ಮರುಳ ಶಂಕರ ದೇವರ ಬದುಕು ತೆರೆದ ಪುಸ್ತಕವಿದ್ದಂತೆ: ಶಿವಬಸವ ಸ್ವಾಮೀಜಿ

| Published : Aug 26 2024, 01:43 AM IST

ಸಾರಾಂಶ

ಮಹಾತಪಸ್ವಿ ಮುರುಘೇಂದ್ರ ಶಿವಯೋಗಿಗಳ ಶಿಷ್ಯರಾಗಿದ್ದ ಮರುಳ ಶಂಕರ ದೇವರು ಮೌನವಾಗಿಯೇ ಇದ್ದುಕೊಂಡು ಪರಿಶುದ್ಧ ಮನಸಿನಿಂದ ಅವರ ಸೇವೆ ಮಾಡುತ್ತ ಭಕ್ತರನ್ನು ಉದ್ಧರಿಸಿದ್ದಾರೆ ಎಂದು ಗಚ್ಚಿನ ಮಠದ ಶಿವಬಸವ ಸ್ವಾಮೀಜಿ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ಅಥಣಿ

ಮಹಾತಪಸ್ವಿ ಮುರುಘೇಂದ್ರ ಶಿವಯೋಗಿಗಳ ಶಿಷ್ಯರಾಗಿದ್ದ ಮರುಳ ಶಂಕರ ದೇವರು ಮೌನವಾಗಿಯೇ ಇದ್ದುಕೊಂಡು ಪರಿಶುದ್ಧ ಮನಸಿನಿಂದ ಅವರ ಸೇವೆ ಮಾಡುತ್ತ ಭಕ್ತರನ್ನು ಉದ್ಧರಿಸಿದ್ದಾರೆ. ಈ ಭಾಗದಲ್ಲಿ ನಡೆದಾಡುವ ದೇವರು ಎನಿಸಿಕೊಂಡಿದ್ದ ಮರುಳು ಶಂಕರ ದೇವರ ಬದುಕು ನಮ್ಮೆಲ್ಲರಿಗೆ ತೆರೆದ ಪುಸ್ತಕವಿದ್ದಂತೆ ಎಂದು ಗಚ್ಚಿನ ಮಠದ ಶಿವಬಸವ ಸ್ವಾಮೀಜಿ ಅಭಿಪ್ರಾಯಪಟ್ಟರು.

ಶನಿವಾರ ಅಥಣಿ ಪಟ್ಟಣದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ನಂ.1ರಲ್ಲಿ ಮೌನಯೋಗಿ ಮರುಳ ಶಂಕರ ದೇವರ ಸಭಾಭವನ ಲೋಕಾರ್ಪಣೆಗೊಳಿಸಿ, ಸ್ಮರಣೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು. ಅಥಣಿಯ ಮುರುಘೇಂದ್ರ ಶಿವಯೋಗಿಗಳಿಂದ ಮರುಜನ್ಮ ಪಡೆದ ಮರುಳಶಂಕರ ದೇವರು ಶ್ರೀಮಠದಲ್ಲಿ ಇದ್ದುಕೊಂಡು ಭಕ್ತರು ನೀಡುವ ಕಜ್ಜಾಯ ಮತ್ತು ಕಾಣಿಕೆಗಳನ್ನು ಕೆರೆಯ ನೀರು ಕೆರೆಗೆ ಚೆಲ್ಲಿದಂತೆ ಸದ್ಬಕ್ತರಿಗೆ ಮರಳಿ ನೀಡಿ ಆಶೀರ್ವದಿಸುತ್ತಿದ್ದರು. ಮಠದ ಪೀಠಾಧಿಪತಿಗಳಾಗದೇ ಮೌನವಾಗಿ ಇದ್ದುಕೊಂಡು ಬಡವ ಶ್ರೀಮಂತ, ಜಾತಿ, ಧರ್ಮ ಭೇದವಿಲ್ಲದೆ ಕರೆದವರ ಮನೆಗೆ ಹೋಗಿ ಆಶೀರ್ವದಿಸುತ್ತಿದ್ದರು. ಶತಾಯುಷಿಗಳಾಗಿ ಬದುಕಿದ ಮರುಳ ಶಂಕರ ದೇವರು ಈ ಶಾಲೆಯಲ್ಲಿ ಶಿಕ್ಷಣ ಪಡೆದಿರುವುದು ನಮ್ಮೆಲ್ಲರಿಗೆ ಹೆಮ್ಮೆಯ ಸಂಗತಿ ಎಂದರು.

