21ರಂದು ಸಾಮೂಹಿಕ ಯೋಗ ಪ್ರದರ್ಶನ

| Published : Jun 17 2024, 01:37 AM IST

ಸಾರಾಂಶ

10ನೇ ಅಂತಾರಾಷ್ಟ್ರೀಯ ಯೋಗ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಿದ್ದು, ಕಾರ್ಯಕ್ರಮ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಸ್ಥಳೀಯ ಜನಪ್ರತಿನಿಧಿಗಳು, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು, ವಿದ್ಯಾರ್ಥಿಗಳು ಮತ್ತು ಅಧಿಕಾರಿಗಳು ಭಾಗವಹಿಸಲಿದ್ದಾರೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಜೂ. 21 ರಂದು 10ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಯುಕ್ತ ಜಿಲ್ಲಾ ಮಟ್ಟದ ಕಾರ್ಯಕ್ರಮವು ಸರ್. ಎಂ. ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಸಾಮೂಹಿಕ ಯೋಗ ಪ್ರದರ್ಶನ ನಡೆಯಲಿದ್ದು, ಯೋಗ ದಿನಾಚರಣೆಯ ಪೂರ್ವಸಿದ್ಧತಾ ಕಾರ್ಯಗಳನ್ನು ಸುವ್ಯವಸ್ಥಿತವಾಗಿ ನಿರ್ವಹಿಸುವಂತೆ ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ಅವರು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಸಲಹೆ ಸೂಚನೆಗಳನ್ನು ನೀಡಿದರು.

ಜೂನ್ 21 ರಂದು ಜಿಲ್ಲೆಯಲ್ಲಿ 10ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಯೋಜಿಸುವ ಕುರಿತು ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ನ್ಯಾಯಾಲಯದ ಸಭಾಂಗಣದಲ್ಲಿ ಶನಿವಾರ ನಡೆದ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಾಮೂಹಿಕ ಯೋಗಾಭ್ಯಾಸ

ಈ ವರ್ಷ 10ನೇ ಅಂತಾರಾಷ್ಟ್ರೀಯ ಯೋಗ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ. ಇದರ ಭಾಗವಾಗಿ ಸಾಮೂಹಿಕ ಯೋಗಾಭ್ಯಾಸ ಮಾಡುವ ಮೂಲಕ ಈ ಬಾರಿಯ ಯೋಗ ದಿನಾಚರಣೆಯನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಸ್ಥಳೀಯ ಜನಪ್ರತಿನಿಧಿಗಳು, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು, ಶಾಲಾ ವಿದ್ಯಾರ್ಥಿಗಳು ಮತ್ತು ಅಧಿಕಾರಿಗಳು ಭಾಗವಹಿಸಬೇಕು. ಈಗಾಗಲೇ ಪ್ರಸ್ತುತ ಯೋಗಾ ಶಾಲೆಗಳಲ್ಲಿ 1,79,596 ರಷ್ಟು ಜನ ಯೋಗಾಭ್ಯಾಸ ತರಬೇತಿ ಪಡೆದುಕೊಳ್ಳುತ್ತಿದ್ದಾರೆ ಎಂದರು.

ಯೋಗ ಭಿತ್ತಿಪತ್ರ ಬಿಡುಗಡೆ

ಆಯುಷ್ ಇಲಾಖೆಯವರು ಇತರ ಇಲಾಖೆಯ ಅಧಿಕಾರಿಗಳೊಂದಿಗೆ ಸಮನ್ವಯತೆ ಸಾಧಿಸಿಕೊಂಡು ಕಾರ್ಯಕ್ರಮಕ್ಕೆ1000 ಕ್ಕಿಂತಲೂ ಹೆಚ್ಚಿನ ಜನರನ್ನು ಸೇರಿಸುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಯಾಗಿಸಲು ಹಾಗೂ ಇತರ ಇಲಾಖೆಯವರು ಸಹಕಾರ ನೀಡಲು ಸಂಬಂಧಪಟ್ಟವರಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು. ಇದೇ ವೇಳೆ ಸಾಮಾನ್ಯ ಯೋಗಾಭ್ಯಾಸ ಕ್ರಮಗಳುಳ್ಳ ಭಿತ್ತಿಪತ್ರ ಬಿಡುಗಡೆ ಮಾಡಿದರು.

ಸಭೆಯಲ್ಲಿ ಎಸ್ಪಿ ಆರ್.ಐ ಖಾಸಿಂ, ಜಿಲ್ಲಾ ಆಯುಷ್ ಅಧಿಕಾರಿ ತಬಿಬಾಬಾನು, ಯೋಗ ತರಬೇತುದಾರರಾದ ಡಾ.ಎನ್.ಲೋಕನಾಥ್, ಗೋವಿಂದ,ಮಂಚನಬಲೆ ರವಿ. ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಬೈಲಾಂಜನಪ್ಪ, ಡಿಎಚ್‌ಒ ಡಾ.ಎಸ್.ಎಸ್.ಮಹೇಶ್ ಕುಮಾರ್, ಮತ್ತಿತರರು ಇದ್ದರು.