ಮೇ 3 ರಿಂದ 12: ಕಾಜೂರು ಉರೂಸ್ ಮಹಾಸಂಭ್ರಮ

| Published : Apr 16 2024, 01:00 AM IST

ಸಾರಾಂಶ

ಮೇ 3 ರಂದು ಉರೂಸ್ ಸಮಾರಂಭದ ಉದ್ಘಾಟನೆಯನ್ನು ತಾ. ಸುನ್ನೀ ಸಂಯುಕ್ತ ಜಮಾಅತ್ ಸಹಾಯಕ ಖಾಝಿ ಸಯ್ಯಿದ್ ಸಾದಾತ್ ತಂಙಳ್ ನೆರವೇರಿಸಲಿದ್ದು, ಧ್ವಜಾರೋಹಣವನ್ನು ಉರೂಸ್ ಸಮಿತಿ ಅಧ್ಯಕ್ಷ ಕೆ.ಯು ಇಬ್ರಾಹಿಂ ಕಾಜೂರು ನಡೆಸಲಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿಸುಮಾರು 800 ವರ್ಷಗಳ ಇತಿಹಾಸ ಹೊಂದಿರುವ, ದಕ್ಷಿಣ ಭಾರತದ ಅಜ್ಮೀರ್ ಎಂದೇ ಖ್ಯಾತಿವೆತ್ತಿರುವ ಸರ್ವಧರ್ಮೀಯರ ಸಮನ್ವಯ ಕೇಂದ್ರ ಕಾಜೂರು ದರ್ಗಾ ಶರೀಫ್‌ನಲ್ಲಿ ಈ ವರ್ಷದ ಉರೂಸ್ ಮಹಾಸಂಭ್ರಮವು ಮೇ 3 ರಿಂದ ಆರಂಭಗೊಂಡು ಮೇ 12 ರ ವರೆಗೆ ವಿವಿಧ ಧಾರ್ಮಿಕ ಸಾಮಾಜಿಕ ಶೈಕ್ಷಣಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಎಂದಿನಂತೆ ಕಾಜೂರು ಮತ್ತು ಕಿಲ್ಲೂರು ಜಂಟಿ ಜಮಾಅತ್ ಗಳ ಆಶ್ರಯದಲ್ಲಿ ರಚನೆಯಾಗಿರುವ ಉರೂಸ್ ಸಮಿತಿಯ ನೇತೃತ್ವದಲ್ಲಿ ಉರೂಸ್ ಕಾರ್ಯಕ್ರಮಗಳು ನಡೆಯಲಿದೆ ಎಂದು ಉರೂಸ್ ಸಮಿತಿ ಅಧ್ಯಕ್ಷ ಕೆ.ಯು. ಇಬ್ರಾಹಿಂ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.ಗೌರವಾಧ್ಯಕ್ಷ ಸಯ್ಯಿದ್ ಕೆ.ಎಸ್. ಆಟಕೋಯ ತಂಙಳ್ ಕುಂಬೋಳ್ ಮತ್ತು ದ.ಕ ಜಿಲ್ಲಾ ಸಂಯುಕ್ತ ಜಮಾಅತ್ ಖಾಝಿ ಸಯ್ಯಿದ್ ಕೂರತ್ ತಂಙಳ್ ಅವರ ಮಾರ್ಗದರ್ಶನದಲ್ಲಿ ನಡೆಯುವ ಕಾರ್ಯಕ್ರಮದ ನೇತೃತ್ವವನ್ನು ಸಯ್ಯಿದ್ ಕಾಜೂರು ತಂಙಳ್ ವಹಿಸಲಿದ್ದಾರೆ.ಮೇ 3 ರಂದು ಉರೂಸ್ ಸಮಾರಂಭದ ಉದ್ಘಾಟನೆಯನ್ನು ತಾ. ಸುನ್ನೀ ಸಂಯುಕ್ತ ಜಮಾಅತ್ ಸಹಾಯಕ ಖಾಝಿ ಸಯ್ಯಿದ್ ಸಾದಾತ್ ತಂಙಳ್ ನೆರವೇರಿಸಲಿದ್ದು, ಧ್ವಜಾರೋಹಣವನ್ನು ಉರೂಸ್ ಸಮಿತಿ ಅಧ್ಯಕ್ಷ ಕೆ.ಯು ಇಬ್ರಾಹಿಂ ಕಾಜೂರು ನಡೆಸಲಿದ್ದಾರೆ.ಸಯ್ಯಿದ್ ಕೂರತ್ ತಂಙಳ್ ಅಧ್ಯಕ್ಷತೆ ವಹಿಸಿ ದುಆ ಆಶೀರ್ವಚನ ನೀಡಲಿದ್ದಾರೆ. ಉರೂಸ್ ಪ್ರಯುಕ್ತ 10 ದಿನಗಳಲ್ಲಿ ಪ್ರತಿದಿನ ರಾತ್ರಿ ಕರ್ನಾಟಕ- ಕೇರಳದ ಪ್ರಸಿದ್ಧ ವಾಗ್ಮಿಗಳಿಂದ ಧಾರ್ಮಿಕ ಪ್ರವಚನ ನಡೆಯಲಿದೆ. ಈ ಉಪನ್ಯಾಸ ಮಾಲಿಕೆಯನ್ನು ಸಯ್ಯಿದ್ ಕಾಜೂರು ತಂಙಳ್ ಉದ್ಘಾಟಿಸಲಿದ್ದಾರೆ. ಮೇ 9 ರಂದು ಆಧ್ಯಾತ್ಮಿಕ ಕಾರ್ಯಕ್ರಮವಾದ ‘ಬೃಹತ್ ದ್ಸಿಕ್ರ್ ಮಜ್ಲಿಸ್’ ನಡೆಯಲಿದೆ.

ಮೇ 12 ಸರ್ವಧರ್ಮೀಯರ ಸೌಹಾರ್ದ ಸಂಗಮ:ಮೇ 12 ರಂದು ಸಂಜೆ ಸರ್ವಧರ್ಮೀಯರ ಸೌಹಾರ್ದ ಸಮಾರಂಭ ನಡೆಯಲಿದ್ದು, ಸಯ್ಯಿದ್ ಕುಂಬೋಳ್ ತಂಙಳ್ ಅಧ್ಯಕ್ಷತೆ ವಹಿಸಲಿದ್ದಾರೆ. ಕರ್ನಾಟಕ ಸರ್ಕಾರದ ಸಚಿವರು, ಮಾಜಿ ಸಚಿವರು, ಶಾಸಕರು ಭಾಗವಹಿಸಲಿದ್ದಾರೆ. ಖಾಝಿ ಝೈನುಲ್ ಉಲಮಾ ಮಾಣಿ ಉಸ್ತಾದ್, ಸಯ್ಯಿದ್ ಜಿಫ್ರಿ ತಂಙಳ್ ಬೆಳ್ತಂಗಡಿ, ಸಯ್ಯಿದ್ ಮುಖ್ತಾರ್ ತಂಙಳ್ ಕುಂಬೋಳ್, ಯೆನಪೋಯ ಅಬ್ದುಲ್ಲಕುಂಞಿ, ಶಾಫಿ ಸಅದಿ ಬೆಂಗಳೂರು, ಡಾ. ಅಬ್ದುರಶೀದ್ ಝೈನಿ, ಅಬ್ದುಲ್ ಅಝೀಝ್ ದಾರಿಮಿ ಚೊಕ್ಕಬೆಟ್ಟು, ಡಾ. ದೇವರ್ಸೂಲ ಅಬ್ದುಸ್ಸಲಾಂ ಮುಸ್ಲಿಯಾರ್, ಮುಸ್ಲಿಂ ಸೆಂಟ್ರಲ್ ಕಮಿಟಿ ಅಧ್ಯಕ್ಷ ಮುಹಮ್ಮದ್ ಮಸೂದ್ ಮೊದಲಾದವರು ಭಾಗವಹಿಸಲಿದ್ದಾರೆ.

ಶೈಕ್ಷಣಿಕ ಪ್ರಗತಿ:

