ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ ಕೃಷ್ಣಾ ಮೇಲ್ದಂಡೆ ನೀರಾವರಿ ಯೋಜನೆಗೆ ಸರಿಯಾದ ಅನುದಾನ ನೀಡದ ಹಾಗೂ ಸಂತ್ರಸ್ತರ, ರೈತರ ಸಮಸ್ಯೆಗಳಿಗೆ ಸ್ಪಂದಿಸದ ರಾಜ್ಯ ಸರ್ಕಾರದ ವಿರುದ್ಧ ಅ.9ರಂದು ನಿಡಗುಂದಿ ತಾಲೂಕಿನ ಆಲಮಟ್ಟಿಯಲ್ಲಿ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ ಎಂದು ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ತಿಳಿಸಿದರು.
ಕನ್ನಡಪ್ರಭ ವಾರ್ತೆ ವಿಜಯಪುರ
ಕೃಷ್ಣಾ ಮೇಲ್ದಂಡೆ ನೀರಾವರಿ ಯೋಜನೆಗೆ ಸರಿಯಾದ ಅನುದಾನ ನೀಡದ ಹಾಗೂ ಸಂತ್ರಸ್ತರ, ರೈತರ ಸಮಸ್ಯೆಗಳಿಗೆ ಸ್ಪಂದಿಸದ ರಾಜ್ಯ ಸರ್ಕಾರದ ವಿರುದ್ಧ ಅ.9ರಂದು ನಿಡಗುಂದಿ ತಾಲೂಕಿನ ಆಲಮಟ್ಟಿಯಲ್ಲಿ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ ಎಂದು ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ತಿಳಿಸಿದರು.ನಗರದದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರೈತರ ಕೂಗಿಗೆ ಸ್ಪಂದಿಸಿದ ರಾಜ್ಯ ಸರ್ಕಾರ ವಿಶೇಷ ಕ್ಯಾಬಿನೆಟ್ ಮೂಲಕ ₹ 70 ಸಾವಿರ ಕೋಟಿ ಅನುದಾನದಲ್ಲಿ ಆಣೆಕಟ್ಟು ಎತ್ತರಿಸುತ್ತೇವೆ. ಅದರಿಂದ 130 ಟಿಎಂಸಿ ನೀರು ಶೇಖರಣೆ ಮಾಡಲಾಗುವುದು ಎಂದು ಘೋಷಣೆ ಮಾಡಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂಬ ಭರವಸೆ ಮೇರೆಗೆ ಹೋರಾಟವನ್ನು ತಾತ್ಕಾಲಿಕವಾಗಿ ತಡೆ ಹಿಡಿದಿದ್ದೇವೆ ಎಂದರು.
ಆಲಮಟ್ಟಿ ಡ್ಯಾಂ ಎತ್ತರವನ್ನು 519 ಮೀಟರ್‌ನಿಂದ ರಿಂದ 524ಕ್ಕೆ ಏರಿಸಬೇಕು ಎಂದು 1999ರಲ್ಲಿ ನಾವು ಹಾಗೂ ಇಲ್ಲಿನ ರೈತರು ಪ್ರತಿಭಟನೆ ಮಾಡಿದ್ದೆವು. ಆದರೆ ಇಂದಿನವರೆಗೂ ಯಾವುದೇ ಸರ್ಕಾರಗಳು ಸ್ಪಂದಿಸಿಲ್ಲ. ಸಿಎಂ ಸಿದ್ಧರಾಮಯ್ಯನವರು ಅಭಿವೃದ್ದಿ ಮಾಡಿದ್ದೇವೆ ಎನ್ನುತ್ತಿದ್ದಾರೆ, ಯಾವುದು ಅಭಿವೃದ್ಧಿ?, ಐದು ಗ್ಯಾರಂಟಿಗಳೇ ಅಭಿವೃದ್ಧಿಯಾ?. ಜನರ ಜುಟ್ಟಿಗೆ ಮಲ್ಲಿಗೆ ಹೂ ಮುಡಿಸೋ ಕೆಲಸ ಈ ಸರ್ಕಾರ ಮಾಡುತ್ತಿದೆ. ಇನ್ನು ಯುಕೆಪಿ 3ನೇ ಹಂತದಲ್ಲಿ ಮುಳುಗಡೆಯಾಗುವ ರೈತರ ಭೂಮಿಗೆ ದರ ಘೋಷಣೆ ಮಾಡಿದ್ದು, ಅದನ್ನು ಒನ್ ಟೈಮ್ ಸೆಟಲಮೆಂಟ್ ಮಾಡುವುದಾಗಿ ಘೋಷಣೆ ಮಾಡಬೇಕು. ನೀರಾವರಿ ಭೂಮಿಗೆ ₹ 50 ಲಕ್ಷ ಒಣಭೂಮಿಗೆ ₹ 40ಲಕ್ಷ ಪರಿಹಾರ ಕೊಡಬೇಕು. ಅದೆಲ್ಲವನ್ನೂ ಸರಿಪಡಿಸಬೇಕು ಎಂದು ಒತ್ತಾಯಿಸಿದರು.