ಸಾಹಿತಿ ಶಿಕ್ಷಕಿ ಡಾ. ಅರ್ಚನಾ ಅಥಣಿ ಉಪನ್ಯಾಸ ನೀಡಿ ಮಾತನಾಡಿ, 12ನೇ ಶತಮಾನದಲ್ಲಿ ಬಸವಾದಿ ಶರಣರು ಸ್ಥಾಪನೆ ಮಾಡಿದ ಅನುಭವ ಮಂಟಪವೇ ಮೊದಲ ಸಂಸತ್ತು. ಹಿಂದಿನ ಕಾಲದಲ್ಲಿ ಮೌನವಾಗಿ ಇದ್ದುಕೊಂಡು 12 ವರ್ಷಗಳ ಕಾಲ ಸೇವೆ ಮಾಡಿದ ಮರಳುಶಂಕರ ದೇವರ ಪರಂಪರೆಯೇ ಅಥಣಿಯ ಮುರುಘೇಂದ್ರ ಶಿವಯೋಗಿಗಳ ಪರಮಶಿಷ್ಯರಾದ ಮರಳು ಶಂಕರ ದೇವರು. ಅಥಣಿಯಲ್ಲಿ ನಡೆದಾಡುವ ದೇವರು ಎನಿಸಿಕೊಂಡಿದ್ದ ಅವರು ಶತಾಯುಷಿಗಳಾಗಿ ಬದುಕಿದವರು. ಅವರು ಶಿಕ್ಷಣ ಪಡೆದ ಶಾಲೆಯಲ್ಲಿ ಇಂದು ಅವರ ಹೆಸರಿನಲ್ಲಿ ಸಭಾಭವನ ಲೋಕಾರ್ಪಣೆ ಆಗುತ್ತಿರುವುದು ನಮ್ಮೆಲ್ಲರಿಗೆ ಖುಷಿ ತಂದಿದೆ. ಈ ಶಾಲೆಯಲ್ಲಿ ನಾನು ಕೂಡ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ ಸಂತಸವಿದೆ ಎಂದು ಹೇಳಿದರು. ಯುವ ಮುಖಂಡ, ಉದ್ಯಮಿ ಶಿವಕುಮಾರ ಸವದಿ ಮಾತನಾಡಿ, ಮರುಳ ಶಂಕರ ದೇವರು ಒಬ್ಬ ಶ್ರೇಷ್ಠ ಜಲ ಸಂಶೋಧಕರಾಗಿದ್ದರು. ನಮ್ಮ ಕಾರ್ಖಾನೆ ಆವರಣದಲ್ಲಿ ಅವರು ಗುರುತಿಸಿದ ಕೊಳವೆಬಾವಿ ಇಂದಿಗೂ ನೀರು ಒದಗಿಸುತ್ತಿರುವುದು ಒಂದು ಪವಾಡ ಎನ್ನಬಹುದು ಎಂದರು.

ಇದೇ ವೇಳೆ ಮರುಳಶಂಕರ ದೇವರ ಸಭಾಭವನ ಅಭಿವೃದ್ಧಿಗೆ ಕೊಡುಗೆ ನೀಡಿದ ದಾನಿಗಳಿಗೆ ಮತ್ತು ಶಿಕ್ಷಕಿಯರಿಗೆ ಸನ್ಮಾನಿಸಲಾಯಿತು. ಈ ವೇಳೆ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಜಿ.ಎಂ ಹಿರೇಮಠ, ಶಾಲೆಯ ಮುಖ್ಯಶಿಕ್ಷಕಿ ಎ.ವೈ. ಧನಗೊಂಡ, ನಿವೃತ್ತ ಶಿಕ್ಷಕ ಎಸ್.ಎಸ್. ಹೂಟಿ, ಎ.ಆರ್. ಸವದಿ, ಎ.ಎಸ್. ಪೂಜಾರಿ, ಬಿ.ಎಸ್. ಮಾಲಗಾರ, ಐ.ಕೆ. ಹೊನವಾಡ, ಜೆ.ಜಿ. ದೇವಮಾನೆ, ಬಿ.ಎಂ. ಅನಂತಪುರ, ಬಿ.ಆರ್. ಬಸಗೌಡರ, ವೈ.ಎಂ. ನಡುವಿನಮನಿ, ಎಸ್.ಪಿ. ಕೆಮ್ಮಣ್ಣವರ, ಅಶ್ವಿನಿ ಬಡಕಂಬಿ ಇತರರು ಇದ್ದರು. ಚನ್ನಬಸಯ್ಯ ಇಟ್ನಾಳಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಲೆಯ ಮುಖ್ಯಶಿಕ್ಷಕ ಎ.ವೈ. ದನಗೊಂಡ ಸ್ವಾಗತಿಸಿದರು. ಡಿ.ಎಸ್. ಗುಡದಿನ್ನಿ ನಿರೂಪಿಸಿದರು. ಅಣ್ಣಾಸಾಬ ತೆಲಸoಗ ವಂದಿಸಿದರು.