ಕಾರ್ಮಿಕರ ಯೋಜನೆಗಳು ಸಮರ್ಪಕವಾಗಿ ಜಾರಿಯಾಗಲಿ

| Published : Oct 06 2024, 01:18 AM IST

ಸಾರಾಂಶ

ಮೃತ ಕಾರ್ಮಿಕರ ಅಂತ್ಯಸಂಸ್ಕಾರಕ್ಕೆ ೫ಸಾವಿರ ರೂ.ನೀಡಲಾಗುವುದು.

ಹಗರಿಬೊಮ್ಮಹನಹಳ್ಳಿ: ತಾಲೂಕು ಕಾನೂನು ಸೇವೆಗಳ ಸಮಿತಿಯಿಂದ ಕಡುಬಡವರು, ಕಾರ್ಮಿಕರಿಗೆ ಮತ್ತು ಪ.ಜಾತಿ, ಪಂಗಡದವರಿಗೆ ಕಾನೂನಿನ ಉಚಿತ ನೆರವು ನೀಡಲಾಗುತ್ತದೆ ಎಂದು ಹಿರಿಯ ಶ್ರೇಣಿ ಸಿವಿಲ್ ನ್ಯಾಯಾದೀಶ ಡಿ.ಕೆ.ಮಧುಸೂಧನ್ ಹೇಳಿದರು.

ಪಟ್ಟಣದ ವಿಶ್ವಕರ್ಮ ಸಮುದಾಯ ಭವನದಲ್ಲಿ ಕಾರ್ಮಿಕ ಇಲಾಖೆ, ತಾಲೂಕು ಕಾನೂನು ಸೇವೆಗಳ ಸಮಿತಿಯಿಂದ ಹೊರಗುತ್ತಿಗೆ, ಗುತ್ತಿಗೆ, ಸಂಘಟಿತ ಮತ್ತು ಅಸಂಘಟಿತ ಕಾರ್ಮಿಕರಿಗೆ ವಿವಿಧ ಯೋಜನೆಗಳ ತಾಲೂಕು ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ಕಾರ್ಮಿಕರ ಕಲ್ಯಾಣಕ್ಕಾಗಿ ರೂಪಿಸಲಾಗಿರುವ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೊಳಿಸುವ ಅಗತ್ಯವಿದೆ. ಕಾರ್ಮಿಕ ಇಲಾಖೆಯ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳುವ ಮೂಲಕ ಕಾರ್ಮಿಕರು ಪ್ರಗತಿಯ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳಬೇಕು ಎಂದರು.

ಜಿಲ್ಲಾ ಕಾರ್ಮಿಕ ಅಧಿಕಾರಿ ಸೂರ್ಯಪ್ಪ ಮಾತನಾಡಿ, ಮೃತ ಕಾರ್ಮಿಕರ ಅಂತ್ಯಸಂಸ್ಕಾರಕ್ಕೆ ೫ಸಾವಿರ ರೂ.ನೀಡಲಾಗುವುದು. ಕಾರ್ಮಿಕ ಇಲಾಖೆಯಿಂದ ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕೆ ಶೈಕ್ಷಣಿಕ ಪ್ರೋತ್ಸಾಹ ಧನ ನೀಡಲಾಗುವುದು. ಕಾರ್ಮಿಕರಿಗೆ ಸರಕಾರದಿಂದ ಸಿಗುವ ಸೌಲಭ್ಯಗಳನ್ನು ಸಮರ್ಪಕವಾಗಿ ತಲುಪಿಸಲಾಗುವುದು ಎಂದರು.

ತಾಲೂಕು ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಉಲುವತ್ತಿ ಬಾಬುವಲಿ, ಕಾರ್ಮಿಕ ನಿರೀಕ್ಷಕ ಕೆ.ಮೌನೇಶ, ಕಾರ್ಮಿಕ ನಿರೀಕ್ಷರಾದ ಮಂಜುಳ, ಪಿ.ಎಂ.ಈಶ್ವರಯ್ಯ ಮಾತನಾಡಿದರು. ತಾ.ಪಂ.ಇಒ ಡಾ.ಜಿ.ಪರಮೇಶ್ವರ, ತಾಲೂಕು ವಕೀಲರ ಸಂಘದ ಅಧ್ಯಕ್ಷ ಪಿ.ರಮೇಶ್, ಜವಳಿ ವ್ಯಾಪಾರಿಗಳ ಸಂಘದ ನಾಗರಾಜ ಸಾಲಿಮನಿ, ಕಿರಾಣಿ ವರ್ತಕರ ಸಂಘದ ಕುಮಾರ್, ವಿಶ್ವಕರ್ಮ ಸಮಾಜದ ಅಧ್ಯಕ್ಷ ಬಸವರಾಜ, ಸಿಐಟಿಯು ಅಧ್ಯಕ್ಷ ತೋಟೇಶ ಇದ್ದರು. ಉಪನ್ಯಾಸಕರಾದ ಬಸವರಾಜ ನಂದಿಬೇವೂರ್, ಹೂಲೆಪ್ಪ, ಬ್ಯಾಟಿ ಮಾರುತಿ ನಿರ್ವಹಿಸಿದರು. ಹಗರಿಬೊಮ್ಮನಹಳ್ಳಿ ಪಟ್ಟಣದಲ್ಲಿ ನಡೆದ ಕಾರ್ಮಿಕರ ಕಾರ್ಯಾಗಾರಕ್ಕೆ ಹಿರಿಯಶ್ರೇಣಿ ಸಿವಿಲ್ ನ್ಯಾಯಾದೀಶ ಡಿ.ಕೆ.ಮಧುಸೂಧನ್ ಚಾಲನೆ ನೀಡಿದರು.