ಸಾರಾಂಶ
ಶೃಂಗೇರಿಯಲ್ಲಿ ಮಲೆನಾಡು ನಾಗರೀಕ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ಆಯೋಜಿಸಿದ್ದ ಒತ್ತುವರಿ ತೆರವು, ಅರಣ್ಯ ಕಾಯ್ದೆಗಳ ವಿರುದ್ಧ ಬೃಹತ್ ಪ್ರತಿಭಟನಾ ಸಭೆ
ಶೃಂಗೇರಿ : ಜೀವನೋಪಾಯಕ್ಕಾಗಿ ಜನಸಾಮಾನ್ಯರು, ರೈತರು ಅಲ್ಪಸ್ವಲ್ಪ ಜಮೀನುಗಳನ್ನು ಒತ್ತುವರಿ ಮಾಡಿಕೊಂಡು ತಲೆತಲಾಂತರದಿಂದ ಬದುಕು ಸಾಗಿಸುತ್ತಿದ್ದಾರೆ. ಆದರೆ ಸರ್ಕಾರದ ನೀತಿ, ಅರಣ್ಯ ಇಲಾಖೆಯ ದೌರ್ಜನ್ಯಗಳಿಂದ ತಮ್ಮ ಜಮೀನನ್ನು ಕಳೆದುಕೊಳ್ಳುವ ಭೀತಿಯಲ್ಲಿ ಜನಸಾಮಾನ್ಯರಿದ್ದಾರೆ. ಅರಣ್ಯಕಾಯ್ದೆ, ಕಾನೂನು ನೀತಿ ನಿಯಮಗಳಿಂದ ಮಲೆನಾಡಿಗರಿಗೆ ಉಳಿಗಾಲವಿಲ್ಲ ಎಂದು ಮಲೆನಾಡು ನಾಗಕರೀಕ ಹಕ್ಕುಗಳ ಹೋರಾಟ ಸಮಿತಿಯ ಅಧ್ಯಕ್ಷ ಅಂಬಳೂರು ರಾಮಕೃಷ್ಣ ಆಕ್ರೋಶ ವ್ಯಕ್ತಪಡಿಸಿದರು.
ಅವರು ಶೃಂಗೇರಿಯಲ್ಲಿ ಮಲೆನಾಡು ನಾಗರೀಕ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ಆಯೋಜಿಸಿದ್ದ ಒತ್ತುವರಿ ತೆರವು, ಅರಣ್ಯ ಕಾಯ್ದೆಗಳ ವಿರುದ್ಧ ಬೃಹತ್ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು. ಮಲೆನಾಡಿಲ್ಲಿ ರೈತರ ಬದುಕು ಸಂಕಷ್ಟದಲ್ಲಿದೆ. ಹಳದಿ ಎಲೆ ರೋಗ, ಎಲೆ ಚುಕ್ಕಿ ರೋಗ, ಕೊಳೆ ರೋಗ, ಅತಿವೃಷ್ಠಿ, ನೆರೆಯಿಂದ ಬೆಳೆಗಳು ಹಾನಿಯಾಗಿ ರೈತರ ಬದುಕು ಶೋಚನೀಯವಾಗಿದೆ ಎಂದರು.
