ಸಾರಾಂಶ
ಸೇವೆಯೇ ಭಗವಂತನ ಸನಿಹಕ್ಕೆ ಹೋಗುವ ಸುಲಭ ಮಾರ್ಗ. ಸನಾತನ ಸಂಸ್ಕೃತಿಯನ್ನು ಮುಂದಿನ ಪರಂಪರೆಗೆ ಮುನ್ನಡೆಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು.
ಕನ್ನಡಪ್ರಭ ವಾರ್ತೆ ಬೆಳ್ತಂಗಡಿ
ಪ್ರತಿಯೊಬ್ಬರೂ ಅವರವರ ಧರ್ಮವನ್ನು ಸರಿಯಾಗಿ ಅರ್ಥಮಾಡಿಕೊಂಡು ಆಚರಿಸುವ ಜ್ಞಾನ ಸತ್ರ ಮಾಡಬೇಕು. ನಾವು ಯಾರನ್ನೂ ದೂರದೇ ನಮ್ಮ ದಾರಿಯನ್ನು ನಾವು ಸೃಷ್ಟಿಸಿಕೊಳ್ಳಬೇಕು ಎಂದು ಕನ್ಯಾಡಿ ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನದ ಜಗದ್ಗುರು ಪೀಠದ ಪೀಠಾಧೀಶ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.ಅವರು ತಮ್ಮ ಪಟ್ಟಾಭಿಷೇಕದ 16ನೇ ವರ್ಧಂತ್ಯುತ್ಸವ ಸಮಾರಂಭದಲ್ಲಿ ಕನ್ಯಾಡಿ ಶ್ರೀರಾಮ ಕ್ಷೇತ್ರದಲ್ಲಿ ಮಂಗಳವಾರ ಆಶೀರ್ವಚನ ನೀಡಿದರು.
ಸೇವೆಯೇ ಭಗವಂತನ ಸನಿಹಕ್ಕೆ ಹೋಗುವ ಸುಲಭ ಮಾರ್ಗ. ಸನಾತನ ಸಂಸ್ಕೃತಿಯನ್ನು ಮುಂದಿನ ಪರಂಪರೆಗೆ ಮುನ್ನಡೆಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು.ಸುಖ ಶಾಂತಿ ಪಡೆಯಲು ತ್ಯಾಗದಿಂದ ಕರ್ಮ ಮಾಡಬೇಕು. ದೇಶದಲ್ಲಿ ಧರ್ಮ ಸಂಸ್ಥಾಪನೆಗಾಗಿ ಅಧ್ಯಾತ್ಮ ಶಕ್ತಿ ಜಾಗೃತವಾಗಬೇಕು. ತ್ಯಾಗದಿಂದ ಕೆಲಸ ಮಾಡುವವನು ಅಮೃತತ್ವ ಪಡೆಯುತ್ತಾನೆ. ಭಗವದ್ಭಕ್ತಿ ಮತ್ತು ಕರ್ಮಯೋಗದಿಂದ ಜಗತ್ ಕಲ್ಯಾಣ. ಅದೇ ಸನ್ಯಾಸಿಗಳ ಕಾರ್ಯ ಎಂದು ಹೇಳಿದರು.
