ನರೇಗಾ ಕಾಮಗಾರಿ ನಿರ್ವಹಣೆ ಉತ್ತಮವಾಗಿರಲಿ: ಪವನಕುಮಾರ

| Published : Apr 22 2024, 02:18 AM IST

ನರೇಗಾ ಕಾಮಗಾರಿ ನಿರ್ವಹಣೆ ಉತ್ತಮವಾಗಿರಲಿ: ಪವನಕುಮಾರ
Share this Article
  • FB
  • TW
  • Linkdin
  • Email

ಸಾರಾಂಶ

ಶಾಲಾ ಶೌಚಾಲಯ ಕಾಮಗಾರಿಗಳನ್ನು ಉತ್ತಮವಾಗಿ ನಿರ್ಮಿಸಲಾಗಿದೆ. ಅಡುಗೆ ಕೋಣೆ, ಕಾಂಪೌಂಡ್ ಸೇರಿದಂತೆ ಇತರ ಕಾಮಗಾರಿಗಳು ಗುಣಮಟ್ಟದಿಂದ ಕೂಡಿವೆ.

ಹರಪನಹಳ್ಳಿ: ತಾಲೂಕಿನಲ್ಲಿ‌ ನರೇಗಾದಡಿ ಕೈಗೆತ್ತಿಕೊಂಡ ಶಾಲಾ ಕಾಮಗಾರಿಗಳನ್ನು ಉತ್ತಮವಾಗಿ ನಿರ್ಮಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಇಲಾಖೆಯ ಆಯುಕ್ತ ಪವನ್ ಕುಮಾರ್ ಮಾಲಪಾಟಿ ಹೇಳಿದರು.

ತಾಲೂಕಿನ ಬೆಣ್ಣಿಹಳ್ಳಿ ಹಾಗೂ ಮೈದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ನರೇಗಾದಡಿ ಆಭಿವೃದ್ಧಿಪಡಿಸಿದ ಕಾಮಗಾರಿಗಳ ಸ್ಥಳಕ್ಕೆ ಭೇಟಿ‌ ನೀಡಿ ಪರಿಶೀಲಿಸಿ ಮಾತನಾಡಿದರು.

ಶಾಲಾ ಶೌಚಾಲಯ ಕಾಮಗಾರಿಗಳನ್ನು ಉತ್ತಮವಾಗಿ ನಿರ್ಮಿಸಲಾಗಿದೆ. ಅಡುಗೆ ಕೋಣೆ, ಕಾಂಪೌಂಡ್ ಸೇರಿದಂತೆ ಇತರ ಕಾಮಗಾರಿಗಳು ಗುಣಮಟ್ಟದಿಂದ ಕೂಡಿವೆ. ಆದರೆ, ಕಾಮಗಾರಿಗಳ ಕಡತಗಳನ್ನು ಸಹ ಅದೇ ರೀತಿ ಉತ್ತಮವಾಗಿ ನಿರ್ವಹಣೆ ಮಾಡಬೇಕು ಎಂದು ‌ತಾಂತ್ರಿಕ ಸಹಾಯಕರಿಗೆ ಸೂಚನೆ ನೀಡಿದರು.

ಬೆಣ್ಣಿಹಳ್ಳಿ ತಾಲೂಕಿನ ನಿಲುವಂಜಿ ಗ್ರಾಮದ ರುದ್ರಾಂಬ ಎಂ.ಪಿ.ಪ್ರಕಾಶ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹೈಟೆಕ್‌ ಶೌಚಾಲಯ ಹಾಗೂ ಕಾಂಪೌಂಡ್ ನಿರ್ಮಾಣ ಕಾಮಗಾರಿ ಸ್ಥಳಕ್ಕೆ ಭೇಟಿ‌ ನೀಡಿದ ಆಯುಕ್ತರು, ಇದೇ ಶಾಲೆಯಲ್ಲಿ ಬೇರೆ ಬೇರೆ ಕಾಮಗಾರಿ ತೆಗೆದುಕೊಳ್ಳಿ, ಶಾಲಾ ಮೈದಾನ ಅಭಿವೃದ್ಧಿ, ಪೌಷ್ಟಿಕ ಕೈತೋಟ, ವಿವಿಧ ಕ್ರೀಡೆಯ ಅಂಕಣಗಳ ಅಭಿವೃದ್ಧಿಪಡಿಸಬಹುದು. ಆದರೆ, ಮೈದಾನ ಅಭಿವೃದ್ಧಿ ವೇಳೆ ಗಿಡಗಳನ್ನು ಕಡಿಯದಂತೆ ಎಚ್ಚರವಹಿಸಿ ಎಂದು ತಿಳಿಸಿದರು.

