ತಾಲೂಕಿನ ಮಾರುಕೇರಿ ಗ್ರಾಪಂ ಗ್ರಾಮ ಸಭೆಯಲ್ಲಿ ಗ್ರಾಮಸ್ಥರು ಊರಿನ ಹಲವು ಅಭಿವೃದ್ಧಿ ಕಾರ್ಯಗಳು, ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿ ಪರಿಹಾರಕ್ಕೆ ಆಗ್ರಹಿಸಿದರು.
ಕನ್ನಡಪ್ರಭ ವಾರ್ತೆ ಭಟ್ಕಳ
ತಾಲೂಕಿನ ಮಾರುಕೇರಿ ಗ್ರಾಪಂ ಗ್ರಾಮ ಸಭೆಯಲ್ಲಿ ಗ್ರಾಮಸ್ಥರು ಊರಿನ ಹಲವು ಅಭಿವೃದ್ಧಿ ಕಾರ್ಯಗಳು, ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿ ಪರಿಹಾರಕ್ಕೆ ಆಗ್ರಹಿಸಿದರು.ಸಭೆಯಲ್ಲಿ ಮಾರುಕೇರಿ ಗ್ರಾಪಂ ವ್ಯಾಪ್ತಿಯಲ್ಲಿ ರೈತರು ಕಷ್ಟ ಪಟ್ಟು ಬೆಳೆದ ಬೆಳೆ ಮಂಗ, ಕ್ಯಾಚಾಳ, ಕಾಡು ಹಂದಿಗಳ ಪಾಲಾಗುತ್ತಿದ್ದು, ಈ ಬಗ್ಗೆ ಸಾಕಷ್ಟು ಗ್ರಾಮ ಸಭೆ, ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಕಾಡು ಪ್ರಾಣಿಗಳ ಬೆಳೆ ಲೂಟಿಗೆ ರೈತರು ಹೈರಾಣಾಗಿದ್ದಾರೆ. ಬೆಳೆ ಕಳೆದುಕೊಂಡು ರೈತರು ಸಂಕಷ್ಟದಲ್ಲಿದ್ದಾರೆ. ಅರಣ್ಯ ಇಲಾಖೆಯಿಂದ ಕಾಡು ಪ್ರಾಣಿ ಬೆಳೆ ಲೂಟಿಯ ಬಗ್ಗೆ ಸಮರ್ಪಕ ಸರ್ವೆ ನಡೆಸಬೇಕು. ಬೆಳೆ ಹಾನಿಯಾಗಿ ತೊಂದರೆಯಲ್ಲಿರುವ ರೈತರಿಗೆ ಸೂಕ್ತ ಪರಿಹಾರ ಒದಗಿಸಬೇಕು. ಕಾಡು ಪ್ರಾಣಿಗಳ ಲೂಟಿಗೆ ಕಡಿವಾಣ ಹಾಕುವ ಕೆಲಸ ಅರಣ್ಯ ಇಲಾಖೆ ಮಾಡಬೇಕೆಂದು ರೈತರ ಪರವಾಗಿ ಗಣಪತಿ ಮಂಜುನಾಥ ಹೆಗಡೆ ಉಪಸ್ಥಿತರಿದ್ದ ಅರಣ್ಯ ಇಲಾಖೆಯ ಅಧಿಕಾರಿಗಳಲ್ಲಿ ಒತ್ತಾಯಿಸಿದರು.
ಕಾಡು ಪ್ರಾಣಿ ಬೆಳೆ ಲೂಟಿ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತರುವುದಾಗಿ ಉಪವಲಯ ಅರಣ್ಯಾಧಿಕಾರಿ ಸಭೆಗೆ ತಿಳಿಸಿದರು. ಗ್ರಾಪಂ ಅಧ್ಯಕ್ಷರು ಮತ್ತು ಉಪಾಧ್ಯಕ್ಷರೂ ಸಹ ಇದನ್ನು ಗಂಭೀರವಾಗಿ ಪರಿಗಣಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.ಜೆಜೆಎಂ ಪೈಪ್ ಲೈನ್ ಅಳವಡಿಕೆಗಾಗಿ ರಸ್ತೆ ಕೊರೆಯಲಾಗಿದ್ದು, ಸಮರ್ಪಕವಾಗಿ ಮುಚ್ಚುವ ಕೆಲಸ ಮಾಡಿಲ್ಲ. ರಸ್ತೆ ಬದಿಗೆ ತೋಡಿದ ಗುಂಡಿಯನ್ನೂ ಸಹ ಸಮರ್ಪಕವಾಗಿ ಮುಚ್ಚಿಲ್ಲ. ಇದರಿಂದ ಸಂಚರಿಸುವ ಪಾದಾಚಾರಿಗಳು ಮತ್ತು ವಾಹನಿಗರಿಗೆ ತೊಂದರೆ ಆಗುತ್ತಿದೆ ಎಂದು ಸಾರ್ವಜನಿಕರು ದೂರಿದರು.
