ಇಂಧನ ದರ ಏರಿಕೆ ಖಂಡಿಸಿ ಬಿಜೆಪಿಯಿಂದ ಬೃಹತ್ ಪ್ರತಿಭಟನೆ

| Published : Jun 19 2024, 01:07 AM IST / Updated: Jun 19 2024, 01:08 AM IST

ಸಾರಾಂಶ

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆಗೊಳಿಸಿ ಅದನ್ನು ಸಮರ್ಥಿಸಿಕೊಳ್ಳುತ್ತಿರುವುದು ನಾಚಿಕೆಗೇಡಿನ ಸಂಗತಿ. ಕಳೆದ ಹನ್ನೆರಡು ತಿಂಗಳಿಂದ ಯಾವುದೇ ಅಭಿವೃದ್ಧಿ ಕಾರ್ಯ ನಡೆದಿಲ್ಲ.

ಕನ್ನಡಪ್ರಭ ವಾರ್ತೆ ಮೈಸೂರು

ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡಿರುವ ರಾಜ್ಯ ಸರ್ಕಾರ ಕೂಡಲೇ ತನ್ನ ಆದೇಶ ಹಿಂಪಡೆಯಬೇಕು ಎಂದು ಆಗ್ರಹಿಸಿ ನಗರ ಮತ್ತು ಜಿಲ್ಲಾ ಬಿಜೆಪಿ ಕಾರ್ಯಕರ್ತರು ಮಂಗಳವಾರ ಬೃಹತ್ ಪ್ರತಿಭಟನೆ ನಡೆಸಿದರು.

ಸಿದ್ಧಾರ್ಥ ನಗರದ ಜಿಲ್ಲಾಧಿಕಾರಿ ಕಚೇರಿಗೆ ಬಿಜೆಪಿ ಕಾರ್ಯಕರ್ತರು ಮುತ್ತಿಗೆ ಹಾಕಲು ಮುಂದಾದರು.

ರಸ್ತೆಯ ಮಹದೇಶ್ವರ ದೇವಸ್ಥಾನದ ಸಮೀಪದ ಹಳೆ ಹಾಲಿನ ಡೈರಿ ವೃತ್ತದ ಬಳಿ ಜಮಾಯಿಸಿದ ಬಿಜೆಪಿ ಕಾರ್ಯಕರ್ತರು ಎತ್ತಿನ ಗಾಡಿ, ಜಟಕಾ ಗಾಡಿಯೊಂದಿಗೆ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿದರು.

ಬೈಕ್ ಒಂದಕ್ಕೆ ಪೆಟ್ರೋಲ್ ಹಾಕಿಸಲು ಹಣ ಇಲ್ಲ ಎಂದು ಬೈಕ್ ಗೆ ಬೆಂಕಿ ಹಚ್ಚಲು ಮುಂದಾದಾಗ ಪೊಲೀಸರು ಮಧ್ಯಪ್ರವೇಶಿಸಿ ತಡೆದು ವಾಹನವನ್ನು ತಮ್ಮ ವಶಕ್ಕೆ ಪಡೆದರು.

ಈ ವೇಳೆ ಬಿಜೆಪಿ ಕಾರ್ಯಕರ್ತರು ರಾಜ್ಯ ಸರ್ಕಾರಕ್ಕೆ ಧಿಕ್ಕಾರದ ಘೋಷಣೆ ಕೂಗಿ, ಪೆಟ್ರೋಲ್, ಡಿಸೇಲ್ ಬೆಲೆ ಹೆಚ್ಚಿಸಿರುವ ಮುಖ್ಯಮಂತ್ರಿಗೆ ಧಿಕ್ಕಾರ, ಗ್ಯಾರಂಟಿಗೆ ಹಣವಿಲ್ಲದೆ ಜನರ ಜೇಬಿಗೆ ಕತ್ತರಿ ಹಾಕುತ್ತಿರುವ ಸರ್ಕಾರಕ್ಕೆ ಧಿಕ್ಕಾರ, ಜನವಿರೋಧಿ ಸರ್ಕಾರಕ್ಕೆ ಧಿಕ್ಕಾರ ಎಂದು ಘೋಷಣೆ ಕೂಗಿ ತಮ್ಮ ಆಕ್ರೋಶ ಹೊರ ಹಾಕಿದರು.

ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಶಾಸಕ ಟಿ.ಎಸ್. ಶ್ರೀವತ್ಸ, ನಗರ ಬಿಜೆಪಿ ಅಧ್ಯಕ್ಷ ಎಲ್. ನಾಗೇಂದ್ರ, ಅವರು ತೆರೆದ ವಾಹನದಲ್ಲಿ ಮೆರವಣಿಗೆ ನಡೆಸಿದರು. ನೂರಾರು ಮಂದಿ ಪಕ್ಷದ ಮುಖಂಡರು, ಕಾರ್ಯಕರ್ತರು ಎತ್ತಿನಗಾಡಿ, ಜಟಕಾ ಗಾಡಿಯಲ್ಲಿ ಕುಳಿತು ಸಾಗಿದರು. ನೂರಾರು ಕಾರ್ಯಕರ್ತರು ಕಾಲ್ನಡಿಗೆಯಲ್ಲಿ ಘೋಷಣೆ ಕೂಗಿ ಬರುತ್ತಿದ್ದರಿಂದ ಕೆಲಕಾಲ ಸಂಚಾರ ಅಸ್ತವ್ಯಸ್ತವಾಯಿತು. ಪೊಲೀಸರು ಬದಲಿ ಮಾರ್ಗಗಳ ಮೂಲಕ ಕಳುಹಿಸಿ ನಿಯಂತ್ರಿಸಿದರು.

ಡೀಸಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನ:

ಬಿಜೆಪಿ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲು ಮುಂದಾಗುವ ವಿಷಯ ತಿಳಿದು ಮುಂಜಾಗ್ರತವಾಗಿ ಪೊಲೀಸರು ಕಚೇರಿಯ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ ಯೋಜಿಸಿ ಬ್ಯಾರಿಕೇಡ್ಅಳವಡಿಸಿದ್ದರು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಸಂಸದ ಯದುವೀರ್, ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯ ರಾಜ್ಯ ಸರ್ಕಾರದ ಈ ನಿರ್ಧಾರದಿಂದ ಬಡವರು ಮತ್ತು ಮಧ್ಯಮ ವರ್ಗದವರಿಗೆ ತೊಂದರೆ ಆಗುತ್ತಿದೆ. ಕೂಡಲೇ ಸರ್ಕಾರ ತನ್ನ ಆದೇಶ ಹಿಂದಕ್ಕೆ ಪಡೆಯಬೇಕು. ಸರ್ಕಾರಗಳು ಜನರ ಒಳಿತಿನ ತೀರ್ಮಾನ ಮಾಡಬೇಕೇ ಹೊರತು ತೊಂದರೆಯಾಗುವ ಕೆಲಸ ಮಾಡಬಾರದು ಎಂದರು.

ಇಂಧನ ಬೆಲೆ ಏರಿಕೆಯಾದರೆ ಪ್ರತಿಯೊಂದು ಅಗತ್ಯ ವಸ್ತುಗಳ ಬೆಲೆಯೂ ಏರಿಕೆ ಆಗುತ್ತದೆ ಎಂಬುದರ ಅರಿವು ಸರ್ಕಾರಕ್ಕೆ ಇರಬೇಕು. ಬೆಲೆ ಇಳಿಸುವವರೆಗೂ ಪಕ್ಷದ ಹೋರಾಟ ಮುಂದುವರೆಯಲಿದೆ ಎಂದರು.

ಶಾಸಕ ಟಿ.ಎಸ್. ಶ್ರೀವತ್ಸ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆಗೊಳಿಸಿ ಅದನ್ನು ಸಮರ್ಥಿಸಿಕೊಳ್ಳುತ್ತಿರುವುದು ನಾಚಿಕೆಗೇಡಿನ ಸಂಗತಿ. ಕಳೆದ ಹನ್ನೆರಡು ತಿಂಗಳಿಂದ ಯಾವುದೇ ಅಭಿವೃದ್ಧಿ ಕಾರ್ಯ ನಡೆದಿಲ್ಲ. ಒಂಬತ್ತು ತಿಂಗಳಿಂದ ಒಂದೊಂದು ವಸ್ತುಗಳ ಬೆಲೆ ಹೆಚ್ಚಿಸಲಾಗುತ್ತಿದೆ, ಹಣ ದುರುಪಯೋಗದ ಮೇಲೆ ಸಚಿವ ಬಿ. ನಾಗೇಂದ್ರ ರಾಜೀನಾಮೆ ನೀಡಿದರೆ ಸಾಲದು.ಮುಖ್ಯಮಂತ್ರಿ ರಾಜೀನಾಮೆ ಕೊಡಬೇಕು ಎಂದು ಅವರು ಒತ್ತಾಯಿಸಿದರು. ಮೈಸೂರು ನಗರ ಬಿಜೆಪಿ ಅಧ್ಯಕ್ಷ ಎಲ್.ನಾಗೇಂದ್ರ ಮಾತನಾಡಿ, ರಾಜ್ಯಸರ್ಕಾರ ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ ವಾಡಿ ಏಕಪಕ್ಷೀಯ ತೀರ್ಮಾನ ಮಾಡಿರುವುದರಿಂದ ಬಡವರ ಮೇಲೆ ದೊಡ್ಡ ಹೊರೆ ಬೀಳುವಂತಾಗಿದೆ. ತಕ್ಷಣವೇ ಬೆಲೆ ಏರಿಕೆ ಹಿಂದಕ್ಕೆ ಪಡೆಯಬೇಕು ಎಂದು ಅವರು ಆಗ್ರಹಿಸಿದರು.