ಮೈದೂರು ಗ್ರಾಪಂ ವ್ಯಾಪ್ತಿಯ ಮೈದೂರು ಗ್ರಾಮದ ಗುರುಲಿಂಗನಗೌಡ ಎಂಬುವವರು ಅಭಿವೃದ್ಧಿಪಡಿಸಿಕೊಂಡ ದಾಳಿಂಬೆ ತೋಟ, ಕೆಂಚಮ್ಮ ಎಂಬುವವರು ಅಭಿವೃದ್ಧಿಪಡಿಸಿದ ಪಪ್ಪಾಯ ತೋಟ ವೀಕ್ಷಿಸಿದ ಆಯುಕ್ತರು, ನರೇಗಾದಡಿ ವೈಯುಕ್ತಿಕ ಯೋಜನೆಯಡಿ‌ ತೋಟಗಾರಿಕೆ ಸೇರಿದಂತೆ ಇತರೆ ಕಾಮಗಾರಿಗಳಲ್ಲಿ ಫಲಾನುಭವಿಗಳು ಸಹ ನರೇಗಾದಡಿ‌ ಕೂಲಿ ಕೆಲಸ ಮಾಡಬೇಕು. ಇದರಿಂದ ಮಾನವ ದಿನಗಳ ಹೆಚ್ಚೆಚ್ಚು ಸೃಜನೆಯಾಗುತ್ತವೆ. ಇದರ ಜತೆಗೆ ಮತ್ತಷ್ಟು ವೈಯಕ್ತಿಕ ಹಾಗೂ ಸಮುದಾಯ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ನೆರವಾಗುತ್ತದೆ ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಜಿಪಂ ಸಿಇಒ ಬಿ.ಸದಾಶಿವ ಪ್ರಭು, ಉಪ ಕಾರ್ಯದರ್ಶಿಗಳಾದ ಭೀಮಪ್ಪ ಲಾಳಿ, ಗ್ರಾಮೀಣಾಭಿವೃದ್ಧಿ ಆಯುಕ್ತಾಲಯದ ಜಂಟಿ ನಿರ್ದೆಶಕ(ತಾಂತ್ರಿಕ) ವೇಣುಗೋಪಾಲ್ ರಾವ್, ರಾಜ್ಯ ನರೇಗಾ ಸಹಾಯಕ ನಿರ್ದೆಶಕ ಸಂಜೀವಕುಮಾರ್, ಯೋಜನಾ ಅಭಿಯಂತರ ಅಭಿರಾಮ್, ತಾಪಂ ಇಒ ಚಂದ್ರಶೇಖರ, ವೈ.ಎಚ್. ನರೇಗಾ ಎಡಿ ಸೋಮಶೇಖರ್ ಯು.ಎಚ್., ಎಡಿಪಿಸಿ ಬಸವರಾಜ್, ತಾಂತ್ರಿಕ ಸಂಯೋಜಕ ನಾಗರಾಜ ನಾಯ್ಕ, ಐಇಸಿ ಸಂಯೋಜಕ ಕೆ.ವಸಿಗೇರಪ್ಪ ಚಾಗನೂರು, ತಾಂತ್ರಿಕ ಸಹಾಯಕರಾದ ಲೋಕೇಶ್ ನಾಯ್ಕ, ರವಿ ಹಲಗೇರಿ ಅನುಷ್ಠಾನ ಇಲಾಖೆ ಅಧಿಕಾರಿಗಳು, ತಾಪಂ, ಗ್ರಾಪಂ ಸಿಬ್ಬಂದಿ ಇದ್ದರು.