ಸಾರಾಂಶ
ಹಾನಗಲ್ಲ ತಾಲೂಕಿನ ವರ್ದಿ ವಿವಿಧ ಕಾಮಗಾರಿಗಳಿಗೆ ಶಾಸಕ ಶ್ರೀನಿವಾಸ ಮಾನೆ ಭೂಮಿಪೂಜೆ ನೆರವೇರಿಸಿದರು.
ಹಾನಗಲ್ಲ: ತಾಲೂಕಿನ ಶಂಕರಿಕೊಪ್ಪ ಹಾಗೂ ಚಿಕ್ಕಾಂಶಿ ಹೊಸೂರು ಗ್ರಾಮಗಳಲ್ಲಿ ಅಲ್ಪಸಂಖ್ಯಾತರ ಮೌಲಾನಾ ಆಜಾದ್ ವಸತಿ ಕಾಲೇಜು ಮತ್ತು ಶಾಲೆಗಳ ಕಟ್ಟಡಕ್ಕೆ ಜಾಗ ಗುರುತಿಸಲಾಗಿದ್ದು, ₹32 ಕೋಟಿ ಅನುದಾನ ಶೀಘ್ರದಲ್ಲಿ ಬಿಡುಗಡೆಯಾಗಲಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.
ತಾಲೂಕಿನ ವರ್ದಿ ಗ್ರಾಮದಲ್ಲಿ ಮುಖ್ಯಮಂತ್ರಿಗಳ ಕಾಲನಿ ಅಭಿವೃದ್ಧಿ ಕಾರ್ಯಕ್ರಮದಡಿ ₹20 ಲಕ್ಷ ವೆಚ್ಚದಲ್ಲಿ ಅಲ್ಪಸಂಖ್ಯಾತರ ಕಾಲನಿ ಅಭಿವೃದ್ಧಿ ಕಾಮಗಾರಿ, ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯಿಂದ ₹20 ಲಕ್ಷ ವೆಚ್ಚದಲ್ಲಿ ಗೌಸಿಯಾ ಅರಬಿ ಮದರಸಾ ನೂತನ ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ, ₹20 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ಅಲ್ಪಸಂಖ್ಯಾತರ ಸ್ಮಶಾನದ ಆವರಣ ಗೋಡೆ ಉದ್ಘಾಟಿಸಿ ಅವರು ಮಾತನಾಡಿದರು. ಸದ್ಯಕ್ಕೆ ಅಲ್ಪಸಂಖ್ಯಾತರ ಮೌಲಾನಾ ಆಜಾದ್ ವಸತಿ ಕಾಲೇಜು ಮತ್ತು ಶಾಲೆಗಳು ಬಾಡಿಗೆ ಕಟ್ಟಡದಂತೆ ನಡೆಯುತ್ತಿದ್ದು, ಶೀಘ್ರ ಕಟ್ಟಡ ನಿರ್ಮಿಸಲಾಗುವುದು. ತಿಳವಳ್ಳಿ ಗ್ರಾಮಕ್ಕೆ ಮೌಲಾನಾ ಆಜಾದ ಮಾದರಿ ಶಾಲೆ ಮಂಜೂರಿಯಾಗಿದೆ. ತಾಲೂಕಿನಲ್ಲಿರುವ ಅಲ್ಪಸಂಖ್ಯಾತರ ಶಾಲೆ ಹಾಗೂ ವಸತಿ ಶಾಲೆಗಳಿಗೆ ಅಗತ್ಯ ಮೂಲಭೂತ ಸೌಲಭ್ಯ ಕಲ್ಪಿಸಲಾಗುತ್ತಿದೆ. ಕಾಲನಿಗಳ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದರು.ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ನಿರ್ದೇಶಕ ಜಿಲಾನಿ ಮೊಕಾಶಿ ಮಾತನಾಡಿ, ಗ್ರಾಮದ ಸ್ಮಶಾನವನ್ನು ಮಾದರಿಯಾಗಿ ಅಭಿವೃದ್ಧಿಪಡಿಸಲಾಗಿದೆ. ಗ್ರಾಮಸ್ಥರೂ ಈ ಕಾರ್ಯದಲ್ಲಿ ಸಹಕಾರ ನೀಡಿದ್ದಾರೆ. ಇಂಥ ಮನೋಭಾವ ಪ್ರತಿಯೊಬ್ಬರಲ್ಲಿಯೂ ಬೆಳೆದಾಗ ಸಾಮಾಜಿಕ ಶ್ರೇಯೋಭಿವೃದ್ಧಿ ಸಾಧ್ಯವಿದೆ ಎಂದರು.
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಅಶೋಕ ಗಡ್ಡಿಗೌಡ್ರ, ನರೇಗಲ್ ಗ್ರಾಪಂ ಅಧ್ಯಕ್ಷ ಜಾಫರಸಾಬ್ ಮುಲ್ಲಾಲ, ಉಪಾಧ್ಯಕ್ಷೆ ಲಕ್ಷ್ಮವ್ವ ಸಣ್ಣಪ್ಪನವರ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕಾಧ್ಯಕ್ಷ ವಿಜಯಕುಮಾರ ದೊಡ್ಡಮನಿ, ಮುಖಂಡರಾದ ಕೆ.ಬಿ. ಪವಾಡಿ, ಎಂ.ಎ. ನೆಗಳೂರ, ಗ್ರಾಪಂ ಸದಸ್ಯರಾದ ಹುಸೇನಮಿಯಾ ಸವಣೂರ, ಈರಪ್ಪ ಬೂದಿಹಾಳ, ರೇವಣೆಪ್ಪ ಬಾರ್ಕಿ, ಫಕ್ಕೀರೇಶ ಅಗಸಿಬಾಗಿಲ, ಬಸವರಾಜ ಬಾರ್ಕಿ, ಗಾಯಿತ್ರಿ ಮರಿಲಿಂಗಣ್ಣನವರ, ರತ್ನವ್ವ ನಾಗನಗೌಡ್ರ, ಅಂಜುಮನ್ ಅಧ್ಯಕ್ಷ ಪೀರಹಜರತ್ ಮನ್ಸೂರ್, ಸುಲೇಮಾನ್ ಮುಲ್ಲಾ, ಕಾಸೀಂಸಾಬ ತಂಡೂರ, ಪಾಪು ದಂಡಿನವರ, ರಜಾಕ್ ನರೇಗಲ್, ಹಸನಮಿಯಾ ತಂಡೂರ ಮೊದಲಾದವರಿದ್ದರು.