ಸಾರಾಂಶ
ದಾವಣಗೆರೆ: ಪ್ರದೇಶ ರೈತ ಸಂಘ ಅಧ್ಯಕ್ಷ, ಮಾಯಕೊಂಡಪುರ ಅಭಿವೃದ್ಧಿ ವೇದಿಕೆ ಅಧ್ಯಕ್ಷ, ತಾಲೂಕು ಹೋರಾಟ ಸಮಿತಿ, ಚಿತ್ರದುರ್ಗ- ದಾವಣಗೆರೆ ಅವಳಿ ಜಿಲ್ಲೆಗಳ ಶೈಕ್ಷಣಿಕ, ಸಾಮಾಜಿಕ ಹೋರಾಟಗಳಲ್ಲಿ ಸದಾ ಮುಂಚೂಣಿಯಲ್ಲಿರುತ್ತಿದ್ದ ಎಂ.ಎಸ್.ಕುಮಾರ ಶಾಸ್ತ್ರಿ (85) ಬೆಂಗಳೂರಿನಲ್ಲಿ ಶನಿವಾರ ಬೆಳಗಿನ ಜಾವ ನಿಧನರಾದರು.
ಅವರಿಗೆ ಇಬ್ಬರು ಹೆಣ್ಣುಮಕ್ಕಳು, ಓರ್ವ ಮಗ ಇದ್ದಾರೆ. 8 ವರ್ಷಗಳ ಹಿಂದಷ್ಟೇ ಎಂ.ಎಸ್.ಕೆ. ಶಾಸ್ತ್ರಿ ಅವರ ಪತ್ನಿ ಅಗಲಿದ್ದರು. ಅಂತ್ಯಕ್ರಿಯೆ ಶನಿವಾರ ಮಧ್ಯಾಹ್ನ ಬೆಂಗಳೂರಿನ ಚಿತಾಗಾರದಲ್ಲಿ ನಡೆಯಿತು.ಶ್ರದ್ಧಾಂಜಲಿ ಸಭೆ:
ದಾವಣಗೆರೆ ತಾಲೂಕಿನ ಸ್ವಗ್ರಾಮ ಮಾಯಕೊಂಡದಲ್ಲಿ ಎಂ.ಎಸ್.ಕೆ.ಶಾಸ್ತ್ರಿ ಅವರಿಗೆ ಶ್ರೀ ಆಂಜನೇಯ ವೃತ್ತದಲ್ಲಿ ಶನಿವಾರ ಶ್ರದ್ಧಾಂಜಲಿ ಸಭೆ ನಡೆಸಿ, ಅಂತಿಮ ಗೌರವ ಸಲ್ಲಿಸಲಾಯಿತು. ಕನ್ನಡ ಯುವಶಕ್ತಿ ಕೇಂದ್ರದ ಅಧ್ಯಕ್ಷ, ಕಾರ್ಯದರ್ಶಿ, ಪದಾಧಿಕಾರಿಗಳು, ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷರು, ಸದಸ್ಯರು, ಗ್ರಾಮದ ಹಿರಿಯರು, ಮಹಿಳೆಯರು, ವಿದ್ಯಾರ್ಥಿ ಯುವ ಜನರು ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ದಾವಣಗೆರೆ ನಗರ, ಜಿಲ್ಲೆಯ ರಚನೆ, ಅಭಿವೃದ್ಧಿ, ರೈಲ್ವೆ ಯೋಜನೆಗಳು, ರಾಷ್ಟ್ರೀಯ ಹೆದ್ದಾರಿ, ವಿದ್ಯಾರ್ಥಿಗಳು, ರೈತರ ಸಮಸ್ಯೆಗಳು, ಜ್ವಲಂತ ಸಮಸ್ಯೆಗಳ ಬಗ್ಗೆ ಎಂ.ಎಸ್.ಕೆ. ಶಾಸ್ತ್ರಿ ಸದಾ ಧ್ವನಿ ಎತ್ತುತ್ತಿದ್ದರು. ಅವರ ಹೋರಾಟದ ಫಲವಾಗಿ ಕೇಂದ್ರ, ರಾಜ್ಯ ಸರ್ಕಾರಗಳ ಮಟ್ಟದಲ್ಲಿ ಪತ್ರ ವ್ಯವಹಾರ ಚುರುಕಾಗಿ, ಸಾಕಷ್ಟು ಪ್ರಯತ್ನಗಳು ಯಶಸ್ವಿಯಾದಂತಹ ನಿದರ್ಶನಗಳಿವೆ. ಆದರೆ, ಹುಟ್ಟೂರು ಮಾಯಕೊಂಡ ಬ್ರಿಟಿಷರ ಕಾಲದಲ್ಲಿ, ಪಾಳೇಗಾರರ ಆಳ್ವಿಕೆಯಲ್ಲಿ ಹೇಗೆ ಪ್ರಮುಖ ತಾಣವಾಗಿತ್ತೋ ಹಾಗೆಯೇ ತಾಲೂಕು ಕೇಂದ್ರ ಆಗಬೇಕೆಂಬ ಎಂ.ಎಸ್.ಕೆ. ಶಾಸ್ತ್ರಿ ಕನಸು ಮಾತ್ರ ಇನ್ನೂ ಕನಸಾಗಿಯೇ ಉಳಿದಿದೆ.
- - --21ಕೆಡಿವಿಜಿ24:
ಎಂ.ಎಸ್.ಕೆ.ಶಾಸ್ತ್ರಿ.