2 ಕೋಟಿ ವೆಚ್ಚದಲ್ಲಿ ಮತಿಘಟ್ಟ- ಬೀರನಹಳ್ಳಿ ಸಂಪರ್ಕ ರಸ್ತೆ ಅಭಿವೃದ್ಧಿ: ಶಾಸಕ ಕೆ.ಎಸ್. ಆನಂದ್

| Published : Apr 16 2025, 12:49 AM IST

2 ಕೋಟಿ ವೆಚ್ಚದಲ್ಲಿ ಮತಿಘಟ್ಟ- ಬೀರನಹಳ್ಳಿ ಸಂಪರ್ಕ ರಸ್ತೆ ಅಭಿವೃದ್ಧಿ: ಶಾಸಕ ಕೆ.ಎಸ್. ಆನಂದ್
Share this Article
  • FB
  • TW
  • Linkdin
  • Email

ಸಾರಾಂಶ

ಕಡೂರು, ನಮ್ಮ ವಿಧಾನಸಭಾ ಕ್ಷೇತ್ರದ ಮತಿಘಟ್ಟ ಗ್ರಾಮದಿಂದ ಬೀರನಹಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಕಾಂಕ್ರಟ್ ರಸ್ತೆ ಅಭಿವೃದ್ಧಿಗೆ 2 ಕೋಟಿ ರು. ವೆಚ್ಚದಲ್ಲಿ ಸುಮಾರು 2 ಕಿ.ಮೀ ವರೆಗೂ ಕಾಮಗಾರಿ ನಡೆಯಲಿದೆ ಎಂದು ಶಾಸಕ ಕೆ.ಎಸ್. ಆನಂದ್ ತಿಳಿಸಿದರು.

ಎರಡು ಕೋಟಿ ರೂ ವೆಚ್ಚದ ರಸ್ತೆಯ ಕಾಮಗಾರಿಗೆ ಭೂಮಿ ಪೂಜೆ.

