ಸಾರಾಂಶ
ಹಾವೇರಿ: ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಮತ್ತು ಬಲಿದಾನದ ಪರಿಣಾಮ ನಾವಿಂದು ಸ್ವತಂತ್ರ ಬದುಕು ರೂಪಿಸಿಕೊಳ್ಳಲು ಸಾಧ್ಯವಾಗಿದೆ. ತಾಯ್ನಾಡಿಗೆ ತಮ್ಮ ಜೀವ, ಜೀವನ ಸವೆಸಿದ ಮಹಾತ್ಮರ ಹೆಸರಿಗೆ ಮೆರುಗು ತರುವ ಕಾರ್ಯವನ್ನು ನಾವೆಲ್ಲರೂ ಸೇರಿ ಮಾಡಬೇಕಿದೆ ಎಂದು ವಿಧಾನಸಭೆ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ ಹೇಳಿದರು.
ನಗರದ ಗಾಂಧಿ ಭವನದಲ್ಲಿ ಹುತಾತ್ಮ ಮೈಲಾರ ಮಹಾದೇವಪ್ಪನವರ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಹಾಗೂ ಅರಳಿಕಟ್ಟಿ ಪ್ರಕಾಶನದ ಜಂಟಿ ಆಶ್ರಯದಲ್ಲಿ ಅರಳಿಕಟ್ಟಿ ಗೂಳಪ್ಪ ಅವರ ಹಾವೇರಿ ವೀರರ ಸ್ವಾತಂತ್ರ್ಯ ಸಂಗ್ರಾಮ ಪುಸ್ತಕ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ನಮ್ಮ ಜಿಲ್ಲೆಯ ಹೋರಾಟಗಾರರು ರಾಷ್ಟ್ರೀಯ ನಾಯಕರೊಂದಿಗೆ ಒಡನಾಟ ಇಟ್ಟುಕೊಂಡಿದ್ದರು. ಸಹಜವಾಗಿ ಅವರಿಗೆ ರಾಷ್ಟ್ರೀಯ ಪ್ರಜ್ಞೆ ಬೆಳೆಯಲು ಕಾರಣವಾಯಿತು. ದೇಶಕ್ಕಾಗಿ ತಮ್ಮನ್ನು ಅರ್ಪಿಸಿಕೊಂಡವರನ್ನು ಇಂದು ಸ್ಮರಿಸುವ ಹೊಣೆಗಾರಿಕೆ ನಮ್ಮ ಮೇಲಿದೆ. ಅದಕ್ಕಾಗಿ ರಸ್ತೆ ಮತ್ತು ಉದ್ಯಾನಗಳಿಗೆ ಆಯಾ ಭಾಗದ ಹೋರಾಟಗಾರರ ಹೆಸರಿಡುವುದು ಸೂಕ್ತ. ಅಷ್ಟೇ ಅಲ್ಲದೇ ಪುಸ್ತಕ ಖರೀದಿಸಿ ಓದುವವರ ಸಂಖ್ಯೆ ವಿರಳವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸರ್ಕಾರವೇ ಖುದ್ದು ಆಸಕ್ತಿ ವಹಿಸಿ ಶಾಸಕರ ನಿಧಿಯಿಂದ ಪುಸ್ತಕ ಖರೀದಿಗೆ ಮುಂದಾಗುತ್ತಿದೆ ಎಂದರು.ಪುಸ್ತಕದ ಪೂರ್ವಾಪರ ಕುರಿತು ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ಎ. ಮುರಿಗೆಪ್ಪ ಮಾತನಾಡಿ, ಬ್ರಿಟಿಷರ ವಿರುದ್ಧ ನಡೆದ ಹೋರಾಟದಲ್ಲಿ ಹಾವೇರಿ ಜಿಲ್ಲೆಯ ಹೋರಾಟಗಾರರು ಮುಂಚೂಣಿಯಲ್ಲಿದ್ದರು. ಅರಳಿಕಟ್ಟಿ ಗೂಳಪ್ಪ ಅವರು ಬರೆದ ಹಾವೇರಿ ವೀರರ ಸ್ವಾತಂತ್ರ್ಯ ಸಂಗ್ರಾಮ ಇತಿಹಾಸ ಅಲ್ಲದಿದ್ದರೂ ಪರಿಚಯಿಸುವ ಮಾಹಿತಿಯನ್ನು ಒಳಗೊಂಡಿದೆ. ಸ್ಥಳೀಯ ಸ್ವಾತಂತ್ರ್ಯ ಹೋರಾಟಗಾರರ ಕುರಿತು ದಾಖಲೀಕರಣ ಅಭಿನಂದನೀಯ ಎಂದರು.
