16ರಂದು ಎಡ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ

| Published : Feb 13 2024, 12:45 AM IST

ಸಾರಾಂಶ

ಅಗತ್ಯ ವಸ್ತುಗಳ ಬೆಲೆ ಏರಿಕೆ ಹಾಗೂ ಕಾರ್ಮಿಕರು, ದುಡಿಯುವ ವರ್ಗದವರಿಗೆ ಶೋಷಣೆಯಾಗುತ್ತಿರುವುದನ್ನು ವಿರೋಧಿಸಿ ಎಐಟಿಯುಸಿ, ಸಿಐಟಿಯು, ಐಎನ್‌ಟಿಯುಸಿ, ಎಐಸಿಸಿಟಿಯು ಸಂಘಟನೆಗಳು ಫೆ.16ರಂದು ಜಿಲ್ಲೆಯಾದ್ಯಂತ ಪ್ರತಿಭಟನೆ ಹಮ್ಮಿಕೊಂಡಿವೆ ಎಂದು ಸಿಐಟಿಯು ಜಿಲ್ಲಾ ಸಹ ಸಂಚಾಲಕ ಸಿ.ಕೆ. ಗೌಸ್‍ಪೀರ್ ತಿಳಿಸಿದರು.

ಕನ್ನಡಪ್ರಭವಾರ್ತೆ ಚಿತ್ರದುರ್ಗ

ಅಗತ್ಯ ವಸ್ತುಗಳ ಬೆಲೆ ಏರಿಕೆ ಹಾಗೂ ಕಾರ್ಮಿಕರು, ದುಡಿಯುವ ವರ್ಗದವರಿಗೆ ಶೋಷಣೆಯಾಗುತ್ತಿರುವುದನ್ನು ವಿರೋಧಿಸಿ ಎಐಟಿಯುಸಿ, ಸಿಐಟಿಯು, ಐಎನ್‌ಟಿಯುಸಿ, ಎಐಸಿಸಿಟಿಯು ಸಂಘಟನೆಗಳು ಫೆ.16ರಂದು ಜಿಲ್ಲೆಯಾದ್ಯಂತ ಪ್ರತಿಭಟನೆ ಹಮ್ಮಿಕೊಂಡಿವೆ ಎಂದು ಸಿಐಟಿಯು ಜಿಲ್ಲಾ ಸಹ ಸಂಚಾಲಕ ಸಿ.ಕೆ. ಗೌಸ್‍ಪೀರ್ ತಿಳಿಸಿದರು.

ಪ್ರವಾಸಿ ಮಂದಿರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಾರ್ಮಿಕ ವರ್ಗದವರಿಗೆ ತಿಂಗಳಿಗೆ 31,500 ರು ವೇತನ ನಿಗದಿಯಾಗದಬೇಕು. ಜಿಎಸ್.ಟಿ ಹೆಚ್ಚಿಸಿ ಬಡವರ ಮೇಲೆ ಕೇಂದ್ರ ಸರ್ಕಾರ ಬರೆ ಎಳೆಯುತ್ತಿದೆ. ಕೇಂದ್ರ ರಾಜ್ಯಕ್ಕೆ ಅನುದಾನ ನೀಡುವಲ್ಲಿಯೂ ಉದಾಸೀನ ತೋರಿದೆ. ಆರ್ಥಿಕ ಅಸಮಾನತೆ ತಾಂಡವವಾಡುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜನ ವಿರೋಧಿ ನೀತಿ ಅನುಸರಿಸುತ್ತಿವೆ ಎಂದು ದೂರಿದರು.

ಅಂದು ಜಿಲ್ಲೆಯ ಎಲ್ಲಾ ತಾಲೂಕಿನಲ್ಲಿಯೂ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ದಿನನಿತ್ಯ ಬಳಸುವ ಅಡುಗೆ ಪದಾರ್ಥಗಳ ಬೆಲೆ ಗಗನಕ್ಕೇರಿದೆ. ಹಾಲು, ಹಣ್ಣು, ಮೊಟ್ಟೆ ಬಡವರ ಕೈಗೆ ಸಿಗದಂತಾಗಿದೆ. ಸಮಾನ ಕೆಲಸಕ್ಕೆ ಸಮಾನ ವೇತನ ಕೊಡಬೇಕು. ರೈಲ್ವೆ ಖಾಸಗಿಯವರಿಗೆ ಮಾರಾಟವಾಗುತ್ತಿದೆ. ಗಿರಿ ಪರ್ವತಗಳನ್ನು ಬಿಟ್ಟಿಲ್ಲ. ಇಂತಹ ಸರ್ಕಾರಕ್ಕೆ ಪಾರ್ಲಿಮೆಂಟ್ ಚುನಾವಣೆಯಲ್ಲಿ ಮತದಾರರು ತಕ್ಕಪಾಠ ಕಲಿಸಬೇಕೆಂದು ಸಿ.ಕೆ.ಗೌಸ್‍ಪೀರ್ ಮನವಿ ಮಾಡಿದರು.

ಸಿಪಿಐ ಜಿಲ್ಲಾ ಕಾರ್ಯದರ್ಶಿ ಜಿ.ಸಿ.ಸುರೇಶ್‍ಬಾಬು ಮಾತನಾಡಿ ಕಳೆದ ಹತ್ತು ವರ್ಷಗಳಿಂದ ದೇಶದಲ್ಲಿ 25 ಕೋಟಿ ಜನ ಬಡತನದಿಂದ ಹೊರ ಬಂದಿದ್ದಾರೆಂದು ಕೇಂದ್ರ ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮನ್ ಸುಳ್ಳು ಹೇಳಿ ದೇಶದ ಜನರನ್ನು ದಿಕ್ಕುತಪ್ಪಿಸುತ್ತಿದ್ದಾರೆ. ಕೋವಿಡ್ ಬಂದಾಗಿನಿಂದಲೂ 60 ರಿಂದ 70 ಕೋಟಿ ಜನರ ಜೀವನ ನಿರ್ವಹಣೆ ಕಷ್ಟವಾಗಿದೆ. ಬ್ರಿಟೀಷರ ಕಾಲದಲ್ಲಿಯೂ ಇಂತಹ ಶೋಷಣೆಯಿರಲಿಲ್ಲ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸಿ ದೇಶದ ಜನರಿಗೆ ಮಂಕು ಬೂದಿ ಎರಚುತ್ತಿರುವ ಪ್ರಧಾನಿ ಮೋದಿಗೆ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಮತದಾರರು ಸರಿಯಾದ ಪಾಠ ಕಲಿಸಬೇಕು. 44 ಕಾರ್ಮಿಕ ಕಾಯಿದೆ ಕೋಡ್‍ಗಳನ್ನು ರದ್ದುಪಡಿಸಿ ಕೇವಲ ನಾಲ್ಕು ಕೋಡ್‍ಗಳನ್ನು ಮಾತ್ರ ಉಳಿಸಿದ್ದಾರೆ. ರೈತರ ಬೇಡಿಕೆಗಳನ್ನು ಈಡೇರಿಸಿಲ್ಲ. ಹಾಗಾಗಿ ಕಾರ್ಮಿಕರು, ರೈತರು, ವಿದ್ಯಾರ್ಥಿಗಳು, ಸಾರ್ವಜನಿಕರು ಫೆ.16 ರ ಪ್ರತಿಭಟನೆಗೆ ಬೆಂಬಲಿಸುವಂತೆ ವಿನಂತಿಸಿದರು. ಎಐಟಿಯುಸಿ ತಾಲೂಕು ಉಪಾಧ್ಯಕ್ಷ ರಾಜಣ್ಣ, ಸಿಪಿಐ ತಾಲೂಕು ಸಹ ಕಾರ್ಯದರ್ಶಿ ಸತ್ಯಕೀರ್ತಿ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.