ನೀರಾವರಿ ಮಂತ್ರಿಗಳು ಬೆಂಗಳೂರು ಅಭಿವೃದ್ಧಿ ಮಾಡಲು ಇರುವ ಆಸಕ್ತಿ ನೀರಾವರಿ ಬಗ್ಗೆ ಇಲ್ಲ. ರಾಜ್ಯದ ನೀರಾವರಿ ಯೋಜನೆಗಳಿಗೆ ಕೆಲಸ ಮಾಡಬೇಕು, ಇಲ್ಲದಿದ್ದರೆ ಬೇರೆಯವರಿಗೆ ನೀರಾವರಿ ಹುದ್ದೆ ಬಿಟ್ಟು ಕೊಡಬೇಕು ಎಂದು ಡಿ.ಕೆ.ಶಿವಕುಮಾರ ಅವರಿಗೆ ಸಲಹೆ ನೀಡಿದರು. ಇನ್ನು ಸಿಎಂ ಸಿದ್ಧರಾಮಯ್ಯನವರು ಕೃಷ್ಣೆಯನ್ನು ತೋರಿಸಿ ಅಭಿವೃದ್ಧಿ ಮಾಡುತ್ತೇವೆ ಎಂದು ಅದೆಷ್ಟು ಕೋಟಿ ಸಾಲ ಮಾಡ್ತಾರೋ ಗೊತ್ತಿಲ್ಲ ಎಂದು ಟೀಕಿಸಿದರು.ಹೋರಾಟಗಾರ ಬಸವರಾಜ ಕುಂಬಾರ ಮಾತನಾಡಿ, ಜಿಲ್ಲೆಯಲ್ಲಿ ಹರಿಯುವ ಡೋಣಿ ನದಿ ಪ್ರವಾಹದಿಂದ ಪ್ರತಿಬಾರಿ ಅಕ್ಕಪಕ್ಕದ ಭೂಮಿ ಹಾಳಾಗುತ್ತಿದೆ. ಅದಕ್ಕೆ ಸರಿಯಾದ ದಿಕ್ಕಿನಲ್ಲಿ ಹರಿಯುಂತೆ ಯೋಜನೆ ರೂಪಿಸಬೇಕಿದೆ. ರೈತರು ಕೆಲವು ಬೆಳೆ ಬೆಳೆದು ಭೂಮಿಯನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಈ ಎರಡೂ ಕಾರ್ಯಕ್ರಮ ಅನುಷ್ಠಾನಕ್ಕೆ ಆಗ್ರಹಿಸಿ ಹೋರಾಟ ಕೈಗೊಳ್ಳಲಾಗುವುದು ಎಂದರು.
ಜಿಲ್ಲಾಧ್ಯಕ್ಷ ಸಂತೋಷ ಕೆಂಬೋಗಿ ಮಾತನಾಡಿ, ಇಂಡಿ ತಾಲೂಕಿನಲ್ಲಿ ಲಿಂಬೆ ಬೆಳೆಯುವುದರಿಂದ ಸರ್ಕಾರದಿಂದ ಒಂದು ಕಾರ್ಖಾನೆ ಮಾಡಿ ಲಿಂಬೆ ಬೆಳೆಗಾರರ ಮಕ್ಕಳಿಗೆ ಉದ್ಯೋಗ ಕೊಡುವ ಕೆಲಸ ಆಗಬೇಕಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಉದ್ಯೋಗ ಸೃಷ್ಠಿ ಆಗುವಂತೆ ಮಾಡಬೇಕು. ಜಿಲ್ಲೆಯ ಸಕ್ಕರೆ ಕಾರ್ಖಾನೆಗಳಲ್ಲಿ ₹ 3200ರಿಂದ 3600 ನಿಗದಿತ ಬೆಲೆ ನಿಗದಿ ಮಾಡಲಾಗಿದೆ. ಆದರೆ, ಮುಂದಿನ ಬಾರಿ ಈ ಬೆಲೆಯನ್ನು ಪ್ರತಿ ಟನ್ ಕಬ್ಬಿಗೆ ಕನಿಷ್ಟ ₹ 4000 ಬೆಲೆ ಘೋಷಣೆ ಮಾಡಿ ಕಾರ್ಖಾನೆ ಆರಂಭಿಸಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ರಾಜ್ಯ ಉಪಾಧ್ಯಕ್ಷ ಚಂದ್ರಶೇಖರ ಜಮಖಂಡಿ, ಮುಖಂಡರಾದ ಮಲ್ಲನಗೌಡ ಪಾಟೀಲ, ಶಂಕರಗೌಡ ಜಾಯನಗೌಡರ, ಶಿವಪುತ್ರಗೌಡ, ಕಲ್ಮೇಶ ಲಿಗಾಡಿ, ಬಸವರಾಜ ಕುಂಬಾರ ಉಪಸ್ಥಿತರಿದ್ದರು.