ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರುತುರುವೇಕೆರೆಯ ಕರ್ಣಾಟಕ ಬ್ಯಾಂಕ್‌ನವರು ರೈತರೊಬ್ಬರ ಸಾಲಕ್ಕಾಗಿ ಅಡವಿಟ್ಟ ಜಮೀನನ್ನು ಒಟಿಎಸ್‌ಗೆ ಅವಕಾಶ ನೀಡದೆ ಇ- ಟೆಂಡರ್ ಮೂಲಕ ಅತಿ ಕಡಿಮೆ ಬೆಲೆಗೆ ಹರಾಜು ಮಾಡಿ,ರೈತರನ್ನು ಬೀದಿಗೆ ತಳ್ಳಲು ಹೊರಟಿರುವ ಕ್ರಮವನ್ನು ವಿರೋಧಿಸಿ ಆಗಸ್ಟ 12 ರ ಸೋಮವಾರ ಬ್ಯಾಂಕಿನ ಮುಂದೆ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿರುವುದಾಗಿ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಹಾಗೂ ತುಮಕೂರು ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ತಿಳಿಸಿದ್ದಾರೆ.ತುಮಕೂರು ವಿಜ್ಞಾನ ಕೇಂದ್ರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2005ರಲ್ಲಿ ತುರುವೇಕೆರೆ ತಾಲೂಕು ತಾಳೆಕೆರೆ ಗ್ರಾಮದ ನಾಗರಾಜು ಎಂಬುವವರು ಟ್ರಾಕ್ಟರ್‌ಗಾಗಿ ತುರುವೇಕೆರೆ ಕರ್ನಾಟಕ ಬ್ಯಾಂಕಿನಿಂದ 4.50 ಲಕ್ಷದ ಸಾಲ ಪಡೆದಿದ್ದು, ಕಟ್ಟಲು ಸಾಧ್ಯವಾಗಿರಲಿಲ್ಲ. ಈಗ ಬ್ಯಾಂಕಿನವರು ಸಾಲದ ಮೇಲಿನ ಬಡ್ಡಿ, ಚಕ್ರ ಬಡ್ಡಿ ಸೇರಿಸಿ 34.80 ಲಕ್ಷ ರು ಬಾಕಿ ತೋರಿಸಿ, ಓಟಿಎಸ್‌ಗೂ ಅವಕಾಶ ನೀಡದೆ, ನ್ಯಾಯಾಲಯದ ಡಿಕ್ರಿ ಪ್ರಕಾರ ಈ ಟೆಂಡರ್ ಮೂಲಕ 3 ಕೋಟಿ ಬೆಲೆಬಾಳುವ ಆಸ್ತಿಯನ್ನು ಕೇವಲ 35.40 ಲಕ್ಷ ರೂಗಳಿಗೆ ಮಾರಾಟ ಮಾಡಿದ್ದಾರೆ. ಕೇಂದ್ರದ ಸರ್ಫೇಸಿ ಕಾಯ್ದೆಯನ್ನು ಮುಂದಿಟ್ಟುಕೊಂಡು ರೈತರ ಭೂಮಿಯನ್ನು ಈ ಹರಾಜು ಮಾಡಿರುವುದು ಸರಿಯಲ್ಲ. ಇದು ಆರ್.ಬಿ.ಐ ನಿಯಮಗಳಿಗೆ ವಿರುದ್ಧದ ಹಾಗೂ ರೈತವಿರೋಧಿ ನಡೆಯಾಗಿದೆ. ಹಾಗಾಗಿ ಆಗಸ್ಟ್ 12 ರಂದು ಬ್ಯಾಂಕಿನ ಮುಂದೆ ಬೃಹತ್ ಹೋರಾಟ ನಡಸಲಾಗುತ್ತಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಎಸ್.ಶಂಕರಪ್ಪ, ತಾಲೂಕು ಅಧ್ಯಕ್ಷ ಚಿಕ್ಕಬೋರೇಗೌಡ, ಶ್ರೀನಿವಾಸ್, ತಿಮ್ಮೇಗೌಡ, ಶಬ್ಬೀರ್ ಪಾಷ, ಅಸ್ಲಾಂಪಾಷ, ಮಹೇಶ್, ರಾಮಚಂದ್ರಪ್ಪ, ಈಶ್ವರಣ್ಣ, ರಾಜು.ಡಿ.ಕೆ. ಮತ್ತಿತರರು ಪಾಲ್ಗೊಂಡಿದ್ದರು.