ಸರ್ಕಾರದ ನೀತಿಗಳು, ಅರಣ್ಯ ಇಲಾಖೆಯ ಮಾರಕ ಕಾಯ್ದೆಗಳು ರೈತರ ನೆಮ್ಮದಿ ಕೆಡಿಸುತ್ತಿದೆ. ಕಂದಾಯ ಭೂಮಿಯನ್ನು ಅರಣ್ಯ ಇಲಾಖೆ ವಶಪಡಿಸಿಕೊಳ್ಳುತ್ತಿದೆ. ಜಿಲ್ಲೆಯಲ್ಲಿ ಕಂದಾಯ ಭೂಮಿ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಬಡವರಿಗೆ ನಿವೇಶನವಿಲ್ಲ. ರೈತರ ಭೂಮಿಯನ್ನು ಕಿತ್ತುಕೊಳ್ಳಲು ಹೊರಟಿದ್ದಾರೆ. ಸೊಪ್ಪಿನ ಬೆಟ್ಟವನ್ನು ಅರಣ್ಯ ಇಲಾಖೆಯ ವಶಕ್ಕೆ ತೆಗೆದುಕೊಂಡು 4(1), ಸೆಕ್ಷನ್ 17 ಹಾಕಿದ್ದಾರೆ. ಈ ಹಿಂದೆ ಸೊಪ್ಪಿನ ಬೆಟ್ಟ ಪ್ರದೇಶಕ್ಕೆ ಹಕ್ಕುಪತ್ರ ,ಸಾಗುವಳಿ ಚೀಟಿ ನೀಡಿದ್ದಾರೆ. ಆಗೊಂದು ಕಾನೂನು ಈಗೊಂದು ಕಾನೂನು ಮಾಡಿರುವುದು ಸರಿಯೇ ಎಂದು ಪ್ರಶ್ನಿಸಿದರು.
ಅರಣ್ಯ ಇಲಾಖೆಯ ಅಧಿಕಾರಿಗಳು ಒತ್ತುವರಿ ತೆರವುಗೊಳಿಸಲು ಮುಂದಾದರೆ ಜನರೇ ತಕ್ಕ ಉತ್ತರ ನೀಡಲಿದ್ದಾರೆ. ಕಂದಾಯ ಇಲಾಖೆ ಕೂಡಲೇ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಬಿಎಸ್ ಪಿ ಮುಖಂಡ ಕೆ.ಎಂ. ಗೋಪಾಲ್ ಮಾತನಾಡಿ, ಈ ಸಮಸ್ಯೆ ಅತ್ಯಂತ ಗಂಭೀರವಾದ ಸಮಸ್ಯೆ. ನಗರ ಪರಿಸರವಾದಿಗಳು, ಎನ್.ಜಿ.ಒ.ಗಳು ಪರಿಸರದ ಹೆಸರಲ್ಲಿ ಮನುಷ್ಯರನ್ನೇ ಮರೆತಿದ್ದಾರೆ. ಅರಣ್ಯ, ಪ್ರಾಣಿ, ಪಕ್ಷಿಗಳನ್ನು ಉಳಿಸಬೇಕು ಎಂದು ಮನುಷ್ಯನನ್ನೇ ಬದುಕಲು ಬಿಡದಂತಹ ವಾತಾವರಣ ನಿರ್ಮಿಸುತ್ತಿದ್ದಾರೆ ಎಂದು ತಿಳಿಸಿದರು.
ಪ್ರಕೃತಿ, ಪ್ರಾಣಿ, ಪಕ್ಷಿ ಎಲ್ಲವೂ ಬೇಕು. ಜತೆಗೆ ಮನುಷ್ಯನೂ ಇರಬೇಕಲ್ಲವೇ. ಮನುಷ್ಯನ ಬದುಕನ್ನು ಕಸಿದುಕೊಂಡು ಕೇವಲ ಪರಿಸರನ್ನು ಉಳಿಸುತ್ತೇವೆ ಎಂದರೆ ಎಷ್ಟು ಸೂಕ್ತ. ಮನುಷ್ಯನು ತಲೆ ತಲಾಂತರದಿಂದ ಪರಿಸರದ ನಡುವೆ ಬದುಕುತ್ತಾ ಪರಿಸರವನ್ನು ಉಳಿಸಿಕೊಂಡು ಬಂದಿದ್ದಾನೆ ಎಂದರು.
ಈಗಿನ ಎನ್.ಜಿ.ಒ, ನಗರ ಪರಿಸರವಾದಿಗಳು ಪರಿಸರದ ಹೆಸರಲ್ಲಿ ಮೂಲನಿವಾಸಿಗಳ ಬದುಕಿಗೆ ಕೊಳ್ಳಿಯಿಡುತ್ತಿದ್ದಾರೆ. ಕಸ್ತೂರಿ ರಂಗನ್ ವರದಿ ರೈತರ, ಜನಸಾಮಾನ್ಯರ ಪಾಲಿಗೆ ಮರಣ ಶಾಸನವಾಗಲಿದೆ. ಹುಲಿ ಯೋಜನೆ, ರಾಷ್ಟ್ರೀಯ ಉದ್ಯಾನವನ, ಕಸ್ತೂರಿ ರಂಗನ್ ವರದಿ, ಅರಣ್ಯ ಕಾಯ್ದೆಗಳು ಮಲೆನಾಡಿನ ಜನರ ಬದುಕಿಗೆ ಕೊಡಲಿಯೇಟು ನೀಡುತ್ತಿದೆ ಎಂದು ದೂರಿದರು.
ಜೆಡಿಎಸ್ ಮುಖಂಡ ಭರತ್ ಮಾತನಾಡಿ, ರೈತರು ಜೀವನೋಪಾಯಕ್ಕಾಗಿ ಒತ್ತುವರಿ ಮಾಡಿದ್ದಾರೆ. ಸರ್ಕಾರ, ಅರಣ್ಯ ಇಲಾಖೆ ರೈತರನ್ನು ಕಳ್ಳರಂತೆ ಬಿಂಬಿಸಲು ಹೊರಟಿದೆ. ನಮ್ಮ ಭೂಮಿ ನಮ್ಮ ಹಕ್ಕು. ನಾವು ಎಲ್ಲಿಂದಲೋ ಬಂದವರಲ್ಲ. ಇದೇ ನಾಡಿನಲ್ಲಿ, ಇದೇ ಭೂಮಿಯಲ್ಲಿ ಹುಟ್ಟಿದವರು. ಫಾರಂ 50,53,57 ಅರ್ಜಿಗಳು, 94 ಸಿ. ಅರ್ಜಿಗಳು ಇನ್ನೂ ಬಾಕಿ ಇವೆ. ಸಾಗುವಳಿ ಚೀಟಿಗಳಿಗೆ ಪಹಣಿ ಹಾಕಿಲ್ಲ. ಸರ್ಕಾರದ ನಿರ್ಲಕ್ಷ, ಅಧಿಕಾರಿಗಳ ಧೋರಣೆಗಳೇ ಇದಕ್ಕೆಲ್ಲಾ ಕಾರಣ ಎಂದು ಟೀಕಿಸಿದರು.
ಬಿಜೆಪಿ ಮುಖಂಡರಾದ ಕೆ.ಎಂ. ಶ್ರೀನಿವಾಸ್, ತಾಲೂಕು ಬಿಜೆಪಿ ರೈತ ಮೋರ್ಚಾದ ಮೇಘಳಬೈಲು ರಾಜೇಶ್, ನಂದೀಶ್, ಸಿಫಿಐ ನ ಕೆಳವಳಿ ಕಳಸಪ್ಪ ಸೇರಿದೆಂತೆ ಸರ್ವಪಕ್ಷಗಳ ಕಾರ್ಯಕರ್ತರು, ರೈತಪರ ಸಂಘಟನೆಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಇದಕ್ಕೂ ಮುನ್ನ ಬಸ್ ನಿಲ್ದಾಣದಿಂದ ಹೊರಟ ಪ್ರತಿಭಟನಾ ಮೆರವಣಿಗೆ ಪಟ್ಟಣದ ಮುಖ್ಯ ರಸ್ತೆಯಲ್ಲಿ ಸಾಗಿ ತಾಲೂಕು ಕಚೇರಿ ಎದುರು ಸಮಾವೇಶಗೊಂಡಿತು. ನಂತರ ತಹಸೀಲ್ದಾರ್ ಗೌರಮ್ಮರವರಿಗೆ ಮನವಿ ಸಲ್ಲಿಸಲಾಯಿತು.