ವೀರಶೈವ- ಲಿಂಗಾಯತ ಹಾಗೂ ಅದರ ಎಲ್ಲ ಒಳಪಂಗಡಗಳವರು ಒಗ್ಗಟ್ಟಾಗಬೇಕು. ಹಿಂದುಳಿದ ವರ್ಗಗಳ ಪಟ್ಟಿಗೆ ಸೇರ್ಪಡೆಗೊಳಿಸುವಂತೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದರೆ, ಅದಕ್ಕೆ ಅಗತ್ಯ ಒತ್ತಡ ಹೇರಲಾಗುವುದು.
ರಾಜ್ಯಮಟ್ಟದ ವಧು-ವರರ ಸಮಾವೇಶ ಉದ್ಘಾಟಿಸಿದ ಸಂಸದ
ಕನ್ನಡಪ್ರಭ ವಾರ್ತೆ ಹುಬ್ಬಳ್ಳಿವೀರಶೈವ- ಲಿಂಗಾಯತ ಹಾಗೂ ಅದರ ಎಲ್ಲ ಒಳಪಂಗಡಗಳವರು ಒಗ್ಗಟ್ಟಾಗಬೇಕು. ಹಿಂದುಳಿದ ವರ್ಗಗಳ ಪಟ್ಟಿಗೆ ಸೇರ್ಪಡೆಗೊಳಿಸುವಂತೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದರೆ, ಅದಕ್ಕೆ ಅಗತ್ಯ ಒತ್ತಡ ಹೇರಲಾಗುವುದು ಎಂದು ಸಂಸದ ಜಗದೀಶ ಶೆಟ್ಟರ್ ಭರವಸೆ ನೀಡಿದರು.
ಭಾನುವಾರ ನಗರದ ಅಮರಗೋಳ ಎಪಿಎಂಸಿ ಆವರಣದ ವಸ್ತು ಸಂಗ್ರಹಾಲಯದಲ್ಲಿ ಕರ್ನಾಟಕ ರಾಜ್ಯ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘದ ಹುಬ್ಬಳ್ಳಿ ತಾಲೂಕು ಘಟಕ ಹಾಗೂ ಧಾರವಾಡ ಜಿಲ್ಲಾ ಬಣಜಿಗ ಕ್ಷೇಮಾಭಿವೃದ್ಧಿ ಸಂಘದ ನೇತೃತ್ವದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ವಧು-ವರರ ಸಮಾವೇಶ ಉದ್ಘಾಟಿಸಿ ಮಾತನಾಡಿದರು.ನಮ್ಮ ಸಮಾಜದಲ್ಲಿ ಒಗ್ಗಟ್ಟು ಇಲ್ಲದಿದ್ದರೆ ರವಿ ಹಂಜಗಿಮಠ ಅವರಂತಹವರು ಸಂಶೋಧನೆಯ ಹೆಸರಿನಲ್ಲಿ ಸವಾರಿ ಮಾಡುತ್ತಾರೆ. ಇಂತಹ ಬೆಳವಣಿಗೆಗಳನ್ನು ಎಂದಿಗೂ ಸಹಿಸಬಾರದು. ಜಗತ್ತಿಗೆ ಮೊದಲು ಅನುಭವ ಮಂಟಪದ ಮೂಲಕ ಸಂಸತ್ತಿನ ಪರಿಕಲ್ಪನೆ ನೀಡಿದವರು ಬಸವಣ್ಣನವರು. ಎಲ್ಲ ವರ್ಗದವರನ್ನು ಸಮಾನವಾಗಿ ಕಂಡು ಮಹಿಳೆಯರಿಗೂ ಅವಕಾಶ ಕಲ್ಪಿಸಿದ್ದರು. ಇದೇ ಆಶಯದಡಿ ಕೇಂದ್ರ ಸರ್ಕಾರ ಮಹಿಳಾ ಮೀಸಲಾತಿ ಜಾರಿಗೆ ತರುತ್ತಿದೆ ಎಂದರು.