ಕನ್ನಡಪ್ರಭ ವಾರ್ತೆ, ಕಡೂರು

ನಮ್ಮ ವಿಧಾನಸಭಾ ಕ್ಷೇತ್ರದ ಮತಿಘಟ್ಟ ಗ್ರಾಮದಿಂದ ಬೀರನಹಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಕಾಂಕ್ರಟ್ ರಸ್ತೆ ಅಭಿವೃದ್ಧಿಗೆ 2 ಕೋಟಿ ರು. ವೆಚ್ಚದಲ್ಲಿ ಸುಮಾರು 2 ಕಿ.ಮೀ ವರೆಗೂ ಕಾಮಗಾರಿ ನಡೆಯಲಿದೆ ಎಂದು ಶಾಸಕ ಕೆ.ಎಸ್. ಆನಂದ್ ತಿಳಿಸಿದರು.ಮಂಗಳವಾರ ಕಡೂರು ವಿಧಾನಸಭಾ ಕ್ಷೇತ್ರದ ಮತಿಘಟ್ಟದಲ್ಲಿ ಬೀರನಹಳ್ಳಿವರೆಗೆ ಸಂಪರ್ಕದ ಕಾಂಕ್ರಟ್ ರಸ್ತೆ ನಿರ್ಮಾಣದ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು. ಈ ಸಂಪರ್ಕ ರಸ್ತೆ ನಿರ್ಮಾಣಕ್ಕೆ ಪ್ರಾರಂಭಿಕವಾಗಿ ಒಂದು ಕೋಟಿ ರು. ಮಂಜೂರಾಗಿದೆ. ಈ ಅನುದಾನದಲ್ಲಿ 1.300 ಮೀಟರ್ ರಸ್ತೆ ಕಾಮಗಾರಿ ಮುಗಿಯಲಿದ್ದು ಶೀಘ್ರದಲ್ಲೇ ಉಳಿದ ರಸ್ತೆ ಕಾಮಗಾರಿಗೆ ಮತ್ತೆ ಒಂದು ಕೋಟಿ ಮಂಜೂರು ಮಾಡಿಸಲಾಗುವುದು ಎಂದರು. ಬಹುದಿನಗಳ ಬೇಡಿಕೆ ಆಗಿದ್ದ ಈ ರಸ್ತೆ ನಿರ್ಮಾಣದಿಂದ ಮತಿಘಟ್ಟ ಗ್ರಾಮದಿಂದ ಮಲ್ಲಿದೇವಿಹಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುತ್ತದೆ. ಇದರಿಂದ ಈ ಸುತ್ತಮುತ್ತಲಿನ ಗ್ರಾಮಗಳ ಜನರಿಗೆ 12 ಕಿ.ಮೀ ಸುತ್ತಿ ಬರುವುದು ತಪ್ಪುತ್ತದೆ. 1.3 ಕಿ ಮೀ ರಸ್ತೆ ಕಾಮಗಾರಿಗೆ 1 ಕೋಟಿ ಸಚಿವ ಮಾಂಕಾಳ ವೈದ್ಯರ ಅನುದಾನದಲ್ಲಿ ಬಂದಿದೆ ಎಂದ ಅವರು ಈ ರಸ್ತೆ ನಿರ್ಮಾಣ ಮಾಡಲು ಅಂದು ತಮ್ಮ ಜಾಗ ನೀಡಿದ್ದ ಎಂ.ಟಿ. ಮುದ್ದಪ್ಪನವರ ಕುಟುಂಬದವರಿಗೆ ಜನರ ಪರವಾಗಿ ಕೃತಜ್ಞತೆ ಅರ್ಪಿಸಿದರು. ಈ ಭಾಗದಲ್ಲಿ ಅಗತ್ಯವಾಗಿ ಆಗಬೇಕಿರುವ ಜನೋಪಯೋಗಿ ಕಾಮಗಾರಿಗಳನ್ನು ಆದ್ಯತೆ ಮೇರೆಗೆ ನೆರವೇರಿಸಲಾಗುವುದು. ರಾಜ್ಯ ಸರ್ಕಾರ ನೀಡುತ್ತಿರುವ ಗ್ಯಾರಂಟಿ ಯೋಜನೆಗಳಿಂದ ಬಡವರು, ಕಾರ್ಮಿಕರು, ರೈತ ವರ್ಗದವರ ಜೀವನ ಸುಗಮ ವಾಗಿ ನಡೆಯುತ್ತಿದೆ. ಇಂತಹ ಜನಪರ ಕೆಲಸ ಮಾಡುವ ಜೊತೆಗೆ ಅಭಿವೃದ್ಧಿ ಭರದಿಂದ ಸಾಗುತ್ತಿದೆ. ವಿರೋಧ ಪಕ್ಷಗಳ ಅಪ ಪ್ರಚಾರದ ನಡುವೆಯೂ ರಾಜ್ಯ ಸರ್ಕಾರ ರಾಜ್ಯದ ಅಭಿವೃದ್ಧಿ ಜೊತೆಗೆ ಉತ್ತಮ ಆಡಳಿತ ನೀಡುತ್ತಿರುವುದು ದಿನ ನಿತ್ಯ ವರದಿ ಆಗುತ್ತಿದೆ ಎಂದರು. ಮತಿಘಟ್ಟ ಗ್ರಾಮದಲ್ಲಿ ₹25 ಲಕ್ಷ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾರ್ಯ ನಡೆಯಲಿದೆ. ಸಿದ್ದಾಪುರ ರಸ್ತೆ ನಿರ್ಮಾಣ ಕಾರ್ಯ ಸಧ್ಯದಲ್ಲೇ ಆರಂಭ ಆಗಲಿದೆ. ಶಕ್ತಿ ಯೋಜನೆಯಿಂದ ರಾಜ್ಯದಲ್ಲಿ ಕೆ ಎಸ್ ಆರ್ ಟಿ ಸಿ ಆದಾಯ ಹೊಂದಿದೆ. ಕಡೂರು ಸಾರಿಗೆ ಘಟಕಕ್ಕೆ 12 ಹೊಸ ಬಸ್ ಬಂದಿದೆ. ಹೆಚ್ಚುವರಿಯಾಗಿ 7 ಹೊಸ ಬಸ್‌ಗಳು ಸಧ್ಯದಲ್ಲೇ ಬರಲಿವೆ. ಮತಿಘಟ್ಟ ಮತ್ತು ಕೆರೆಸಂತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅತಿ ಹೆಚ್ಚಿನ ಅಭಿವೃದ್ಧಿಯ ಕಾರ್ಯಗಳನ್ನು ತಮ್ಮ ಅವಧಿಯಲ್ಲಿ ಮಾಡಲಾಗಿದೆ ಎಂದರು. ಮತಿಘಟ್ಟ ಗ್ರಾಪಂ ಅಧ್ಯಕ್ಷೆ ಜೆ. ಸವಿತಾ. ಸದಸ್ಯರಾದ ಶ್ರೀಕಂಠ ಒಡೆಯರ್, ಲಕ್ಕೇನಹಳ್ಳಿ ಕೃಷ್ಣ ಮೂರ್ತಿ, ಪಿಡಿಒ ಹನು ಮಂತಪ್ಪ, ಮುಖಂಡರಾದ ಕರಿಬಡ್ಡೆ ಶ್ರೀನಿವಾಸ್, ಎಂ.ಟಿ.ಶಶಿಧರ್, ಕಲ್ಲೇಶ್, ದಿನೇಶ್, ಗೋವಿಂದಪ್ಪ,ರಾಮಚಂದ್ರ ನಾಯ್ಕ, ಅಣ್ಣಪ್ಪ, ಆನಂದ್, ರಾಘು, ರವಿನಾಯ್ಕ,ಅರುಣ್ ಕುಮಾರ್, ಕೆ ಆರ್ ಐ ಡಿ ಎಲ್ ನ ಎಇಇ ಅಶ್ವಿನಿ, ಗಿರೀಶ್, ಲಿಂಗರಾಜು ಮತ್ತಿತರರು ಇದ್ದರು.

