ಸಮಾಜದಲ್ಲಿ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯ ಶ್ಲಾಘನೀಯ.

ಪ್ರತಿಭಾ ಪುರಸ್ಕಾರ, ಸಾಧಕರಿಗೆ ಗೌರವಾರ್ಪಣೆ, ನಿವೃತ್ತ ಹವ್ಯಕ ನೌಕರರಿಗೆ ಸನ್ಮಾನ

ಕನ್ನಡಪ್ರಭ ವಾರ್ತೆ ಯಲ್ಲಾಪುರ

ಸಮಾಜದಲ್ಲಿ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯ ಶ್ಲಾಘನೀಯ. ಈ ಸನ್ಮಾನ ಕಾರ್ಯಕ್ರಮ ಇನ್ನೂ ಸಾಕಷ್ಟು ಜನರಿಗೆ ಪ್ರೇರಣೆ ಸಿಗುವಂತಾಗಲಿ, ಇವರಿಗೆ ವೃತ್ತಿಯಿಂದ ಮಾತ್ರ ನಿವೃತ್ತಿ. ಸಮಾಜದ ಚಟಿವಟಿಕೆಗಳಿಂದ ನಿವೃತ್ತಿ ಇಲ್ಲ. ಸಾಧಕರ ಸಾಧನೆ ಇತರರಿಗೆ ಮಾರ್ಗದರ್ಶನವಾಗಲಿ ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.

ಭಾನುವಾರ ಪಟ್ಟಣದ ಶಾರದಾಂಬಾ ಸಂಸ್ಕೃತ ಪಾಠಶಾಲಾ ಸಭಾಭವನದಲ್ಲಿ, ಹವ್ಯಕ ನೌಕರರ ಕ್ಷೇಮಾಭಿವೃದ್ಧಿ ಸಂಘ ಹಮ್ಮಿಕೊಂಡ ಪ್ರತಿಭಾ ಪುರಸ್ಕಾರ, ಸಾಧಕರಿಗೆ ಗೌರವಾರ್ಪಣೆ ಹಾಗೂ ನಿವೃತ್ತ ಹವ್ಯಕ ನೌಕರರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ವಿಶ್ವದರ್ಶನ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ ಮಾತನಾಡಿ, ಹವ್ಯಕ ಸಮಾಜ ಎಲ್ಲಾ ದೃಷ್ಟಿಯಿಂದಲೂ ಶ್ರೇಷ್ಟ ಸಮಾಜ ಎನಿಸಿಕೊಂಡಿದೆ. ಆದರೆ ಹವ್ಯಕ ಪ್ರತಿಭೆಗಳು ಪ್ರತಿಭಾ ಪಲಾಯನ ವಾಗುತ್ತಿರುವುದು ವಿಷಾದನೀಯ. ಬಾಹ್ಯ ಸಮಾಜದಲ್ಲಿ ಹವ್ಯಕರಿಗೆ ವಿಶ್ವಾಸಾರ್ಹ ಸ್ಥಾನವಿದೆ ಎಂದರು.

ಶಾರದಾಂಬಾ ದೇವಸ್ಥಾನದ ಅಧ್ಯಕ್ಷ ಎನ್.ಕೆ. ಭಟ್ಟ ಅಗ್ಗಾಸಿಕುಂಬ್ರಿ ಮಾತನಾಡಿ, ನಮ್ಮ ಜವಾಬ್ದಾರಿ ಅರಿತುಕೊಂಡು ದೇಶ ಕಟ್ಟುವ ಕಾರ್ಯದಲ್ಲಿ ಹವ್ಯಕರು ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ನಮ್ಮ ಹಿರಿಯರ ಶ್ರಮದ ಫಲವಾಗಿ ಹವ್ಯಕ ಸಮಾಜ ಅಭಿವೃದ್ಧಿಗೊಂಡಿದೆ. ಎಲ್ಲ ಸಮುದಾಯದವರನ್ನು ಒಗ್ಗೂಡಿಸಿಕೊಂಡು ಹೋಗುವ ಜವಾಬ್ದಾರಿ ಹವ್ಯಕ ಸಮಾಜಕ್ಕಿದೆ ಎಂದರು.

ಸಂಘದ ಅಧ್ಯಕ್ಷ ಡಿ.ಜಿ. ಹೆಗಡೆ ಅಧ್ಯಕ್ಷತೆ ವಹಿಸಿದ್ದರು.

ಸನ್ಮಾನ ಸ್ವೀಕರಿಸಿದ ನಿವೃತ್ತ ನೌಕರ ಶ್ರೀಪಾದ ಹೆಗಡೆ, ಸಾಧಕಿ ರೇಖಾ ಭಟ್ಟ, ಭವ್ಯ ಭಾಗ್ವತ್, ಸಂಕಲ್ಪ ಅಧ್ಯಕ್ಷ ಪ್ರಮೋದ ಹೆಗಡೆ, ಶಾರದಾಂಬಾ ಪಾಠಶಾಲೆಯ ಅಧ್ಯಕ್ಷ ಉಮೇಶ ಭಾಗ್ವತ್, ಹವ್ಯಕ ಕಟ್ಟಡ ಸಮಿತಿ ಅಧ್ಯಕ್ಷ ಮಾರುತಿ ಗಟ್ಟಿ ಮಾತನಾಡಿದರು.

ಸಿ.ಎ. ವಿಘ್ನೇಶ್ವರ ಗಾಂವ್ಕರ್, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಆರ್.ಆರ್. ಭಟ್, ಸಹಾಯಕ ಉಪಅರಣ್ಯ ಸಂರಕ್ಷಣಾಧಿಕಾರಿ ಹಿಮವತಿ ಭಟ್ಟ, ಮಲೆನಾಡು ಕೃಷಿ ಸಹಕಾರಿ ಸಂಘದ ಅಧ್ಯಕ್ಷ ಎಂ.ಆರ್.ಹೆಗಡೆ ಉಪಸ್ಥಿತರಿದ್ದರು.

ಕಾರ್ಯಕ್ರಮದ ಅಂಗವಾಗಿ ಏರ್ಪಡಿಸಿದ ವಿವಿಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ರಜತ ಸಂಗಡಿಗರು ವೇದಘೋಷ ಮಾಡಿದರು, ಶ್ರೀಧರ ಹೆಗಡೆ, ಸರೋಜಾ ಭಟ್ಟ ನಿರೂಪಿಸಿದರು, ಯುಕ್ತಾ ಭಾಗ್ವತ್ ಪ್ರಾರ್ಥನೆ ಹಾಡಿದರು, ಸಂಘದ ಖಜಾಂಚಿ ಜಿ.ಎಸ್. ಗಾಂವ್ಕರ್ ಸ್ವಾಗತಿಸಿದರು. ಕಾರ್ಯದರ್ಶಿ ನಾಗರಾಜ ಹೆಗಡೆ ವಂದಿಸಿದರು.