ಅಕ್ರಮ ಮದ್ಯ ಮಾರಾಟಗಾರರ ವಿರುದ್ಧ ಕಠಿಣ ಕ್ರಮಕೈಗೊಳ್ಳಲು ತಾಲೂಕು ಆಡಳಿತ ಹಾಗೂ ಅಬಕಾರಿ ಇಲಾಖೆ ವಿಫಲವಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಕುಂದಗೋಳ:
ತಾಲೂಕಿನ ಹರ್ಲಾಪುರ ಹಾಗೂ ಸುಲ್ತಾನಪುರ ಗ್ರಾಮಗಳಲ್ಲಿ ಮದ್ಯದ ಹಾವಳಿ ಮಿತಿಮೀರಿದ್ದು, ಇದರಿಂದ ಕುಟುಂಬಗಳ ಸ್ವಾಸ್ಥ್ಯ ಹಾಳಾಗುತ್ತಿದೆ. ಗ್ರಾಮಗಳನ್ನು ಮದ್ಯ ಮುಕ್ತಗೊಳಿಸುವಂತೆ ಆಗ್ರಹಿಸಿ ಮಂಗಳವಾರ ಗ್ರಾಮಸ್ಥರು ಹಾಗೂ ಮಹಿಳೆಯರು ತಹಸೀಲ್ದಾರ್ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಿದರು.ಅಕ್ರಮ ಮದ್ಯ ಮಾರಾಟಗಾರರ ವಿರುದ್ಧ ಕಠಿಣ ಕ್ರಮಕೈಗೊಳ್ಳಲು ತಾಲೂಕು ಆಡಳಿತ ಹಾಗೂ ಅಬಕಾರಿ ಇಲಾಖೆ ವಿಫಲವಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಮದ್ಯದ ಚಟದಿಂದಾಗಿ ಹತ್ತಾರು ಕುಟುಂಬಗಳು ಬೀದಿಗೆ ಬರುವ ಸ್ಥಿತಿ ನಿರ್ಮಾಣವಾಗಿದ್ದರೂ ಅಧಿಕಾರಿಗಳು ನಿಗಾ ವಹಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪುರುಷರು ದುಡಿದು ತಂದ ಹಣವನ್ನೆಲ್ಲ ಮದ್ಯಕ್ಕೆ ಸುರಿಯುತ್ತಿರುವುದರಿಂದ ಸಂಸಾರ ನಡೆಸುವುದು ದುಸ್ತರವಾಗಿದೆ ಎಂದು ಮಹಿಳೆಯರು ಕಣ್ಣೀರು ಹಾಕಿದರು. ವಿದ್ಯಾರ್ಥಿಗಳೂ ಸಹ ಈ ಚಟಕ್ಕೆ ಬಲಿಯಾಗುತ್ತಿರುವುದು ಭವಿಷ್ಯದ ಬಗ್ಗೆ ಆತಂಕ ಉಂಟು ಮಾಡಿದೆ. ಗ್ರಾಮದಲ್ಲಿ 40ಕ್ಕೂ ಹೆಚ್ಚು ಸ್ಥಳಗಳಲ್ಲಿ ಹಗಲು-ರಾತ್ರಿ ಎನ್ನದೆ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದು ರಸ್ತೆಯಲ್ಲಿ ಮಹಿಳೆಯರು ನಡೆದುಕೊಂಡು ಹೋಗುವುದು ದುಸ್ತರವಾಗಿದೆ ಎಂದು ಗೌರಮ್ಮ ಕಟ್ಟಿಮನಿ, ಲಕ್ಷ್ಮಿ ಪಟ್ಟಣಶೆಟ್ಟಿ ಅಸಹಾಯಕತೆ ವ್ಯಕ್ತಪಡಿಸಿದರು.ಕೂಡಲೇ ಅಕ್ರಮ ಮದ್ಯದ ಅಡ್ಡೆ ಮುಚ್ಚಿ, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ವಸಂತಾ ಹಿರೇಮಠ, ಮಿನಾಕ್ಷಿ ಕಟ್ಟಿಮನಿ, ಲಲಿತಾ ದೇವರಮನಿ ಸೇರಿದಂತೆ ಅನೇಕ ಮಹಿಳೆಯರು ಒತ್ತಾಯಿಸಿದರು. ಬಳಿಕ ತಹಸೀಲ್ದಾರ್ ರಾಜು ಮಾವರ್ಕರ್ ಅವರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಡಿಎಸ್ಎಸ್ ಜಿಲ್ಲಾ ಗೌರವಾಧ್ಯಕ್ಷ, ಹೊನ್ನಪ್ಪ ದೊಡ್ಡಮನಿ, ತಾಲೂಕು ಅಧ್ಯಕ್ಷ ಕೋಟೇಶ ತಳಗೇರಿ, ಕರವೇ ಉಪಾಧ್ಯಕ್ಷ ಅಡಿವೆಪ್ಪ ಹೆಬಸೂರ, ಲಕ್ಷ್ಮಮ್ಮ ಕೊಟ್ಟೂರ. ಲಲಿತಾ ಕೊಟ್ಟೂರ, ಕಸ್ತೂರೆವ್ವ ಕಟ್ಟಿಮನಿ, ಚನ್ನವ್ವ ಕಟ್ಟಿಮನಿ, ಪ್ರಭಾವತಿ ಸಾತಣ್ಣವರ, ಸುಬಾಂಬಿ ನದಾಫ, ರೇಣುಕಾ ಯತ್ನಳ್ಳಿ, ಗಂಗವ್ವ ಡೊಡ್ಡಮನಿ ಸೇರಿದಂತೆ ಹಲವರಿದ್ದರು.