ಇಂದು ಬೃಹತ್ ಪ್ರತಿಭಟನೆ, ರಾಷ್ಟ್ರೀಯ ಹೆದ್ದಾರಿ ತಡೆ: ಪರಮೇಶಪ್ಪ ಹಲಗೇರಿ

| Published : Dec 12 2024, 12:34 AM IST

ಇಂದು ಬೃಹತ್ ಪ್ರತಿಭಟನೆ, ರಾಷ್ಟ್ರೀಯ ಹೆದ್ದಾರಿ ತಡೆ: ಪರಮೇಶಪ್ಪ ಹಲಗೇರಿ
Share this Article
  • FB
  • TW
  • Linkdin
  • Email

ಸಾರಾಂಶ

ಪಂಚಮಸಾಲಿ ಮೀಸಲಾತಿ ಹೋರಾಟಗಾರರ ಮೇಲೆ ಲಾಠಿ ಚಾರ್ಜ್ ಘಟನೆ ಖಂಡಿಸಿ ಡಿ. 12ರ ಗುರುವಾರ ಮುಂಜಾನೆ 10.30ಕ್ಕೆ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ಹಾಗೂ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

ರಟ್ಟೀಹಳ್ಳಿ: ಬೆಳಗಾವಿ ವಿಧಾನಸೌದ ಚಳಿಗಾಲ ಅಧಿವೇಶನ ಸಂದರ್ಭದಲ್ಲಿ ನಡೆದ ಪಂಚಮಸಾಲಿ ಮೀಸಲಾತಿ ಹೋರಾಟಗಾರರ ಮೇಲೆ ಲಾಠಿ ಚಾರ್ಜ್ ಘಟನೆ ಖಂಡಿಸಿ ಡಿ. 12ರ ಗುರುವಾರ ಮುಂಜಾನೆ 10.30ಕ್ಕೆ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ಹಾಗೂ ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಲಾಗುವುದು ಎಂದು ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ತಾಲೂಕಾಧ್ಯಕ್ಷ ಪರಮೇಶಪ್ಪ ಹಲಗೇರಿ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್ ಸರಕಾರ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡುವ ಭರವಸೆ ಹುಸಿ ಮಾಡಿ ಹೋರಾಟಗಾರರ ಮೇಲೆ ಮನ ಬಂದಂತೆ ಲಾಠಿ ಚಾರ್ಜ್ ಮಾಡುವ ಮೂಲಕ ಸಮಾಜದ ಕೆಂಗಣ್ಣಿಗೆ ಗುರಿಯಾಗಿದ್ದು, ಮುಂಬರುವ ದಿನಗಳಲ್ಲಿ ಸರಕಾರಕ್ಕೆ ತಕ್ಕ ಪಾಠ ಕಲಿಸಲಾಗುವುದು ಎಂದು ಆಕ್ರೋಶ ವ್ಯಕ್ತ ಪಡಿಸಿದರು.