ಮೈಸೂರು ಗ್ರಾಮಾಂತರ ಬಿಜೆಪಿ ಅಧ್ಯಕ್ಷ ಎಲ್.ಆರ್. ಮಹದೇವಸ್ವಾಮಿ ಮಾತನಾಡಿ, ನಮ್ಮ ಸರ್ಕಾರ ಬಂದಾಗ ಪೆಟ್ರೋಲ್ ಬೆಲೆ ಇಳಿಸುತ್ತೇವೆ ಎಂದು ಹೇಳಿದ್ದ ಸಿದ್ದರಾಮಯ್ಯ ಅವರು ಈಗ ದರ ಹೆಚ್ಚಿಸಿದ್ದಾರೆ. ಸರ್ಕಾರ ಇಳಿಕೆ ಮಾಡದೆ ಹೋದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದರು.

ಮಾಜಿ ಮೇಯರ್ ಸತೀಶ್ ಸ್ವಾಮಿ ಮಾತನಾಡಿದರು.

ಪ್ರತಿಭಟನೆ ಅಂತ್ಯವಾದ ಬಳಿಕ ಯದುವೀರ್ ಅವರ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಅವರಿಗೆ ಮನವಿ ಸಲ್ಲಿಸಲಾಯಿತು.

ಮಾಜಿ ಮೇಯರ್ ಶಿವಕುಮಾರ್, ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಹೇಮಂತಕುಮಾರ್ ಗೌಡ, ಮಿರ್ಲೆ ಶ್ರೀನಿವಾಸಗೌಡ, ಕಾಂಪೋಸ್ಟ್ ನಿಗಮದ ಮಾಜಿ ಅಧ್ಯಕ್ಷ ಎಸ್. ಮಹದೇವಯ್ಯ, ಕರ್ನಾಟಕ ಮೃಗಾಲಯ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಂ. ಶಿವಕುಮಾರ್, ನಗರ ಪಾಲಿಕೆ ಮಾಜಿ ಸದಸ್ಯರಾದ ಎಂ.ಕೆ. ಶಂಕರ್, ಆರ್. ರವೀಂದ್ರ, ಬಿ.ವಿ. ಮಂಜುನಾಥ್, ಜೆ.ಎಸ್. ಜಗದೀಶ್, ಪ್ರಶಾಂತ್ ಗೌಡ, ವೇದಾವತಿ, ಪ್ರಮೀಳಾ ಭರತ್, ಡಾ.ಎಂ. ರೂಪಾ, ಛಾಯಾದೇವಿ, ಲೋಲಾಕ್ಷಿ ನಾರಾಯಣಪ್ಪ, ಮಾಜಿ ಉಪ ಮೇಯರ್ ವಿ. ಶೈಲೇಂದ್ರ, ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷೆ ಮಂಗಳಾ ಸೋಮಶೇಖರ್, ಪ್ರಧಾನ ಕಾರ್ಯದರ್ಶಿಗಳಾದ ಎಚ್.ಜಿ. ಗಿರಿಧರ್, ಬಿ.ಎಂ.ರಘು, ಮಹೇಶ್ ಮಡವಾಡಿ, ಕೇಬಲ್ ಮಹೇಶ್ , ಜಿಲ್ಲಾ ಉಪಾಧ್ಯಕ್ಷ ಜೋಗಿ ಮಂಜು, ಎಸ್.ಟಿ ಮೋರ್ಚಾ ಅಧ್ಯಕ್ಷ ಪಡುವಾರಹಳ್ಳಿ ರಾಮಕೃಷ್ಣ, ವಕ್ತಾರ ಕೆ. ವಸಂತಕುಮಾರ್, ಮಹಿಳಾ ಮೋರ್ಚಾ ಅಧ್ಯಕ್ಷೆ ರೇಣುಕಾ ರಾಜ್, ಕ್ಯಾತಮಾರನಹಳ್ಳಿ ಪ್ರಕಾಶ್, ರಾಕೇಶ್ ಗೌಡ, ವಿನಯ್ ಪಾಂಚಜನ್ಯ, ದೇವರಾಜು, ಮಹೇಶ್ ರಾಜೇ ಅರಸ್, ಡಾ. ಭಾನು ಪ್ರಕಾಶ್, ಮಂಜುನಾಥ್ ಮೊದಲಾದವರು ಇದ್ದರು.