ಶಿಕ್ಷಣ ಕ್ಷೇತ್ರದಲ್ಲಿ ಪ್ರಗತಿಯ ಹೆಜ್ಜೆ ಇಡುತ್ತಾ ಬಂದಿರುವ ಕಾಜೂರಿನಲ್ಲಿ ಈಗಾಗಲೇ ರಹ್ಮಾನಿಯಾ ಪ್ರೌಢ ಶಾಲೆ ನಡೆಯುತ್ತಿದ್ದು, 450 ಕ್ಕೂ ಮಿಕ್ಕ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಮತ್ತು ವಸತಿ ವ್ಯವಸ್ಥೆ ಒದಗಿಸುತ್ತಿದೆ. ಯಾತ್ರಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಪ್ರತಿದಿನ ಮಧ್ಯಾಹ್ನದ ಊಟದ ವ್ಯವಸ್ಥೆ ಇರುತ್ತದೆ. ಕಾಜೂರು ಪರಿಸರದ ಸುತ್ತ ಮುತ್ತ ಶಿಕ್ಷಣ ವಂಚಿತ ಹೆಣ್ಣು ಮಕ್ಕಳಿಗೆ ಟೈಲರಿಂಗ್, ಶರೀಅತ್ ಸಹಿತ ಸಮನ್ವಯ ವಿದ್ಯಾಭ್ಯಾಸವನ್ನು ಉಚಿತವಾಗಿ ನೀಡುತ್ತಿದ್ದೇವೆ. ಜೊತೆಗೆ ಈ ಬಾರಿ ರಾಹ ಇಂಗ್ಲೀಷ್ ಮೀಡಿಯಂ ಪಬ್ಲಿಕ್ ಸ್ಕೂಲ್ ಎಂಬ ಹೆಸರಿನಲ್ಲಿ ಆಂಗ್ಲ ಮಾಧ್ಯಮದ 1 ರಿಂದ 8 ನೇ ತರಗತಿ ವರೆಗೆ ಶಾಲೆಗೆ ಶಿಕ್ಷಣ ಇಲಾಖೆಯಿಂದ ಅನುಮತಿ ದೊರೆತಿದೆ. ಸರ್ಕಾರದ 1.50 ಕೋಟಿ ರು. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಮೂರಂತಸ್ತಿನ ‘ಮುಸಾಫಿರ್ ಖಾನಾ ಕಟ್ಟಡ’ದ ಕಾಮಗಾರಿ ಅಂತಿಮ ಹಂತ ತಲುಪಿದ್ದು ಉದ್ಘಾಟನೆಗೆ ಸನ್ನದ್ಧವಾಗಿದೆ. ಅಂತೂ ಕಾಜೂರಿನಲ್ಲಿ ಮತ್ತೊಮ್ಮೆ ಉರೂಸ್ ಸಂಭ್ರಮದ ಗತಕಾಲದ ವೈಭವದ ದಿನಗಳು ಮತ್ತೆ ಮರುಕಳಿಸಲಿದೆ.

ಮೇ 12 ರಂದು ರಾತ್ರಿ ಉರೂಸ್ ಸಮಾರೋಪದಲ್ಲಿ ಸುಲ್ತಾನುಲ್ ಉಲಮಾ ಇಂಡಿಯನ್‌ ಗ್ರಾಂಡ್ ಮುಫ್ತಿ ಶೈಖ್ ಅಬೂಬಕ್ಕರ್ ಅಹ್ಮದ್ ಅವರ ಸುಪುತ್ರ, ಅಂತಾರಾಷ್ಟ್ರೀಯ ಶಿಕ್ಷಣ ಸಮುಚ್ಚಯ ಮರ್ಕಝ್ ನಾಲೆಡ್ಜ್ ಸಿಟಿ ಇದರ ನಿರ್ದೇಶಕ ಡಾ. ಎ. ಪಿ. ಅಬ್ದುಲ್ ಹಕೀಂ ಅಝ್ಹರಿ ಮುಖ್ಯ ಪ್ರಭಾಷಣ ನೆರವೇರಿಸಲಿದ್ದು, ಈ ಸಮಾರಂಭದಲ್ಲಿ ಸಯ್ಯಿದ್ ಕುಂಬೋಳ್ ತಂಙಳ್, ಕಾವಳಕಟ್ಟೆ ಡಾ. ಹಝ್ರತ್, ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಲಕ್ಕಿಸ್ಟಾರ್ ಅಬ್ದುಲ್ ನಾಸಿರ್ ಸಹಿತ ಇನ್ನಿತರ ಅನೇಕ ಉಲಮಾ-ಉಮರಾ ಗಣ್ಯರು ಭಾಗವಹಿಸಲಿದ್ದಾರೆ. ದರ್ಗಾದ ಧಾರ್ಮಿಕ ಸಂಪ್ರದಾಯದಂತೆ ಬೆಲ್ಲದಗಂಜಿ ವಿತರಣೆ, ಉರೂಸ್ ಕೊನೆಯ ದಿನ ಸಾರ್ವಜನಿಕ ಮಹಾ ಅನ್ನದಾನ ನಡೆಯಲಿದೆ.ಪತ್ರಿಕಾಗೋಷ್ಠಿಯಲ್ಲಿ ಊರೂಸ್ ಸಮಿತಿ ಅಧ್ಯಕ್ಷ ಕೆ.ಯು.ಇಬ್ರಾಹಿಂ, ಉಪಾಧ್ಯಕ್ಷ ಅಬ್ದುಲ್ ಅಝೀಝ್ ಝಹ್ರಿ ಕಿಲ್ಲೂರು, ಪ್ರ. ಕಾರ್ಯದರ್ಶಿ ಜೆ.ಹೆಚ್.ಅಬೂಬಕ್ಕರ್ ಸಿದ್ದೀಕ್ ಕಾಜೂರು, ಜೊತೆ ಕಾರ್ಯದರ್ಶಿ ಶಾಹುಲ್ ಹಮೀದ್ ಕಿಲ್ಲೂರು, ಕೋಶಾಧಿಕಾರಿ ಮುಹಮ್ಮದ್ ಕಮಾಲ್ ಇದ್ದರು.