ಬೆಳಗಾವಿ ಅಧಿವೇಶನ ಸಂದರ್ಭದಲ್ಲಿ 2ಎ ಮೀಸಲಾತಿ ಹಕ್ಕಿಗಾಗಿ ನೆರೆದ ಸಾವಿರಾರು ಸಮಾಜ ಬಾಂಧವರು ಶಾಂತಿಯುತವಾಗಿ ಹೋರಾಟ ಮಾಡುವವರ ಮೇಲೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಕುತಂತ್ರ ಮಾಡಿ ಸಮಾಜದ ವಕೀಲರು, ಹಿರಿಯರು ಮುಖಂಡರು ಎನ್ನದೆ ಮನ ಬಂದಂತೆ ತಳಿಸಿದ ಪರಿಣಾಮ ನೂರಾರು ಮಂದಿ ಆಸ್ಪತ್ರೆ ಸೇರುವಂತಾಗಿದೆ. ಇದನ್ನು ಸಮಾಜ ಉಗ್ರವಾಗಿ ಖಂಡಿಸುವುದಲ್ಲದೆ ರಾಜ್ಯಾದ್ಯಂತ ಪ್ರತಿ ತಾಲೂಕು ಕೇಂದ್ರ, ಜಿಲ್ಲಾ ಕೇಂದ್ರದಲ್ಲಿ ಪ್ರತಿಭಟನೆ ಹಾಗೂ ರಸ್ತೆ ತಡೆ ಮಾಡುವುದರ ಮೂಲಕ ಸರಕಾರಕ್ಕೆ ಬಿಸಿ ಮುಟ್ಟಿಸಲಾಗುವುದು ಎಂದು ಎಚ್ಚರಿಸಿದರು.ಸಮಾಜದ ಮುಖಂಡ ಮಾಲತೇಶ ಬೆಳಕೆರಿ ಮಾತನಾಡಿ, ಪಂಚಮಸಾಲಿ ಸಮಾಜದ ಕೂಡಲ ಸಂಗಮದ ಪ್ರಥಮ ಜಗದ್ಗುರು ಬಸವಜಯ ಮೃತ್ಯಂಜಯ ಮಹಾ ಸ್ವಾಮಿಗಳ ಆದೇಶದ ಮೇರೆಗೆ ರಾಜ್ಯಾದ್ಯಂತ ಹೋರಾಟಕ್ಕೆ ಕರೆ ಕೊಟ್ಟಿದ್ದು ಆ ನಿಟ್ಟಿನಲ್ಲಿ ಪಟ್ಟಣದ ಭಗತ್‌ಸಿಂಗ್ ವೃತ್ತದಲ್ಲಿ ತಾಲೂಕಿನ ಸಾವಿರಾರು ಸಮಾಜ ಬಾಂಧವರು ಜಮಾವಣೆಗೊಂಡು ನಂತರ ಶಿವಾಜಿ ಸರ್ಕಲ್, ಹಳೇ ಬಸ್ ಸ್ಟ್ಯಾಂಡ್ ಸರ್ಕಲ್, ಸಂಗೋಳ್ಳಿ ರಾಯಣ್ಣ ವೃತ್ತದ ಮೂಲಕ ಹೊಸ ಬಸ್ ಸ್ಟ್ಯಾಂಡ್ ಸರ್ಕಲ್‌ನಲ್ಲಿ ಮಾನವ ಸರಪಳಿ ಮಾಡಿ ನಂತರ ರಾಷ್ಟ್ರೀಯ ಹೆದ್ದಾರಿ ತಡೆದು ಸರಕಾರದ ವಿರುದ್ಧ ಪ್ರತಿಭಟನೆ ನಡೆಸಲಾಗುವುದು ಎಂದರು.

ಪಂಚಮಸಾಲಿ ಸಮಾಜದ ತಾಲೂಕು ಉಪಾಧ್ಯಕ್ಷ ರಾಘವೇಂದ್ರ ಹರವಿಶೆಟ್ಟರ್, ಖಜಾಂಚಿ ರಾಜುಗೌಡ ಪಾಟೀಲ್, ಕರಬಸಪ್ಪ ಬಳ್ಳಾರಿ, ಶಂಕರಗೌಡ ಕರೆಗೌಡ್ರ, ಗಿರೀಶ ಪೂಜಾರ, ನಾಗರಾಜ ತೋಟದ, ಮಲ್ಲಿಕಾರ್ಜುನ ಪೂಜಾರ ಮುಂತಾದವರು ಇದ್ದರು.

ರಾಣಿಬೆನ್ನೂರಲ್ಲಿ ಪ್ರತಿಭಟನೆ

ಪಂಚಮಸಾಲಿ ಸಮಾಜದ 2ಎ ಮೀಸಲಾತಿಗಾಗಿ ಆಗ್ರಹಿಸಿ ಡಿ.12ರಂದು ಬೆಳಗ್ಗೆ 10ಕ್ಕೆ ನಗರದ ಮಿನಿವಿಧಾನಸೌಧ ಎದುರು ಸಮಾಜದ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಆದ್ದರಿಂದ ಸಮಾಜ ಭಾಂದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪ್ರತಿಭಟನೆ ಯಶಸ್ವಿಗೊಳಿಸಬೇಕು ಎಂದು ಪಂಚಮಸಾಲಿ ಸಮಾಜದ ತಾಲೂಕಾಧ್ಯಕ್ಷ ಸಿದ್ದು ಚಿಕ್ಕಬಿದರಿ ಹಾಗೂ ನಗರ ಘಟಕ ಅಧ್ಯಕ್ಷ ಶಿವಪ್ಪ ಗುರಿಕಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.