ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರರಾಜ್ಯಸಭೆಯಲ್ಲಿ ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಅವರನ್ನು ಅವಮಾನಿಸುವಂತಹ ಹೇಳಿಕೆ ನೀಡಿದ ಕೇಂದ್ರ ಗೃಹ ಸಚಿವ ಅಮಿಶ್ ಶಾ ಅವರನ್ನು ದೇಶದ್ರೋಹ ಕಾಯ್ದೆಯಡಿ ಬಂಧಿಸಬೇಕು ಎಂದು ಆಗ್ರಹಿಸಿ ಚಾಮರಾಜನಗರ ತಾಲೂಕು ಆದಿಕರ್ನಾಟಕ ಜನಾಂಗದ ಗಡಿಮನೆ ಮತ್ತು ಕಟ್ಟೆಮನೆ ಯಜಮಾನರು ಮತ್ತು ಕುಲಸ್ಥರು ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಸಂಘಗಳು ಮತ್ತು ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ನಗರದಲ್ಲಿ ಮಂಗಳವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು. ನಗರದ ಕರಿನಂಜನಪುರ ರಸ್ತೆಯಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಭವನದ ಮುಂಭಾಗದಲ್ಲಿ ಸಮಾವೇಶಗೊಂಡ ಪ್ರತಿಭಟನಾನಿರತರು ಅಂಬೇಡ್ಕರ್ ಪ್ರತಿಮೆಯೊಂದಿಗೆ ಮೆರವಣಿಗೆಯಲ್ಲಿ ಸತ್ತಿ ರಸ್ತೆ, ಡಿವಿಯೇಷನ್ ರಸ್ತೆ, ಭುವನೇಶ್ವರಿ ವೃತ್ತ, ಬಿ.ರಾಚಯ್ಯ ಜೋಡಿರಸ್ತೆ ಮೂಲಕ ಜಿಲ್ಲಾಡಳಿತ ಭವನಕ್ಕೆ ತೆರಳಿ ಪ್ರತಿಭಟನೆ ನಡೆಸಿದರು. ಅಮಿತ್ ಶಾ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರ ಮೂಲಕ ರಾಷ್ಟ್ರಪತಿಯವರಿಗೆ ಮನವಿ ಸಲ್ಲಿಸಿದರು. ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಡಿ.17 ರಂದು ಸಂಸತ್ ನಲ್ಲಿ ಅಂಬೇಡ್ಕರ್ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದು "ಅಂಬೇಡ್ಕರ್ ಅಂಬೇಡ್ಕರ್ ಅಂಬೇಡ್ಕರ್ ಎನ್ನುತ್ತಿರುವುದು ಇದೊಂದು ಫ್ಯಾಷನ್ ಆಗಿದೆ ಎಂದು ಅವಮಾನಿಸಿ ಇಷ್ಟು ಬಾರಿ ಇವರ ಹೆಸರನ್ನು ಹೇಳುವ ಬದಲು ದೇವರ ಹೆಸರನ್ನು ಸ್ಮರಣೆ ಮಾಡಿದ್ದೇ ಆಗಿದ್ದರೆ ಜನ್ಮಗಳವರೆವಿಗೂ ಸ್ವರ್ಗ ಮತ್ತು ಮುಕ್ತಿ ಪ್ರಾಪ್ತಿಯಾಗುತ್ತಿತ್ತು " ಎಂದು ಹೇಳಿರುವುದು ಖಂಡನೀಯ. ಹಗುರವಾಗಿ ನಾಲಿಗೆಯನ್ನು ಹರಿಬಿಟ್ಟಿರುವುದು ಆರ್.ಎಸ್.ಎಸ್ ಸಂಘಟನೆಯ ಕೋಮುವಾದಿ, ದೇಶದ್ರೋಹಿಗಳ ನಿಜವಾದ ಬಣ್ಣ ಬಯಲಾಗಿದೆ. ಅಂಬೇಡ್ಕರ್ ಅವರ ಬಗ್ಗೆ ಪಾರ್ಲಿಮೆಂಟ್‌ನಲ್ಲಿ ಈ ರೀತಿ ಮಾತಾನಾಡಿರುವುದು ಸಂವಿಧಾನ ಹಾಗೂ ಅಂಬೇಡ್ಕರ್ ಅವರಿಗೆ ಅಗೌರವವಾಗಿದ್ದು ದೇಶದ ಪ್ರತಿಯೊಬ್ಬ ಪ್ರಜೆಗೂ ತಲೆ ತಗ್ಗಿಸುವಂತಹ ಮಾತಾನಾಡಿರುತ್ತಾರೆ ಎಂದು ದೂರಿದರು.
