ಸಾಧನೆ ಹಿಂದೆ ಸಾಕಷ್ಟು ಕಷ್ಟಗಳು ಹಾಗೂ ಸವಾಲುಗಳಿರುತ್ತವೆ. ಎಲ್ಲವನ್ನು ಎದುರಿಸಿ ಶ್ರದ್ಧೆಯಿಂದ ಅಧ್ಯಯನ ಮಾಡಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಗೌರಿಮಠದ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಹಾವೇರಿ: ಸಾಧನೆ ಹಿಂದೆ ಸಾಕಷ್ಟು ಕಷ್ಟಗಳು ಹಾಗೂ ಸವಾಲುಗಳಿರುತ್ತವೆ. ಎಲ್ಲವನ್ನು ಎದುರಿಸಿ ಶ್ರದ್ಧೆಯಿಂದ ಅಧ್ಯಯನ ಮಾಡಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಗೌರಿಮಠದ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ನಗರದ ಗೌರಿಮಠದ ಶ್ರೀ ಮಲ್ಲಿಕಾರ್ಜುನ ಆಂಗ್ಲ ಮಾಧ್ಯಮ ಶಾಲೆಯ ಅಧಿಕ ಅಂಕ ಪಡೆದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಸನ್ಮಾನ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಸಾಧನೆ ನಿಂತ ನೀರಾಗದೆ ನಿರಂತರವಾಗಿರಬೇಕು. ಸಾಧನೆಗೆ ಶಿಕ್ಷಕರು, ಪಾಲಕರು ಮತ್ತು ವಿದ್ಯಾರ್ಥಿಗಳು ಹೀಗೆ ಎಲ್ಲರ ಶ್ರಮ, ಪ್ರೋತ್ಸಾಹ ಇರಬೇಕು ಎಂದರು.ಮುಖ್ಯೋಪಾಧ್ಯಾಯ ಶಂಕರ ಅಕ್ಕಸಾಲಿ ಮಾತನಾಡಿ, ಮಕ್ಕಳು ಆಲಸ್ಯ ಬಿಟ್ಟು ಶ್ರದ್ದೆಯಿಂದ ಅಭ್ಯಾಸ ಮಾಡಿ ಉತ್ತಮ ಅಂಕ ಪಡೆದು ಪಾಲಕರಿಗೆ ಕೀರ್ತಿ ತರಬೇಕು. ನಮ್ಮ ಶಾಲೆಯ ಮಕ್ಕಳು ಉತ್ತಮ ಅಂಕ ಪಡೆದು ನೂರಕ್ಕೆ ನೂರು ಫಲಿತಾಂಶ ಬಂದಿರುವುದು ಸಂತಸ ತಂದಿದೆ ಎಂದರು.
ಅಧಿಕ ಅಂಕ ಪಡೆದ ದಾನೇಶ್ವರಿ ಹಿರೇಮಠ, ಭವಾನಿ ಹಿರೇಮಠ, ಗೌಸಿಯಾ ಬೂದಗಟ್ಟಿ, ಸೂಪಿಯಾ ತಿಮ್ಮಾಪುರ ಅವರನ್ನು ಶ್ರೀಗಳು ಸನ್ಮಾನಿಸಿದರು.ಸನ್ಮಾನ ಸ್ವೀಕರಿಸಿದ ವಿದ್ಯಾರ್ಥಿಗಳು ಮಾತನಾಡಿ, ಶ್ರೀಗಳ ಆಶೀರ್ವಾದ, ಶಿಕ್ಷಕರ ಪ್ರೋತ್ಸಾಹ, ಸಹಕಾರದಿಂದ ಉತ್ತಮ ಅಂಕ ಪಡೆಯಲು ಸಾಧ್ಯವಾಗಿದೆ ಎಂದರು.
ಚುಟುಕು ಸಾಹಿತ್ಯ ಪರಿಷತ್ ಪ್ರಧಾನ ಕಾರ್ಯದರ್ಶಿ ಗಂಗಯ್ಯ ಕುಲಕರ್ಣಿ ಇದ್ದರು. ಶಿಕ್ಷಕ ಮಾಂತೇಶ ಸಂಗೂರ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.