ಸಾರಾಂಶ
ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ
ಪ್ರತಿಯೊಬ್ಬರ ಜೀವನದಲ್ಲಿ ಮದುವೆ ಪ್ರಮುಖ ಘಟ್ಟವಾಗಿದೆ. ಮಠ-ಮಾನ್ಯಗಳಲ್ಲಿ ನಡೆಯುವ ಸಾಮೂಹಿಕ ವಿವಾಹದಲ್ಲಿ ಮದುವೆಯಾಗುವ ಸೌಭಾಗ್ಯ ಸಿಗುತ್ತದೆ ಎಂದು ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಹೇಳಿದರು.ತಾಲೂಕಿನ ಮುತ್ತಗಿ ಗ್ರಾಮದ ಸಂಸ್ಥಾನ ಹಿರೇಮಠದ ಲಿಂ.ರುದ್ರಮುನಿ ಶಿವಾಚಾರ್ಯರ ೮೭ನೇ ಪುಣ್ಯಾರಾಧನೆಯ ಜಾತ್ರಾಮಹೋತ್ಸವದಂಗವಾಗಿ ಹಮ್ಮಿಕೊಂಡಿದ್ದ ಧರ್ಮಸಭೆ, ಸಾಮೂಹಿಕ ವಿವಾಹ ಹಾಗೂ ಪ್ರವಚನ ಮಹಾಮಂಗಲ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮಾನವನ ಬದುಕಿನಲ್ಲಿ ನಾಮಕರಣ, ಲಿಂಗಧಾರಣೆ, ಜಡೆ ತೆಗೆಯುವ ಕಾರ್ಯ, ಸೀಮಂತ, ಅಂತಿಮ ಕಾರ್ಯ ಸೇರಿದಂತೆ ವಿವಿಧ ಸಂಸ್ಕಾರಗಳು ನಿರಂತರವಾಗಿ ನಡೆಯುತ್ತವೆ. ಇದರಲ್ಲಿ ಮದುವೆ ಸಂಸ್ಕಾರ ಪ್ರಮುಖವಾಗಿದೆ ಎಂದರು.ಜಾಲಹಳ್ಳಿಯ ಬೃಹ್ಮನ್ಮಠದ ವಿದ್ಯಾಮಾನ ಶಿವಭಿನವ ಜಗರಾಧ್ಯ ಜಯಶಾಂತಲಿಂಗೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ದೇಹತ್ಯಾಗ ಮಾಡುವ ಮುನ್ನ ಯಾವ ರೀತಿಯಾಗಿ ಬದುಕುಬೇಕೆಂಬುದನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕು. ಆಧ್ಯಾತ್ಮಿಕ ಅಂಶಗಳನ್ನು ಅರಿತುಕೊಂಡು ನಡೆದರೆ ಜೀವನ ಪಾವನವಾಗುತ್ತದೆ. ಮಹಾತ್ಮರ ಚರಿತೆಯನ್ನು ನೋಡಿದಾಗ ಮಹಾತ್ಮರು ದೇಹತ್ಯಾಗ ಮಾಡಿದರೂ ಅವರ ಆತ್ಮ ಯಾವಾಗಲು ಪ್ರಕಾಶಿಸುತ್ತಿರುತ್ತದೆ. ಈ ಮೂಲಕ ಭಕ್ತರಿಗೆ ಅವರ ಶುಭಾಶೀರ್ವಾದ ಸದಾ ಸಿಗುತ್ತದೆ. ಶ್ರೀಮಠದ ಲಿಂ.ರುದ್ರಮುನಿ ಶಿವಾಚಾರ್ಯರು ದೇಹತ್ಯಾಗ ಮಾಡಿ ೮೭ ವರ್ಷವಾದರೂ ಸಹ ಅವರ ಆತ್ಮ ಇಂದಿಗೂ ಭಕ್ತರಿಗೆ ಆಶೀರ್ವಾದ ನೀಡುತ್ತಿದೆ ಎಂಬುದನ್ನು ತಿಳಿಸಿದರು. ಶ್ರೀಮಠದ ರುದ್ರಮನಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಧಾರ್ಮಿಕತೆಯಿಂದ ನಮಗೆ ಸಂಸ್ಕಾರ, ಧರ್ಮವಂತ-ನೀತಿವಂತರಾಗಲು ಪೂರಕ. ಇದರಿಂದಾಗಿ ಮನಸ್ಸು ಪರಿವರ್ತನೆಯಾಗಿ ಜೀವನ ಸುಂದರವಾಗುತ್ತದೆ ಎಂದು ಹೇಳಿದರು.
ಬಸವನಬಾಗೇವಾಡಿಯ ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ, ಮನಗೂಳಿಯ ಅಭಿನವ ಸಂಗನಬಸವ ಶಿವಾಚಾರ್ಯ ಸ್ವಾಮೀಜಿ, ಮುಖಂಡ ರಮೇಶ ಸೂಳಿಭಾವಿ ಇತರರು ಮಾತನಾಡಿದರು.ತಿಕೋಟಾದ ಶಿವಬಸವ ಶಿವಾಚಾರ್ಯ ಸ್ವಾಮೀಜಿ, ಕೊಡೆಕಲ್ಲಮಠದ ಈರಸಂಗಯ್ಯ ಸ್ವಾಮೀಜಿ, ಪ್ರವಚನಕಾರ ತಾಳಿಕೋಟಿಯ ಮಹಾಂತದೇವರು, ಮುಖಂಡರಾದ ಸುರೇಶ ಹಾರಿವಾಳ, ಪ್ರೇಮಕುಮಾರ ಮ್ಯಾಗೇರಿ ಇತರರು ಇದ್ದರು. ವೈ.ಕೆ.ಪತ್ತಾರ ಪ್ರಾಸ್ತವಿಕವಾಗಿ ಮಾತನಾಡಿದರು. ಆರ್.ಬಿ.ಬ್ಯಾಕೋಡ ಸ್ವಾಗತಿಸಿ, ನಿರೂಪಿಸಿದರು. ಸಾಮೂಹಿಕ ವಿವಾಹದಲ್ಲಿ ಒಂದು ಜೋಡಿ ನವದಾಂಪತ್ಯಕ್ಕೆ ಕಾಲಿಟ್ಟಿತ್ತು. ಈ ಸಂದರ್ಭದಲ್ಲಿ ಜಾತ್ರೆಗೆ ಸಹಕಾರ ನೀಡಿದವರನ್ನು ಶ್ರೀಮಠದಿಂದ ಸನ್ಮಾನಿಸಲಾಯಿತು.