ಗುರು-ವಿರಕ್ತರು ಒಂದಾಗಬೇಕು. ಸರ್ವಾನುಮತದ ನಿರ್ಣಯ ಕೈಗೊಂಡು ಸಮಾಜದ ಹಿತಕ್ಕಾಗಿ ಕಾರ್ಯಪ್ರವೃತ್ತರಾಗಬೇಕು. ಸ್ವಾಮಿಗಳಲ್ಲಿ ಗೊಂದಲವಿದೆಯೇ ಹೊರತು ಸಮಾಜದ ಜನರಲ್ಲಿಲ್ಲ. ಎಲ್ಲರೂ ಒಗ್ಗಟ್ಟು ಪ್ರದರ್ಶಿಸಿದರೆ ಸಮಾಜದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ಬಣಜಿಗ ಸಮಾಜದವರು ಒಂದಾಗಲು ಇಂತಹ ವೇದಿಕೆಗಳನ್ನು ನಿರಂತರವಾಗಿ ಕಲ್ಪಿಸಬೇಕು. ಪ್ರಸ್ತುತ ವಧು-ವರರು ಸಿಗುವುದೇ ಕಷ್ಟವಾಗುತ್ತಿದೆ. ಇಂತಹ ಸಾಮಾಜಿಕ ಕಾರ್ಯ ಶ್ಲಾಘನೀಯ. ವರದಕ್ಷಿಣೆ ಪಿಡುಗು ನಿವಾರಿಸುವ ಪ್ರಯತ್ನ ನಮ್ಮ ಸಮಾಜದಿಂದಲೇ ಆರಂಭವಾಗಬೇಕು ಎಂದರು.
ಸಾನ್ನಿಧ್ಯ ವಹಿಸಿದ್ದ ಅಣ್ಣಿಗೇರಿ- ಭಂಡಿವಾಡ ಗಿರೀಶ ಆಶ್ರಮದ ಡಾ. ಎ.ಸಿ. ವಾಲಿ ಮಹಾರಾಜರು ಮಾತನಾಡಿ, ಸಮಾಜ ತಾಯಿಯಿದ್ದಂತೆ. ಸಮಾಜದ ಋಣ ತೀರಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ಸಂಘಟನೆಯ ಮೂಲಕ ಯಶಸ್ಸು ಸಾಧಿಸಲು ಇಂತಹ ಕಾರ್ಯಕ್ರಮಗಳು ಸಹಕಾರಿ ಎಂದರು.ಧಾರವಾಡ ಜಿಲ್ಲಾ ಬಣಜಿಗ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಶಿವಾನಂದ ಕವಳಿ, ರಾಜ್ಯ ಕಾರ್ಯಕಾರಿಣಿ ಸದಸ್ಯ ಹಾಗೂ ಲೆಕ್ಕಪರಿಶೋಧಕ ಚನ್ನವೀರ ಮುಂಗರವಾಡಿ ಮಾತನಾಡಿದರು. ಹುಬ್ಬಳ್ಳಿ ತಾಲೂಕು ಅಧ್ಯಕ್ಷ ಗುರುಪಾದಪ್ಪ ಶಿರೂರ ಅಧ್ಯಕ್ಷತೆ ವಹಿಸಿದ್ದರು.
ವಿಪ ಸದಸ್ಯ ಪ್ರದೀಪ ಶೆಟ್ಟರ್, ವಾಕರಸಾ ಸಂಸ್ಥೆ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಸಾವಕಾರ, ಉದ್ಯಮಿ ಶಂಕರಣ್ಣ ಮುನವಳ್ಳಿ, ತಾರಾದೇವಿ ವಾಲಿ, ವೀರಣ್ಣ ಮಳಗಿ, ಸಂತೋಷ ಪಟ್ಟಣಶೆಟ್ಟಿ, ಪ್ರಕಾಶ ಅಂಗಡಿ, ಗಜಾನನ ನೀಲಾಕರಿ, ಚನ್ನಬಸಪ್ಪ ಧಾರವಾಡಶೆಟ್ಟರ್, ಮಲ್ಲಿಕಾರ್ಜುನ ಶಿರಗುಪ್ಪಿ, ಬಸವರಾಜ ಶೀಲವಂತರ, ಮಹೇಶ ಬುರ್ಲಿ ಸೇರಿದಂತೆ ಹಲವರಿದ್ದರು.