ಕೊಪ್ಪಳ ತಾಲೂಕಿನ ಬಹದ್ದೂರಬಂಡಿ ಗ್ರಾಮದಲ್ಲಿ ಅಂತಾರಾಷ್ಟ್ರೀಯ ಜಾನಪದ ಕಲಾವಿದ ಮೆಹಬೂಬ್ ಕಿಲ್ಲೇದಾರ್ ಅವರ 'ಮರೆಯಾಗುತ್ತಿರುವ ಜಾನಪದ ಪರಿಕರಗಳು ಹಾಗೂ ಸಾಂಪ್ರದಾಯಿಕ ಬಳಕೆ' ಕೃತಿ ಮತ್ತು ಕವಿ ರಮೇಶ ಬನ್ನಿಕೊಪ್ಪ ಹಲಗೇರಿ ಅವರ 'ನೆಲ ನಂಜಾದ ಹೊತ್ತು' ಕವನ ಸಂಕಲನ ಜನಾರ್ಪಣೆ ಕಾರ್ಯಕ್ರಮ ನಡೆಯಿತು.
ಕೊಪ್ಪಳ: ಜಗತ್ತಿನಲ್ಲಿ ಯಾವುದು ಸರಿ, ಯಾವುದು ತಪ್ಪು ಎಂಬುದನ್ನು ನಿರ್ಣಯಿಸುವಲ್ಲಿ ಹಾಗೂ ಆರೋಗ್ಯಕರ ಸಮಾಜದ ನಿರ್ಮಾಣದಲ್ಲಿ ಪುಸ್ತಕಗಳ ಪಾತ್ರ ಹಿರಿದಾಗಿದೆ. ಸಾಮಾಜಿಕ ತಲ್ಲಣಗಳಿಗೆ ಕವಿಯ ಅಂತರಂಗ ಮಿಡಿಯಬೇಕು. ಆಗ ಕವಿಯಿಂದ ಕಾವ್ಯದ ಆಶಯ ಧನಾತ್ಮಕವಾಗಿ ಹೊಸ ರೂಪ ಪಡೆಯುತ್ತದೆ ಎಂದು ಕನ್ನಡಪ್ರಭ ಹಿರಿಯ ವರದಿಗಾರ ಸೋಮರೆಡ್ಡಿ ಅಳವಂಡಿ ಹೇಳಿದರು.
ಬಹದ್ದೂರಬಂಡಿ ಗ್ರಾಮದಲ್ಲಿ ಕಿಲ್ಲೇದಾರ್ ಸಾಂಸ್ಕೃತಿಕ ಪ್ರತಿಷ್ಠಾನ, ಜೇನುಗೂಡು ಕಲಾ ಮತ್ತು ಸಾಂಸ್ಕೃತಿಕ ಸಂಸ್ಥೆ, ಸೃಜನ-ಸಮತ ಪ್ರಕಾಶನ ಹಾಗೂ ಹಲಗೇರಿಯ ಸ್ಪಂದನ ಕಲಾ ಮತ್ತು ಸಾಂಸ್ಕೃತಿಕ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಜಾನಪದ ಕಲಾವಿದ ಮೆಹಬೂಬ್ ಕಿಲ್ಲೇದಾರ್ ಅವರ ''ಮರೆಯಾಗುತ್ತಿರುವ ಜಾನಪದ ಪರಿಕರಗಳು ಹಾಗೂ ಸಾಂಪ್ರದಾಯಿಕ ಬಳಕೆ'' ಕೃತಿ ಮತ್ತು ಕವಿ ರಮೇಶ ಬನ್ನಿಕೊಪ್ಪ ಹಲಗೇರಿ ಅವರ ''ನೆಲ ನಂಜಾದ ಹೊತ್ತು'' ಕವನ ಸಂಕಲನ ಜನಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಸಾಮಾಜಿಕ ವ್ಯವಸ್ಥೆಯಲ್ಲಿನ ತಲ್ಲಣಗಳು, ಜನರ ಬದುಕಿನ ಸಂಕಷ್ಟಗಳು ಹಾಗೂ ಶ್ರಮಿಕ ವರ್ಗದ ನೋವುಗಳಿಗೆ ಸಾಹಿತ್ಯ ಸ್ಪಂದಿಸಬೇಕು. ಪುಸ್ತಕಗಳು ಕೇವಲ ಜ್ಞಾನ ನೀಡುವ ಸಾಧನಗಳಲ್ಲ, ಸಮಾಜದ ದಿಕ್ಕು ಬದಲಿಸುವ ಶಕ್ತಿಯೂ ಆಗಿವೆ. ಸಾಹಿತ್ಯದ ಮೂಲಕ ಮಾನವೀಯ ಮೌಲ್ಯಗಳನ್ನು ಬೆಳೆಸುವ ಕಾರ್ಯ ನಡೆಯಬೇಕು ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಡಾ. ನಿಂಗಪ್ಪ ಕಂಬಳಿ ಮಾತನಾಡಿ, ಸಾಹಿತ್ಯ ಮಾನವೀಯ ಮೌಲ್ಯಗಳನ್ನು ಮೂಡಿಸಬೇಕು. ಇಂದಿನ ವಿಷಮ ಪರಿಸ್ಥಿತಿಯಲ್ಲಿ ಮನುಷ್ಯರನ್ನು ಪ್ರೀತಿಸುವ ಶಕ್ತಿ ಪುಸ್ತಕಗಳಿಗೆ ಮಾತ್ರ ಇದೆ. ಪುಸ್ತಕ ಸಂಸ್ಕೃತಿ ಕ್ಷೀಣಿಸುತ್ತಿರುವ ಈ ಸಂದರ್ಭದಲ್ಲಿ ಪುಸ್ತಕಗಳನ್ನು ಪ್ರಕಟಿಸುತ್ತಿರುವುದು ಶ್ಲಾಘನೀಯ ಎಂದರು.ಅಂತರಾಷ್ಟ್ರೀಯ ಜಾನಪದ ಕಲಾವಿದ ಡಾ. ಜೀವನಸಾಬ ಬಿನ್ನಾಳ ಮಾತನಾಡಿ, ಸುತ್ತಮುತ್ತಲಿನ ವಸ್ತುಗಳು, ಘಟನೆಗಳು ಹಾಗೂ ಬದುಕಿನ ಅನುಭವಗಳನ್ನು ದಾಖಲಿಸುವುದು ಅತ್ಯಂತ ಅಗತ್ಯ. ದಾಖಲಿಸದಿದ್ದರೆ ಅವು ಮುಂದಿನ ಪೀಳಿಗೆಗೆ ದಕ್ಕುವುದಿಲ್ಲ. ಜನಪದವೆಂದರೆ ಬದುಕು, ಬದುಕು ಎಂದರೆ ಜನಪದ. ಮೆಹಬೂಬ್ ಕಿಲ್ಲೇದಾರ್ ಅವರು ತಮ್ಮ 20 ವರ್ಷಗಳ ಜಾನಪದ ಪಯಣದ ಅನುಭವವನ್ನು ಕೃತಿಯಲ್ಲಿ ದಾಖಲಿಸಿರುವುದು ಮಹತ್ವದ ಕಾರ್ಯ ಎಂದರು.