-- ಬಾಕ್ಸ್ --

ನನ್ನ ರಾಜಕೀಯದ ತವರೂರು ಮತಿಘಟ್ಟ ಕ್ಷೇತ್ರ ತಮ್ಮ ಸಕ್ರಿಯ ರಾಜಕಾರಣದಲ್ಲಿ ನನ್ನನ್ನು ಪ್ರೋತ್ಸಾಹ ನೀಡುವ ಮೂಲಕ ಈ ಭಾಗದ ಜನರು ಬೆಳೆಸಿದ್ದಾರೆ. ತಮ್ಮ ತಾಯಿ ಜಿಪಂ ಸದಸ್ಯರಾಗಲು ಮತ್ತು ತಾವು ಕೂಡ ಹಂತ ಹಂತವಾಗಿ ಬೆಳೆಯಲು ಈ ಭಾಗದ ಮತದಾರರು ಕಾರಣರಾಗಿದ್ದಾರೆ. ಹಾಗಾಗಿ ಈ ಭಾಗದ ಸಮಗ್ರ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುತ್ತೇನೆ ಎಂದು ಶಾಸಕ ಆನಂದ್ ಹೇಳಿದರು.15ಕೆಕೆಡಿಯು1.

ಕಡೂರು ವಿಧಾನಸಭಾ ಕ್ಷೇತ್ರದ ಶಾಸಕ ಕೆ. ಎ ಸ್ .ಆನಂದ್ ಮತಿಘಟ್ಟ ಗ್ರಾಮದಲ್ಲಿ ಮತಿಘಟ್ಟ-ಬೀರನಹಳ್ಳಿಯ ಕಾಂಕ್ರೀಟ್ ರಸ್ತೆಯ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು.