ಸಾರಾಂಶ
ಮೈಸೂರು, ಮಂಡ್ಯ, ಚಾಮರಾಜನಗರ ಹಾಗೂ ಹಾಸನ ಜಿಲ್ಲೆಯ ಶಿಕ್ಷಕರ ಮತದಾರರು ನಾಲ್ಕು ಬಾರಿಯಿಂದಲೂ ನನ್ನನ್ನು ಗೆಲ್ಲಿಸಿಕೊಂಡು ಬಂದಿದ್ದಾರೆ. ಮೊದಲ ಬಾರಿಗೆ ಕಾಂಗ್ರೆಸ್ ಪಕ್ಷದಿಂದ ಆಯ್ಕೆ ಮಾಡಿದ್ದೀರಾ, ಎರಡನೇ ಬಾರಿಗೆ ಪಕ್ಷೇತರರಾಗಿ ನಿಂತರೂ ಆಯ್ಕೆ ಮಾಡಿದ್ದೀರಾ. ಮತ್ತೆರಡು ಬಾರಿ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿದಾಗಲೂ ಕೈ ಹಿಡಿದು ಬೆಂಬಲಿಸಿದ್ದೀರಾ, ಈಗ ತವರು ಪಕ್ಷಕ್ಕೆ ಮರಳಿ ಮತ್ತೆ ಸ್ಪರ್ಧೆ ಮಾಡಿದ್ದೇನೆ.
ಕನ್ನಡಪ್ರಭ ವಾರ್ತೆ ಮೈಸೂರು
ಶಿಕ್ಷಕ ಮತದಾರರು ಮೊದಲ ಪ್ರಾಶಸ್ತ್ಯದ ಮತಗಳನ್ನು ನೀಡುವ ಮೂಲಕ ಚುನಾವಣೆಯಲ್ಲಿ ಗೆಲ್ಲಿಸಬೇಕು ಎಂದು ದಕ್ಷಿಣ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮರಿತಿಬ್ಬೇಗೌಡ ಮನವಿ ಮಾಡಿದರು.ನಗರದ ಪಡುವಾರಹಳ್ಳಿ ವಾಲ್ಮೀಕಿ ರಸ್ತೆಯಲ್ಲಿರುವ ಲೀಲಾ ಚೆನ್ನಯ್ಯ ಕಲ್ಯಾಣ ಮಂಟಪದಲ್ಲಿ ಮಂಗಳವಾರ ದಕ್ಷಿಣ ಶಿಕ್ಷಕರ ಕ್ಷೇತ್ರದ ನಾಮಪತ್ರ ಸಲ್ಲಿಕೆಗೂ ಮುನ್ನ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಪಕ್ಷ ಬದಲಾವಣೆ ಮಾಡಿದರೂ ಶಿಕ್ಷಕರ ಸಮಸ್ಯೆಗಳನ್ನು ಪರಿಹರಿಸಲು ನೀಡಿರುವ ಆದ್ಯತೆಯಲ್ಲಿ ಬದಲಾವಣೆಯಾಗಿಲ್ಲ. ಶಿಕ್ಷಕರ ಜೊತೆ ನಿರಂತರ ಸಂಪರ್ಕ ಬಿಟ್ಟರೆ ಬೇರೇನೂ ರಾಜಕಾರಣ ಮಾಡಿಲ್ಲ. ಶಿಕ್ಷಕರಿಗೆ ಎಂದಿಗೂ ಅಪಕೀರ್ತಿ, ಕಳಂಕ ತರುವ ಕೆಲಸ ಮಾಡಲ್ಲ ಎಂದು ಹೇಳಿದರು.ಮೈಸೂರು, ಮಂಡ್ಯ, ಚಾಮರಾಜನಗರ ಹಾಗೂ ಹಾಸನ ಜಿಲ್ಲೆಯ ಶಿಕ್ಷಕರ ಮತದಾರರು ನಾಲ್ಕು ಬಾರಿಯಿಂದಲೂ ನನ್ನನ್ನು ಗೆಲ್ಲಿಸಿಕೊಂಡು ಬಂದಿದ್ದಾರೆ. ಮೊದಲ ಬಾರಿಗೆ ಕಾಂಗ್ರೆಸ್ ಪಕ್ಷದಿಂದ ಆಯ್ಕೆ ಮಾಡಿದ್ದೀರಾ, ಎರಡನೇ ಬಾರಿಗೆ ಪಕ್ಷೇತರರಾಗಿ ನಿಂತರೂ ಆಯ್ಕೆ ಮಾಡಿದ್ದೀರಾ. ಮತ್ತೆರಡು ಬಾರಿ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿದಾಗಲೂ ಕೈ ಹಿಡಿದು ಬೆಂಬಲಿಸಿದ್ದೀರಾ, ಈಗ ತವರು ಪಕ್ಷಕ್ಕೆ ಮರಳಿ ಮತ್ತೆ ಸ್ಪರ್ಧೆ ಮಾಡಿದ್ದೇನೆ. ಮತ್ತೊಮ್ಮೆ ಕಾಂಗ್ರೆಸ್ ನಲ್ಲಿ ಸ್ಪರ್ಧೆ ಮಾಡಲು ಅವಕಾಶ ದೊರೆತಿದೆ ಎಂದು ಅವರು ತಿಳಿಸಿದರು. ಬುದ್ದ, ಬಸವ, ಅಂಬೇಡ್ಕರ್, ಕುವೆಂಪು ಅವರ ವಿಚಾರಧಾರೆಯನ್ನು ಅನುಸರಿಸಿಕೊಂಡು ಶಿಕ್ಷಕರ ಕ್ಷೇತ್ರದಲ್ಲಿ ಕೆಲಸ ಮಾಡಿದ್ದೇನೆ. ಶಿಕ್ಷಣ ಕ್ಷೇತ್ರದ ಗೌರವ ಘನತೆಯನ್ನು ಉಳಿಸಿದ್ದೇನೆ. 24 ವರ್ಷಗಳ ಕಾಲದಿಂದಲೂ ಶಿಕ್ಷಕರ ಒಡನಾಟ ಬಿಟ್ಟರೆ ಬೇರೇನೂ ಇಲ್ಲ ಎಂದರು.ಶಿಕ್ಷಕರ ಕ್ಷೇತ್ರದ ಬಗ್ಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಅಪಾರ ಕಾಳಜಿಯನ್ನು ಹೊಂದಿದ್ದಾರೆ. ಒಪಿಎಸ್ ವ್ಯವಸ್ಥೆ ಮರು ಜಾರಿಗೆ ತರಲು ತೀರ್ಮಾನ ಮಾಡಿರುವ ಜೊತೆಗೆ 7ನೇ ವೇತನ ಆಯೋಗ ಜಾರಿಗೆ ತೀರ್ಮಾನ ಮಾಡಿದ್ದಾರೆ. ಬಡ್ತಿ ಶಿಕ್ಷಕರ ವೇತನ ಹೆಚ್ಚಳಕ್ಕೆ ಕ್ರಮಗೊಂಡಿದೆ. ಶಿಕ್ಷಕರ ವೇತನ ಹೆಚ್ಚಳಕ್ಕೆ ಸಂಬಂಧಿಸಿದಂತೆ 170 ಕೋಟಿ ರೂ. ಮಂಜೂರು ಮಾಡಲಾಗಿದೆ ಎಂದು ಅವರು ಹೇಳಿದರು. ಮಹಿಳಾ ಶಿಕ್ಷಕಿಯರಿಗೆ ಉಚಿತ ಬಸ್ ವ್ಯವಸ್ಥೆ ಕಲ್ಪಿಸಿದೆ. ಶಿಕ್ಷಕರ ಕ್ಷೇತ್ರದಲ್ಲಿ ಸುಧಾರಣೆ ಮಾಡಲು ಹಲವಾರು ಇದೆ. ವಿಶ್ವವಿದ್ಯಾನಿಲಯಗಳಲ್ಲಿ ಸಂಶೋಧನೆ ನಶಿಸಿ ಹೋಗುತ್ತಿದೆ. ಮೈಸೂರು ವಿವಿ ಆರ್ಥಿಕ ಸೌಲಭ್ಯದಿಂದ ನರಳುತ್ತಿರುವ ಕಾರಣ ಮುಂದೆ ಗಮನಹರಿಸಿ ಅನುದಾನ ಬಿಡುಗಡೆ ಮಾಡಿಸುವುದರ ಜೊತೆಗೆ ಬೋಧಕ, ಬೋಧಕೇತರ ಸಿಬ್ಬಂದಿ ಸಮಸ್ಯೆ ನೀಗಿಸಲು ಕ್ರಮ ವಹಿಸುವೆ ಎಂದು ಅವರು ಭರವಸೆ ನೀಡಿದರು. ಕೆಪಿಸಿಸಿ ಕಾರ್ಯಾಧ್ಯಕ್ಷ ತನ್ವೀರ್ ಸೇಠ್, ಶಾಸಕರಾದ ರಮೇಶ್ ಬಾಬು ಬಂಡಿಸಿದ್ದೇಗೌಡ, ಕೆ. ಹರೀಶ್ ಗೌಡ, ಡಿ. ರವಿಶಂಕರ್, ಎಂ.ಪಿ. ನರೇಂದ್ರಸ್ವಾಮಿ, ಪುಟ್ಟಣ್ಣ, ಮಧು ಜಿ. ಮಾದೇಗೌಡ, ಎಐಸಿಸಿ ಪ್ರಧಾನ ಕಾರ್ಯದರ್ಶಿ ರೋಸಿ ಜಾನ್, ಮಾಜಿ ಸಚಿವ ಕೋಟೆ ಎಂ. ಶಿವಣ್ಣ, ಮಾಜಿ ಶಾಸಕ ಕೆ.ಬಿ. ಚಂದ್ರಶೇಖರ್, ಪ್ರಕಾಶ್, ಕಾಂಗ್ರೆಸ್ ನಗರಾಧ್ಯಕ್ಷ ಆರ್. ಮೂರ್ತಿ, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಲತಾ ಸಿದ್ದಶೆಟ್ಟಿ, ನಗರಾಧ್ಯಕ್ಷೆ ಪುಷ್ಪಲತಾ ಚಿಕ್ಕಣ್ಣ, ಕೆಪಿಸಿಸಿ ವಕ್ತಾರ ಎಚ್.ಎ. ಚೆಂಕಟೇಶ್, ಎಂಡಿಎ ಮಾಜಿ ಅಧ್ಯಕ್ಷ ಸಿ. ಬಸವೇಗೌಡ ಮೊದಲಾದವರು ಇದ್ದರು.----ಕೋಟ್...ಎಲ್ಲಾ ವರ್ಗದ ಶಿಕ್ಷಕರ ಸಮಸ್ಯೆಗಳನ್ನು ಅರಿತು ನಿರಂತರ ಕೆಲಸ ಮಾಡಿದ್ದೇನೆ. ಪಕ್ಷ ಬದಲಾವಣೆ ಮಾಡಿದರೂ ಶಿಕ್ಷಕರ ಆದ್ಯತೆಯಲ್ಲಿ ಬದಲು ಮಾಡಿಕೊಂಡಿಲ್ಲ. ಶಿಕ್ಷಕರ ಸಮಸ್ಯೆಗಳನ್ನು ಅರಿತು ಸದನದ ಒಳಗೆ- ಹೊರಗೆ ಹೋರಾಟ ಮಾಡಿದ್ದೇನೆ. ಬೇಡಿಕೆ ಈಡೇರಿಸುವ ವಿಚಾರದಲ್ಲಿ ಹೋರಾಟ ಮಾಡದೆ ಸುಮ್ಮನಾಗಿಲ್ಲ.- ಮರಿತಿಬ್ಬೇಗೌಡ, ಕಾಂಗ್ರೆಸ್ ಅಭ್ಯರ್ಥಿ, ದಕ್ಷಿಣ ಶಿಕ್ಷಕರ ಕ್ಷೇತ್ರ