ಸ್ವಾತಂತ್ರ್ಯ ಹೋರಾಟಗಾರ ಸಂಗೂರ ಕರಿಯಪ್ಪ ಸ್ಮಾರಕ ಟ್ರಸ್ಟ್ ಅಧ್ಯಕ್ಷ ಎಸ್.ಎಫ್.ಎನ್. ಗಾಜಿಗೌಡ್ರ ಮಾತನಾಡಿ, ನಮ್ಮ ಹಾವೇರಿ ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರರ ಪೈಕಿ ಕೆಲವರು ಸರ್ಕಾರದ ಪಿಂಚಣಿಯನ್ನು ಪಡೆಯಲಿಲ್ಲ. ಕಾರಣ ಕೇಳಿದರೆ ನಾವು ದೇಶಕ್ಕೆ ಸೇವೆ ಮಾಡಿದ್ದೇವೆಯೇ ಹೊರತು ಪಿಂಚಣಿ ಬಯಸಿ ಹೋರಾಡಿಲ್ಲ ಎಂದು ಆದರ್ಶ ಮೆರೆದಿದ್ದರು. ನಮ್ಮ ನೆಲದ ನಾಯಕರ ಪರಿಚಯಿಸುವ ನಿಟ್ಟಿನಲ್ಲಿ ಯಾರನ್ನೂ ಕಡೆಗಣಿಸಬಾರದು ಎಂದು ಹೇಳಿದರು.ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಲಿಂಗಯ್ಯ ಬಿ. ಹಿರೇಮಠ, ಸ್ವಾತಂತ್ರ್ಯ ಹೋರಾಟಗಾರ ಶಿವಣ್ಣ ನೆಶ್ವಿ ಪುತ್ರಿ ಪಾರ್ವತಿ ಇಂದುಶೇಖರ ಮಾತನಾಡಿದರು. ಸಾಹಿತಿ ಸತೀಶ ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು.
ಜಾನಪದ ವಿದ್ವಾಂಸ ಡಾ. ಶಂಭು ಬಳಿಗಾರ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎಂ. ಮೈದೂರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಆರ್.ವಿ. ಚಿನ್ನಿಕಟ್ಟಿ, ಗ್ರಾಮ ಸ್ವರಾಜ್ ಅಭಿಯಾನದ ಆವರಗೆರೆ ರುದ್ರಮುನಿ, ಸ್ವಾತಂತ್ರ್ಯ ಹೋರಾಟಗಾರರ ಕುಟುಂಬದ ಚಿಕ್ಕಮ್ಮ ಆಡೂರ, ಅನಿತಾ ಪಾಟೀಲ, ಪುಷ್ಪಾ ಕಾಖಂಡಕಿ, ಎಸ್.ಜಿ. ಮಹಾನುಭಾವಿಮಠ, ಮಾಲತೇಶ ದೊಡ್ಡಮನಿ, ಸಿದ್ಧಲಿಂಗೇಶ ವಳಸಂಗದ, ಲಕ್ಷ್ಮಣ ತಾಳೂರ, ಪ್ರಭುಗೌಡ ಪಾಟೀಲ, ಶಿವಬಸಪ್ಪ ಜಾಬಿನ್, ಚನ್ನಬಸಪ್ಪ ಕುದರಿಹಾಳ, ಸುರೇಶ ಹೊಸಮನಿ ಇದ್ದರು.ಗೂಳಪ್ಪ ಅರಳಿಕಟ್ಟಿ ಸ್ವಾಗತಿಸಿದರು. ಸಿದ್ದೇಶ್ವರ ಹುಣಶಿಕಟ್ಟಿಮಠ ವಂದಿಸಿದರು.