''ನೆಲ ನಂಜಾದ ಹೊತ್ತು'' ಕವನ ಸಂಕಲನ ಕುರಿತು ಮಾತನಾಡಿದ ಸಾಹಿತಿ ಯಲ್ಲಪ್ಪ ಮಲ್ಲಪ್ಪ ಹರನಾಳಗಿ, ಕವನ ಸಂಕಲನವು ಪ್ರಸ್ತುತ ಸಾಮಾಜಿಕ ತಲ್ಲಣಗಳಿಗೆ ಮಿಡಿಯುತ್ತದೆ. ಶ್ರಮಿಕ ವರ್ಗದ ನೋವು-ನಲಿವುಗಳನ್ನು ಅನಾವರಣಗೊಳಿಸಿದೆ. ನೆಲದ ಬದ್ಧತೆ ಇದ್ದಾಗ ಮಾತ್ರ ವ್ಯವಸ್ಥೆಯ ವಿರುದ್ಧ ಇಂತಹ ಕವಿತೆಗಳನ್ನು ಬರೆಯಲು ಸಾಧ್ಯ. ಕವಿತೆಗಳು ಮನುಷ್ಯತ್ವವನ್ನು ಸಾರುತ್ತವೆ ಎಂದು ಹೇಳಿದರು.ಜಾನಪದ ಕೃತಿ ಬಿಡುಗಡೆಗೊಳಿಸಿ ಮಾತನಾಡಿದ ಡಾ. ಸಿದ್ದಯ್ಯ ಪುರಾಣಿಕ ಟ್ರಸ್ಟ್ ಸದಸ್ಯ ಸಿದ್ದಲಿಂಗಪ್ಪ ಕೊಟ್ನೇಕಲ್ಲ, ನಮ್ಮ ಬಾಲ್ಯದ ಬದುಕು ಜನಪದದಿಂದ ಕೂಡಿತ್ತು. ಕೃತಿಯಲ್ಲಿ ದಾಖಲಾಗಿರುವ ಪರಿಕರಗಳನ್ನು ಬಳಸಿಕೊಂಡು ನಾವು ಬಾಲ್ಯದಲ್ಲಿ ಬದುಕಿದ್ದೇವೆ. ಮುಂದಿನ ಪೀಳಿಗೆಗೆ ಇಂತಹ ಜಾನಪದ ಪರಿಕರಗಳನ್ನು ಪರಿಚಯಿಸುವ ಅಗತ್ಯ ಎದುರಾಗಬಹುದು. ಈ ದೃಷ್ಟಿಯಿಂದ ಕೃತಿ ದಾಖಲಾರ್ಹವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಚಾಂದಪಾಷಾ ಕಿಲ್ಲೇದಾರ್ ಮಾತನಾಡಿದರು.ಪ್ರಾಸ್ತಾವಿಕವಾಗಿ ಮೆಹಬೂಬ್ ಕಿಲ್ಲೇದಾರ್ ಮಾತನಾಡಿದರು. ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯ ಮಹೇಶ ಬಳ್ಳಾರಿ, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಅಲಿಹುಸೇನ್ ಕಾರಟಗಿ, ಸೈಯದ್ ಸಾಬ್ ಕಿಲ್ಲೇದಾರ್, ಎಸ್ಡಿಎಂಸಿ ಸಮಿತಿ ಅಧ್ಯಕ್ಷ ಮೆಹಬೂಬ್ ಮುಲ್ಲಾ, ಶಿಕ್ಷಕ ಬಸವರಾಜ ಗೊಲ್ಲರ್, ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಮೆಹಬೂಬ್ ಮಣ್ಣೂರು, ಯಮನೂರು ಸಾಬ್ ಹಿರೇಮೂತಿ, ಫಕೀರಸ್ವಾಮಿ ಗಣಾಚಾರಿ ಉಪಸ್ಥಿತರಿದ್ದರು.
ರಫಿ ಕರ್ಕಿಹಳ್ಳಿ ಪ್ರಾರ್ಥನೆ ಹಾಗೂ ವಿವಿಧ ಗೀತೆಗಳನ್ನು ಹಾಡಿದರು. ರಮೇಶ ಸಿ. ಬನ್ನಿಕೊಪ್ಪ ಸ್ವಾಗತಿಸಿದರು. ಫಕ್ಕಿರೇಶ ಎಮ್ಮಿ ಕಾರ್ಯಕ್ರಮ ನಿರೂಪಿಸಿದರು. ಚಂದ್ರಶೇಖರ ಹಿರೇಮಠ ವಂದಿಸಿದರು. ಕಾರ್ಯಕ್ರಮ ನಿರ್ವಹಣೆಯಲ್ಲಿ ಪರಶುರಾಮ ಕುಂಬಾರ, ಸದ್ದಾಂ ಹುಸೇನ ಕಿಲ್ಲೇದಾರ್, ಮಂಜುನಾಥ ಕುಂಬಾರ, ಪ್ರತಾಪ ಗೊಲ್ಲರ, ಬಾಬಾ ಕಿಲ್ಲೇದಾರ್, ಸಿರಾಜುದ್ದೀನ್ ಹಾಗೂ ಹಸನ ಕಮ್ಮಾರ ಸಹಕರಿಸಿದರು. ಮರಿಯಪ್ಪ ಚಾಮಲಾಪುರ ಅವರು ಗೀತೆಗಳನ್ನು ಹಾಡಿದರು.