ಅಂಬೇಡ್ಕರ್ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಅಮಿತ್ ಶಾ ಪರವಾಗಿ ಪ್ರಧಾನಿ ನರೇಂದ್ರಮೋದಿ ನಿಂತಿರುವುದು ಖಂಡನೀಯ. ಕೂಡಲೇ ಅಮಿತ್ ಶಾ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಬೇಕು. ಜೊತೆಗೆ ಎಸ್ಸಿ, ಎಸ್ಪಿ ದೌರ್ಜನ್ಯ ಕಾಯ್ದೆಯಡಿ ಮೊಕದ್ದಮೆ ಹೂಡಿ ದೇಶದಿಂದ ಗಡಿಪಾರು ಮಾಡಬೇಕು ಎಂದು ಆಗ್ರಹಿಸಿದರು.ಪ್ರತಿಭಟನೆಯಲ್ಲಿ ಸಂಸದ ಸುನೀಲ್‌ಬೋಸ್, ಶಾಸಕರಾದ ಪುಟ್ಟರಂಗಶೆಟ್ಟಿ, ಕೃಷ್ಣಮೂರ್ತಿ, ಚುಡಾ ಅಧ್ಯಕ್ಷ ಮಹಮ್ಮದ್ ಅಸ್ಗರ್, ಡಾ.ಅಂಬೇಡ್ಕರ್ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಮಂಜುನಾಥ್, ದಸಂಸ ಜಿಲ್ಲಾ ಸಂಯೋಜಕ ನಾಗರಾಜ್, ಮಹೇಶ್ ಕುದರ್, ಹಳೇಪುರ ಮಹೇಶ್, ಬಿಎಸ್ಪಿ ಜಿಲ್ಲಾಧ್ಯಕ್ಷ ಬ.ಮ.ಕೃಷ್ಣಮೂರ್ತಿ, ರಾಜ್ಯ ಕಾರ್ಯದರ್ಶಿ ನಾಗಯ್ಯ, ಗಡಿ ಯಜಮಾನರಾದ ಮಾಧು, ಮಂಜುನಾಥ್ ರವಿಕುಮಾರ್, ಹೊಂಗನೂರು ವೀರಣ್ಣ, ರಾಮಸಮುದ್ರ ನಾಗರಾಜ್, ಚಾ.ನಗರ ನಾಗರಾಜು, ನಗರಸಭಾ ಸದಸ್ಯರಾದ ಚಿನ್ನಮ್ಮ, ಕಲಾವತಿ, ಎಂ.ಮಹೇಶ್, ಜಿಪಂ ಮಾಜಿ ಉಪಾಧ್ಯಕ್ಷ ಅಯ್ಯನಪುರ ಶಿವಕುಮಾರ್, ಮುಖಂಡರಾದ ಎಂ.ಶಿವಮೂರ್ತಿ, ಗಣೇಶಪ್ರಸಾದ್, ಕಾಗಲವಾಡಿ ಚಂದ್ರು, ಶಿವನಾಗಣ್ಣ, ಸಿದ್ದರಾಜು, ಬಸವನಪುರ ರಾಜಶೇಖರ, ಪ್ರಸನ್ನ, ಬಸವರಾಜು, ಎ.ಶಿವಣ್ಣ, ಸೋಮುಸುಂದರ್, ಸುರೇಂದ್ರ ಕುಮಾರ್, ಲಿಂಗರಾಜು, ಕೃಷ್ಣರಾಜು, ರವಿ, ಕೃಷ್ಣ ತಾಲೂಕು ಆದಿ ಕರ್ನಾಟಕ ಜನಾಂಗದ ಗಡಿಮನೆ, ಕಟ್ಟೆಮನೆ ಯಜಮಾನರು, ಕುಲಸ್ಥರು, ಅಂಬೇಡ್ಕರ್ ಸಂಘಗಳ ಪದಾಧಿಕಾರಿ, ದಲಿತ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ಭಾಗವಹಿಸಿದ್ದರು.