ಸಾರಾಂಶ
ಹೊಸಪೇಟೆ: ಸಫಾಯಿ ಕರ್ಮಚಾರಿ ರಾಷ್ಟ್ರೀಯ ಆಯೋಗದ ಅಧ್ಯಕ್ಷ ಎಂ.ವೆಂಕಟೇಶನ್ ವಿಜಯನಗರ ಜಿಲ್ಲೆಗೆ ಭೇಟಿ ನೀಡಿ ಜಿಲ್ಲೆಯ ವಿವಿಧ ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ಶುಕ್ರವಾರ ಸಫಾಯಿ ಕರ್ಮಚಾರಿಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.
ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ನಡೆದ ಸಭೆಯಲ್ಲಿ ಹೊಸಪೇಟೆ, ಕಮಲಾಪುರ, ಹಡಗಲಿ, ಹಗರಿಬೊಮ್ಮನಹಳ್ಳಿ ಸೇರಿದಂತೆ ಬೇರೆ ಬೇರೆ ಭಾಗಗಳಿಂದ ಬಂದಿದ್ದ ಪೌರ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದರು.ಅಧ್ಯಕ್ಷರು ಮೊದಲಿಗೆ ಪೌರ ಕಾರ್ಮಿಕರ, ಬಳಿಕ ಪೌರ ಕಾರ್ಮಿಕ ಯುನಿಯನ್ ಪದಾಧಿಕಾರಿಗಳ ಮತ್ತು ಹೊರಗುತ್ತಿಗೆ ಏಜೆನ್ಸಿದಾರರೊಂದಿಗೆ ವಿವಿಧ ವಿಷಯಗಳ ಕುರಿತು ಚರ್ಚಿಸಿದರು. ವಿಜಯನಗರ ಜಿಲ್ಲೆಯ ವಿವಿಧ ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯಿತಿಯ ಅಧಿಕಾರಿಗಳು, ಮುಖ್ಯಾಧಿಕಾರಿಗಳ ಸಮ್ಮುಖದಲ್ಲಿ ಪೌರ ಕಾರ್ಮಿಕರ ಅಹವಾಲು ಆಲಿಸಿದರು.
ಪಿಎಫ್, ಇಎಸ್‌ಐ ನಂಬರ್ ಗೊತ್ತಿದೆಯಾ? ‘ನಿಮ್ಮ ಪಿಎಫ್ ನಂಬರ್, ಇಎಸ್‌ಐ ನಂಬರ್ ಗೊತ್ತಿದೆಯಾ? ಮೆಡಿಕಲ್ ಇನ್ಶೂರನ್ಸ್ ಇದೆಯಾ? ಎಂದು ಅಧ್ಯಕ್ಷರು ಪೌರ ಕಾರ್ಮಿಕರಿಗೆ ಪ್ರಶ್ನಿಸಿ ಮಾಹಿತಿ ಪಡೆದುಕೊಂಡರು. ಪೌರ ಕಾರ್ಮಿಕರಿಗೆ ಕೊನೆಯ ಬಾರಿ ಆರೋಗ್ಯ ಶಿಬಿರ ಯಾವಾಗ ನಡಿಸಿದ್ದೀರಿ? ಎಂದು ನಗರಸಭೆ ಅಧಿಕಾರಿಗಳಿಗೆ ಪ್ರಶ್ನಿಸಿದರು.ವೇತನ ಪಾವತಿ ಸರಿಯಾದ ಸಮಯಕ್ಕೆ ಆಗುತ್ತಿದೆಯೇ? ನೀವು ಪ್ರತಿದಿನ ಕೆಲಸ ಮಾಡುವ ಅವಧಿ ಎಷ್ಟು? ಎಂದು ಕೇಳಿದ ಅಧ್ಯಕ್ಷರು, ಪೌರ ಕಾರ್ಮಿಕ ನೌಕರೊಬ್ಬರ ಮೆಸೇಜ್‌ಗೆ ಬಂದಿರುವ ಸಂದೇಶವನ್ನು ವೀಕ್ಷಿಸಿ ವೇತನವು ಬ್ಯಾಂಕಿನ ಖಾತೆಗೆ ಪ್ರತಿ ಮಾಹೆ ಸರಿಯಾದ ಸಮಯಕ್ಕೆ ಜಮಾ ಆಗುತ್ತಿರುವುದರ ಬಗ್ಗೆ ಖಚಿತಪಡಿಸಿಕೊಂಡರು.ಟಿ-ಶರ್ಟ್, ಪ್ಯಾಂಟ್, ರೇನ್‌ಕೋಟ್ ನೀಡುತ್ತಿರುವುದರ ಬಗ್ಗೆ ಸಹ ಪೌರ ಕಾರ್ಮಿಕರಿಗೆ ಕೇಳಿ ಖಚಿತಪಡಿಸಿಕೊಂಡರು. ಕೈತೊಳೆಯಲು ಸೋಪು ಕೊಡುತ್ತಾರಾ ಎಂದು ಕೇಳಿ ಸೌಲಭ್ಯಗಳ ಬಗ್ಗೆ ಪರಿಶೀಲಿಸಿದರು. ಹೊರಗುತ್ತಿಗೆ ಆಧಾರದಡಿ ಕೆಲಸ ಮಾಡುವ ಪೌರ ಕಾರ್ಮಿಕ ನೌಕರರಿಗೆ ಪ್ರತಿ ಮಾಹೆ 14,800 ರು. ಮತ್ತು ಪೌರ ಕಾರ್ಮಿಕ ವಾಹನ ಚಾಲಕರಿಗೆ ಪ್ರತಿ ಮಾಹೆ 12,800 ರು. ಸಿಗುತ್ತಿದೆ ಎಂದು ಅಧಿಕಾರಿಗಳು ಅಧ್ಯಕ್ಷರಿಗೆ ಮಾಹಿತಿ ನೀಡಿದರು.
ನಿವೇಶನ ಕೊಡುತ್ತೇವೆ: ನಮಗಿನ್ನು ಮನೆಯಿಲ್ಲ. ನಮಗೆ ಮನೆ ಕೊಡಿ ಎಂದು ಕೆಲವು ಪೌರ ಕಾರ್ಮಿಕರು ಸಭೆಯಲ್ಲಿ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮನೋಹರ, ಪೌರ ಕಾರ್ಮಿಕರಿಗೆ ಮನೆ ಬೇಕು ಎನ್ನುವ ಬೇಡಿಕೆ ಪರಿಗಣಿಸಿ ಆರು ತಿಂಗಳೊಳಗೆ ನಿವೇಶನ ನೀಡಲು ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.ಜಿಪಂ ಸಿಇಒ ಸದಾಶಿವ ಪ್ರಭು ಬಿ., ಎಡಿಸಿ ಅನುರಾಧ ಜಿ., ಸಹಾಯಕ ಆಯುಕ್ತ ಮೊಹಮ್ಮದ್ ಅಲಿ ಅಕ್ರಮ ಷಾ, ಜಿಲ್ಲಾ ಎಎಸ್ಪಿ ಸಲೀಂ ಪಾಷಾ, ಹೊಸಪೇಟೆ ನಗರಸಭೆ ಪೌರಾಯುಕ್ತ ಚಂದ್ರಪ್ಪ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಮಂಜುನಾಥ, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಶಾಷು ಮೋದ್ದೀನ್, ನಗರಸಭೆಯ ಸಹಾಯಕ ಅಭಿಯಂತರ ಆರತಿ, ಹಿರಿಯ ಆರೋಗ್ಯ ನಿರೀಕ್ಷಕ ಲತಾ ಮತ್ತಿತರರಿದ್ದರು.