ಬಂದರು ಮತ್ತು ಮೀನುಗಾರಿಕೆ ಸಚಿವ ಮಾಂಕಾಳ್ ಎಸ್. ವೈದ್ಯ ಮಾತನಾಡಿ, ದೇಶದ ಉದ್ದಗಲದಲ್ಲಿ ಶಾಖ ಮಠ ಗಳನ್ನು ಸ್ಥಾಪಿಸಿ , ಧರ್ಮ ಕಾರ್ಯ ನಡೆಸಿ ಮಾರ್ಗದರ್ಶನದಿಂದ ನಮ್ಮನ್ನು ಮುನ್ನಡೆಸುತ್ತಿರುವ ಗುರುಗಳ ಆಶೀರ್ವಾದ, ಮಾರ್ಗದರ್ಶನ ನಮಗೆ ಪ್ರೇರಣೆಯಾಗಿದೆ, ಎಲ್ಲರನ್ನು ಒಗ್ಗೂಡಿಸಿ ಶಿಷ್ಯಂದಿರು ಎತ್ತರಕ್ಕೆ ಬೆಳೆಯಲು ಗುರುಗಳ ಮಾರ್ಗದರ್ಶನದ ಅಗತ್ಯವಿದೆ ಎಂದರು.ಎಂಎಲ್ ಸಿ ಪ್ರತಾಪ ಸಿಂಹ ನಾಯಕ್ ಮಾತನಾಡಿದರು. ಕಿಯೋನಿಕ್ಸ್ ಮಾಜಿ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ ಮಾತನಾಡಿ, ದೇಶಕ್ಕೆ ಸಂತರು ಅನಿವಾರ್ಯ. ದೇವರು ಗುರುಗಳು ಒಲಿಯಲು ಭಕ್ತಿಯೇ ಮಾರ್ಗ ಎಂದು ಹೇಳಿದರು.
ಅಯೋಧ್ಯೆಯ ಕೇಶವದಾಸ್ ಮಹಾರಾಜ್, ಕರ್ನಾಟಕ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ.ಭರತ್ ಶೆಟ್ಟಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ, ಭಟ್ಕಳ ಚಾತುರ್ಮಾಸ್ಯ ಸಮಿತಿ ಅಧ್ಯಕ್ಷ ಕೃಷ್ಣ ನಾಯ್ಕ, ಶ್ರೀ ರಾಮ ಕ್ಷೇತ್ರ ಸಮಿತಿ ತಾಲೂಕು ಪ್ರಧಾನ ಸಂಚಾಲಕ ಜಯಂತ ಕೋಟ್ಯಾನ್, ತಾಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಅಧ್ಯಕ್ಷ ಕುಶಾಲಪ್ಪ ಗೌಡ, ಹೊನ್ನಾವರ ಶ್ರೀ ರಾಮ ಕ್ಷೇತ್ರ ಸಮಿತಿ ಅಧ್ಯಕ್ಷ ವಾಮನ ನಾಯ್ಕ ಮಂಕಿ, ಭಟ್ಕಳ ಅರಸಕೇರಿ ವೆಂಕಟ್ರಮಣ ದೇವಸ್ಥಾನದ ಅಧ್ಯಕ್ಷ ಅರುಣ್ ನಾಯ್ಕ, ಶಾರದಾಹೊಳೆ ನಾಮಧಾರಿ ಅಭಿವೃದ್ಧಿ ಸಮಿತಿ ಅಧ್ಯಕ್ಷ ಆರ್. ಕೆ. ನಾಯ್ಕ್, ಹಳೆಕೋಟೆ ಹನುಮಂತ ದೇವಸ್ಥಾನದ ಧರ್ಮದರ್ಶಿ ಸುಬ್ರಾಯ ನಾಯ್ಕ್, ಕುಮಟ ಶ್ರೀ ರಾಮ ಕ್ಷೇತ್ರ ಸಮಿತಿ ಅಧ್ಯಕ್ಷ ಆರ್. ಜಿ. ನಾಯ್ಕ್, ಮಂಗಳೂರು ಕಾರ್ಪೋರೇಟರ್ ಕಿರಣ್ ಕುಮಾರ್, ಬೇಬಿ ಕುಂದರ್ ಬಂಟ್ವಾಳ, ಸಂಜೀವ ಪೂಜಾರಿ ಮೊದಲಾವರು ಉಪಸ್ಥಿತರಿದ್ದರು.ಮಠದ ಟ್ರಸ್ಟಿ ತುಕಾರಾಮ್ ಸಾಲಿಯಾನ್ ಸ್ವಾಗತಿಸಿದರು. ಶ್ರೀ ರಾಮ ಕ್ಷೇತ್ರ ಸಮಿತಿ ಜಿಲ್ಲಾ ಸಂಚಾಲಕ ಕೃಷ್ಣಪ್ಪ ಪೂಜಾರಿ ಕೆಲ್ಲಡ್ಕ ನಿರೂಪಿಸಿದರು.