ಸಾರ್ವಜನಿಕರು ರಸ್ತೆ, ಕುಡಿಯುವ ನೀರುವ, ಬೀದಿ ದೀಪದ ಬಗ್ಗೆ ಧ್ವನಿ ಎತ್ತಿ ಆದಷ್ಟು ಬೇಗ ಬಾಕಿ ಇರುವ ಕಾಮಗಾರಿಗಳನ್ನು ಪೂರ್ಣಗೊಳಿಸಲು ಆಗ್ರಹಿಸಿದರು.ಅಭಿವೃದ್ಧಿ ಕಾಮಗಾರಿಗಳ ಸ್ಥಿತಿಗತಿ, ಬಾಕಿ ಉಳಿದಿರುವ ಕೆಲಸಗಳು ಹಾಗೂ ಯೋಜನೆಗಳ ಕುರಿತು ಅಧಿಕಾರಿಗಳು ವಿವರ ನೀಡಿದರು.
ಮುಂದಿನ ಸಾಲಿನ ಪಂಚಾಯತ್ ಅಭಿವೃದ್ಧಿ ಯೋಜನೆಗಳ ತಯಾರಿಕೆಗೆ ಸಂಬಂಧಿಸಿದಂತೆ ಸಾರ್ವಜನಿಕರ ಸಲಹೆ–ಸೂಚನೆ ಸಂಗ್ರಹಿಸಲಾಯಿತು. ಗ್ರಾಮದಲ್ಲಿ ಶಿಕ್ಷಣ, ಆರೋಗ್ಯ, ನೈರ್ಮಲ್ಯ, ಕುಡಿಯುವ ನೀರು ಹಾಗೂ ಮಹಿಳಾ–ಮಕ್ಕಳ ಕಲ್ಯಾಣಕ್ಕೆ ಸಂಬಂಧಿಸಿದ ಹೊಸ ಯೋಜನೆಗಳನ್ನು ಜಾರಿಗೆ ತರಲು ಹಾಗೂ ಕೆಲ ಯೋಜನೆಗಳಲ್ಲಿ ಬಲಪಡಿಸುವ ಕ್ರಮಕ್ಕೆ ಸದಸ್ಯರು ಒಮ್ಮತ ವ್ಯಕ್ತಪಡಿಸಿದರು.ಸಭೆಯಲ್ಲಿ ಗ್ರಾಮ ಹಲವು ಸಮಸ್ಯೆಗಳ ಬಗ್ಗೆ ವಿಸ್ತ್ರತ ಚರ್ಚೆ ನಡೆಯಿತು. ವಿವಿಧ ಇಲಾಖೆಯ ಅಧಿಕಾರಿಗಳು ತಮ್ಮ ಇಲಾಖೆಗೆ ಸಂಬಂಧಿಸಿದ ಯೋಜನೆ ಬಗ್ಗೆ ತಿಳಿಸಿದರು. ಸಭೆಯ ಅಧ್ಯಕ್ಷತೆಯನ್ನು ಗ್ರಾಪಂ ಅಧ್ಯಕ್ಷೆ ನಾಗವೇಣಿ ಗೊಂಡ ವಹಿಸಿದ್ದರು. ಸಭೆಯಲ್ಲಿ ಉಪಾಧ್ಯಕ್ಷ ಎಂ.ಡಿ. ನಾಯ್ಕ, ಸದಸ್ಯರಾದ ಮಾಸ್ತಿ ಗೊಂಡ, ನಾರಾಯಣ ಗೊಂಡ, ಸುಧಾ ಹೆಗಡೆ, ಮೋಹಿನಿ ಗೊಂಡ, ನಾಗವೇಣಿ ಮೊಗೇರ, ಪಿಡಿಒ ಉದಯ ಬೋರ್ಕರ್ , ಶಿಕ್ಷಣ ಇಲಾಖೆಯ ಸುರೇಶ, ಕಾರ್ಯದರ್ಶಿ ಲಿಂಗಪ್ಪ ಮುಂತಾದವರಿದ್ದರು.