ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ನಾವೆಲ್ಲರೂ ಒಂದೇ ಎಂಬ ಸೌಹಾರ್ದತೆಯ ಭಾವನೆ ಎಲ್ಲರಲ್ಲೂ ಮೂಡಿಬರಬೇಕು. ಆಗ ಮಾತ್ರ ಹಿಂಸಾಚಾರ, ಕ್ರೋಧದಿಂದ ಮನುಷ್ಯ ಮುಕ್ತನಾಗಬಲ್ಲ. ತಪ್ಪು ಮಾಡುವವರನ್ನು ಯಾವ ಕಾರಣಕ್ಕೂ ಸಮರ್ಥಿಸಬಾರದು ಎಂದು ಬೆಂಗಳೂರಿನ ಈಡಿಗ ಮಠದ ಶ್ರೀ ವಿಖ್ಯಾತ ಸ್ವಾಮೀಜಿ ಹೇಳಿದ್ದಾರೆ.ಕರಾವಳಿಯಲ್ಲಿ ಇತ್ತೀಚೆಗೆ ನಡೆದ ಅಹಿತಕರ ಘಟನೆಗಳ ಹಿನ್ನೆಲೆಯಲ್ಲಿ ‘ಹೃದಯ- ಹೃದಯಗಳನ್ನು ಬೆಸೆಯೋಣ’ ಎಂಬ ಘೋಷಣೆಯೊಂದಿಗೆ ಕರ್ನಾಟಕ ರಾಜ್ಯ ಸುನ್ನಿ ಯುವಜನ ಸಂಘ (ಎಸ್‌ವೈಎಸ್)ವು ನಗರದ ಕ್ಲಾಕ್ ಟವರ್ ಬಳಿ ಮಂಗಳವಾರ ಆಯೋಜಿಸಿದ್ದ ಸೌಹಾರ್ದ ಸಂಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಸಂದೇಶ ನೀಡಿದರು.
ರಾಜ್ಯ ವಕ್ಫ್ ಕೌನ್ಸಿಲ್ ಉಪಾಧ್ಯಕ್ಷ ಮೌಲಾನಾ ಶಾಫಿ ಸಅದಿ ಬೆಂಗಳೂರು, ವಿಧಾನ ಪರಿಷತ್ ಶಾಸಕ ಐವನ್ ಡಿಸೋಜ, ಮಂಗಳೂರು ಧರ್ಮಪ್ರಾಂತದ ಸಾರ್ವಜನಿಕ ಸಂಪರ್ಕ ಅಧಿಕಾರಿ ರಾಯ್ ಕ್ಯಾಸ್ಟಲಿನೊ ಮತ್ತಿತರರು ಮಾತನಾಡಿದರು.ಎಸ್‌ವೈಎಸ್ ರಾಜ್ಯಾಧ್ಯಕ್ಷ ಬಶೀರ್ ಸಅದಿ ಬೆಂಗಳೂರು ಅಧ್ಯಕ್ಷತೆ ವಹಿಸಿದ್ದರು. ವೌಲಾನಾ ಎಮ್ಮೆಸ್ಸೆಂ ಅಬ್ದುರ್ರಶೀದ್ ಝೈನಿ ಕಾಮಿಲ್, ಎಸ್‌ವೈಎಸ್ ರಾಜ್ಯ ಉಪಾಧ್ಯಕ್ಷ ಸಯ್ಯದ್ ಹಾಮೀಂ ತಂಙಳ್ ಬಾಳೆ ಹೊನ್ನೂರು, ಸೈಯದ್ ಶಿಹಾಬ್ ತಂಙಳ್ ಮಾರನಹಳ್ಳಿ, ದ.ಕ. ಜಿಲ್ಲಾಧ್ಯಕ್ಷ ಮೆಹಬೂಬ್ ಸಖಾಫಿ ಕಿನ್ಯ, ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಅಬ್ದುಲ್ ನಾಸಿರ್ ಲಕ್ಕಿಸ್ಟಾರ್, ಸಮಾಜ ಸೇವಕ ಹೈದರ್ ಪರ್ತಿಪ್ಪಾಡಿ, ಕಾಂಗ್ರೆಸ್ ಮುಖಂಡ ಪದ್ಮರಾಜ ಆರ್., ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ, ರೈತ ಸಂಘದ ಯಾದವ ಶೆಟ್ಟಿ, ಡಿವೈಎಫ್‌ಐ ಜಿಲ್ಲಾಧ್ಯಕ್ಷ ಬಿ.ಕೆ. ಇಮ್ತಿಯಾಝ್, ಸುನಿಲ್ ಕುಮಾರ್ ಬಜಾಲ್, ಮಾಜಿ ಕಾರ್ಪೊರೇಟರ್ ಅನಿಲ್ ಕುಮಾರ್, ಎ.ಸಿ. ವಿನಯರಾಜ್ ಮತ್ತಿತರರು ಇದ್ದರು.
ಎಸ್‌ವೈಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಎಂ. ಅಬೂಬಕರ್ ಸಿದ್ದೀಕ್ ಆಶಯ ಭಾಷಣಗೈದರು. ಉಳ್ಳಾಲ ದರ್ಗಾ ಅಧ್ಯಕ್ಷ, ಸೌಹಾರ್ದ ಸಂಚಾರ ಸ್ವಾಗತ ಸಮಿತಿಯ ಅಧ್ಯಕ್ಷ ಹನೀಫ್ ಹಾಜಿ ಉಳ್ಳಾಲ ಸ್ವಾಗತಿಸಿದರು. ಹಾಫಿಳ್ ಯಾಕೂಬ್ ಸಅದಿ ನಾವೂರು, ಅಶ್ರಫ್ ಕಿನಾರಾ ನಿರೂಪಿಸಿದರು. ಇಸ್ಮಾಯಿಲ್ ಮಾಸ್ಟರ್ ಮರಿಕ್ಕಳ ವಂದಿಸಿದರು.ಮಳೆಯಲ್ಲಿ ಸೌಹಾರ್ದದ ಹೆಜ್ಜೆ:
ಮಳೆಯನ್ನೂ ಲೆಕ್ಕಿಸದೆ ಬಾವುಟಗುಡ್ಡದಿಂದ ಕ್ಲಾಕ್‌ಟವರ್‌ವರೆಗೆ ಹಿಂದೂ, ಮುಸ್ಲಿಂ, ಕ್ರೈಸ್ತರು ಪರಸ್ಪರ ಕೈ ಜೋಡಿಸಿ ಸೌಹಾರ್ದದ ಹೆಜ್ಜೆ ಹಾಕಿದರು. ಈ ಸಂದರ್ಭ ಎಸ್‌ವೈಎಸ್ ದ.ಕ. ಜಿಲ್ಲಾ ವೆಸ್ಟ್ ಸಮಿತಿ ವತಿಯಿಂದ ಇಸಾಬಾ ಮತ್ತು ಸಾಂತ್ವನದ ಹೆಲ್ಪ್‌ಡೆಸ್ಕ್ ಅನಾವರಣಗೊಳಿಸಲಾಯಿತು.