ಸಮಾಜ ಸೇವೆಗೆ ಯುವಶಕ್ತಿ ಸದಾ ಸಿದ್ಧರಾಗಲಿ: ಡಾ. ಚಂದ್ರ ಪೂಜಾರಿ

| Published : May 30 2024, 12:50 AM IST

ಸಾರಾಂಶ

ಶಿಕ್ಷಣದ ಜತೆ ವಿದ್ಯಾರ್ಥಿಗಳಲ್ಲಿ ಸಮಾಜ, ದೇಶದ ಅಭಿವೃದ್ಧಿಗಾಗಿ ಉತ್ತಮ ನಾಯಕತ್ವದ ಗುಣಗಳ ಅತಿಅವಶ್ಯ.

ದಾಂಡೇಲಿ: ಯುವಕರು ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಲು ಸದಾ ಸಿದ್ಧರಾಗಿರಬೇಕು. ಇದಕ್ಕಾಗಿ ರಾಷ್ಟ್ರೀಯ ಸೇವಾ ಯೋಜನೆ(ಎನ್‌ಎಸ್‌ಎಸ್) ಹಮ್ಮಿಕೊಳ್ಳಲಿರುವ ಶಿಬಿರಗಳು ಉಪಯುಕ್ತವಾಗಿವೆ ಎಂದು ಧಾರವಾಡದ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಅಕಾಡೆಮಿಯ ನಿರ್ದೇಶಕ ಡಾ. ಚಂದ್ರ ಪೂಜಾರಿ ತಿಳಿಸಿದರು.ನಗರದ ಸರ್ಕಾರಿ ಪ್ರಥಮದರ್ಜೆ ಮಹಾವಿದ್ಯಾಲಯದಲ್ಲಿ ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯ ಆಶ್ರಯದಲ್ಲಿ ೭ ದಿನಗಳ ರಾಷ್ಟ್ರೀಯ ಸೇವಾ ಯೋಜನಾ ಕೋಶದ ವಿಶ್ವವಿದ್ಯಾಲಯ ಮಟ್ಟದ ನಾಯಕತ್ವ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ, ಶಿಕ್ಷಣದ ಜತೆ ವಿದ್ಯಾರ್ಥಿಗಳಲ್ಲಿ ಸಮಾಜ, ದೇಶದ ಅಭಿವೃದ್ಧಿಗಾಗಿ ಉತ್ತಮ ನಾಯಕತ್ವದ ಗುಣಗಳ ಅತಿಅವಶ್ಯ ಎಂದರು.

ರಂಗ ನಿರ್ದೇಶಕ ಡಾ. ಶ್ರೀಪಾದ ಭಟ್ ಮಾತನಾಡಿ, ಉತ್ತಮ ಭವಿಷ್ಯದ ನಿರ್ಮಾಣದಲ್ಲಿ, ಉತ್ತಮ ನಡೆನುಡಿ ರೂಢಿಸಿಕೊಳ್ಳುವಲ್ಲಿ ಎನ್ಎಸ್ಎಸ್ ಶಿಬಿರಗಳು ಬಹಳ ಅನುಕೂಲವಾಗಿವೆ ಎಂದರು.

ಕರ್ನಾಟಕದ ವಿಶ್ವವಿದ್ಯಾಲಯದ ಎನ್ಎಸ್ಎಸ್ ಸಂಯೋಜನಾ ಅಧಿಕಾರಿ ಡಾ. ಎಂ.ಬಿ. ದಳಪತಿ ಮಾತನಾಡಿ, ವಿಶ್ವವಿದ್ಯಾಲಯ ಎನ್ಎಸ್ಎಸ್ ಕ್ಯಾಂಪ್‌ಗಳನ್ನು ವಲಯ ಮಟ್ಟದಲ್ಲಿ ವಿದ್ಯಾರ್ಥಿಗಳ ಅನುಕೂಲತೆಗಾಗಿ ಏರ್ಪಡಿಸುತ್ತದೆ. ಶಿಬಿರಗಳ ಉದ್ದೇಶ ವ್ಯಕ್ತಿತ್ವ ವಿಕಸನ, ಸಮಾಜ ಸೇವೆ ಗುರಿಗಳನ್ನು ಇಟ್ಟುಕೊಂಡು ನಡೆಸಲಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ವಿಶೇಷ ಅಹ್ವಾನಿತರಾಗಿ ಕಾಗದ ಕಾರ್ಖಾನೆಯ ನಿವೃತ್ತ ಸಾರ್ವಜನಿಕ ಸಂಪರ್ಕ ಅಧಿಕಾರಿ ಕೆ.ಜಿ. ಗಿರಿರಾಜ, ನಿವೃತ್ತ ಪ್ರಾಚಾರ್ಯ ಯು.ಎಸ್. ಪಾಟೀಲ ಮಾತನಾಡಿ, ೭ ದಿನಗಳ ಶಿಬಿರದಲ್ಲಿ ವಿದ್ಯಾರ್ಥಿಗಳು ಹೊಸ ಅನುಭವನ್ನು ಕಲಿತು ಸಮಾಜಕ್ಕೆ ಉಪಯುಕ್ತವಾಗುವ ಹಾಗೆ ನಾಯಕತ್ವ ಬೆಳೆಸಿಕೊಳ್ಳಬೇಕೆಂದರು.

ಸರ್ಕಾರಿ ಡಿಗ್ರಿ ಕಾಲೇಜಿನ ಪ್ರಾಂಶುಪಾಲ ಡಾ. ಎಂ.ಡಿ. ಒಕ್ಕುಂದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಡಾ. ನಾಸೀರ್ ಅಹ್ಮದ್ ಜಂಗೂಬಾಯಿ ಸ್ವಾಗತಿಸಿದರು. ಕಾಲೇಜಿನ ಎನ್ಎಸ್ಎಸ್ ಅಧಿಕಾರಿ ಡಾ. ವಿನಯಾ ಜಿ. ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿನಿ ಚಂದ್ರಿಕಾ ಎಸ್. ನಿರೂಪಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಬಸವರಾಜ ಹುಲಿಕಟ್ಟಿ ವಂದಿಸಿದರು. ಶಿಬಿರದಲ್ಲಿ ೨೦೦ಕ್ಕೂ ಹೆಚ್ಚು ವಿವಿಧ ಕಾಲೇಜಿನ ಎನ್ಎಸ್ಎಸ್ ಶಿಬಿರಾರ್ಥಿಗಳು ಪಾಲ್ಗೊಂಡಿದ್ದರು. ಸಭಾ ಕಾರ್ಯಕ್ರಮದ ನಂತರ ಡಾ. ಶ್ರೀಪಾದ ಭಟ್ ನಿರ್ದೇಶನದ ಮಂಟೆಸ್ವಾಮಿ ನಾಟಕ ಪ್ರರ್ದಶನ ಏರ್ಪಡಿಸಲಾಗಿತ್ತು.