ಕನಿಷ್ಟ ಎರಡು ದಿನವಾದರೂ ತರಬೇತಿ/ ಕಾರ್ಯಾಗಾರಗಳನ್ನು ನಡೆಸಿ, ಬೋಧನಾ ಸುಧಾರಣೆಗೆ ಇಲಾಖೆ ಕ್ರಮ ವಹಿಸಬೇಕು. ಪ್ರಶ್ನೆ ಪತ್ರಿಕೆಗಳ ಬದಲಾವಣೆ ಅಗತ್ಯವಿದ್ದರೆ ಶೈಕ್ಷಣಿಕ ವರ್ಷದ ಪ್ರಾರಂಭದಲ್ಲೇ ಪ್ರಕಟಿಸುವುದು ಸೂಕ್ತ. ಈ ಸಂಬಂಧ ಪರೀಕ್ಷಾ ಮಂಡಳಿಗೆ ಕೆಲವು ಉಪನ್ಯಾಸಕರು, ವಿದ್ಯಾರ್ಥಿಗಳು ತೊಂದರೆಗಳ ಬಗ್ಗೆ ಆಕ್ಷೇಪಣೆಗಳನ್ನು ಸಲ್ಲಿಸಿರುತ್ತಾರೆ.

ಹೀಗಾಗಿ, ಈ ಬಗ್ಗೆ ಕೂಡಲೇ ಪುನರ್ ಪರಿಶೀಲಿಸಿ, ಇತ್ತೀಚಿನ ಸುತ್ತೋಲೆಯನ್ನು ಹಿಂಪಡೆದು, ಈ ಹಿಂದಿನಂತೆ ವಾರ್ಷಿಕ ಮಾರ್ಗಸೂಚಿಯಂತೆ ಇಲಾಖೆಯು ಪರೀಕ್ಷೆಯನ್ನು ನಡೆಸಲು ಅನುವು ಮಾಡಿಕೊಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.