ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ ಗುಡ್ಡಗಾಡು ಪ್ರದೇಶವಾಗಿರುವ ಕೊಡಗಿನಲ್ಲಿ ಪ್ರವಾಸಿಗರ ಆಗಮನದ ಸಂದರ್ಭ ಸಾಕಷ್ಟು ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿದೆ. ಆದ್ದರಿಂದ ಈ ವರ್ಷ ಟ್ರಾಫಿಕ್ ಸಮಸ್ಯೆಗೆ ಹೆಚ್ಚಿನ ಆದ್ಯತೆ ನೀಡಿ ಇದರ ಪರಿಹಾರಕ್ಕೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ತಿಳಿಸಿದ್ದಾರೆ.
ಕೊಡಗು ಪತ್ರಕರ್ತರ ಸಂಘ ಹಾಗೂ ಕೊಡಗು ಪತ್ರಿಕಾ ಭವನ ಟ್ರಸ್ಟ್ ವತಿಯಿಂದ ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಆಯೋಜಿಸಲಾಗಿದ್ದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ವರ್ಷಾಂತ್ಯ ಸಂದರ್ಭದಲ್ಲಿ ಕೊಡಗಿಗೆ ಒಂದೇ ದಿನ ಲಕ್ಷಾಂತರ ಮಂದಿ ಪ್ರವಾಸಿಗರು ಆಗಮಿಸುತ್ತಾರೆ. ಈ ಸಂದರ್ಭ ಹೆಚ್ಚು ಟ್ರಾಫಿಕ್ ಸಮಸ್ಯೆಯಾಗುತ್ತದೆ. ಇದನ್ನು ನಿಯಂತ್ರಣ ಮಾಡುವುದು ದೊಡ್ಡ ಸವಾಲಾಗಿ ಪರಿಣಮಿಸಿದೆ. ಈ ಹಿನ್ನೆಲೆಯಲ್ಲಿ ಮಡಿಕೇರಿಯಲ್ಲಿ ಮಲ್ಟಿ ಪಾರ್ಕಿಂಗ್ ವ್ಯವಸ್ಥೆ ತುಂಬಾ ಅಗತ್ಯ ಇದೆ ಎಂದು ತಿಳಿಸಿದರು.
ಕಳೆದ ವರ್ಷಕ್ಕೆ ಹೋಲಿಸಿಕೊಂಡರೆ ಈ ವರ್ಷ ಟ್ರಾಫಿಕ್‌ನಲ್ಲಿ ಐದು ಪಟ್ಟು ಪ್ರಕರಣ ಹೆಚ್ಚಾಗಿ ದಾಖಲಿಸಿಕೊಳ್ಳಲಾಗಿದೆ. ಟ್ರಾಫಿಕ್ ಸಮಸ್ಯೆ ಬಗೆಹರಿಸಲು ಪೊಲೀಸ್ ಇಲಾಖೆಯ ಜವಾಬ್ದಾರಿ ಮಾತ್ರವಲ್ಲ. ಎಲ್ಲರ ಸಹಕಾರ ಇದ್ದರೆ ಮಾತ್ರ ಅದು ಸಾಧ್ಯವಾಗುತ್ತದೆ. ಟ್ರಾಫಿಕ್ ಸಮಸ್ಯೆ ಜಿಲ್ಲೆಯಲ್ಲಿ ಇಷ್ಟಿದ್ದರೂ ಕೂಡ ಕುಶಾಲನಗರಕ್ಕೆ ಟ್ರಾಫಿಕ್ ಪೊಲೀಸ್ ಠಾಣೆ ಅವಶ್ಯಕತೆ ಇಲ್ಲ ಎಂಬ ಮಾತುಗಳು ಕೇಳಿ ಬರುತ್ತಿದೆ ಎಂದರು.ಪೊಲೀಸರಿಂದ ಕುಂದು ಕೊರತೆ ಸಭೆಗಳು ನಡೆಯುತ್ತಿಲ್ಲ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಈ ಬಗ್ಗೆ ತಾನು ಜಿಲ್ಲೆಯ ಎಲ್ಲ ಪೊಲೀಸ್ ಠಾಣೆಗಳಿಗೆ ಮಾಹಿತಿ ನೀಡಿದ್ದೇನೆ. ಕುಂದು ಕೊರತೆ ಸಭೆಗಳನ್ನು ನಡೆಸಿ ಅದರ ಚಿತ್ರವನ್ನು ಕಳುಹಿಸುವಂತೆ ಸೂಚನೆ ಕೂಡ ನೀಡಿದ್ದೇನೆ. ಇತ್ತೀಚೆಗೆ ಅದು ಪಾಲನೆಯಾಗುತ್ತಿದೆ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರ ಯಾವುದೇ ದೂರು ಪ್ರಕರಣಗಳನ್ನು ಆದಷ್ಟು ಬೇಗ ಇತ್ಯರ್ಥಗೊಳಿಸಲಾಗುತ್ತಿದೆ ಎಂದು ತಿಳಿಸಿದರು. ಜೂಜಾಟ ಮಾಹಿತಿ ಸಂಗ್ರಹ: ಜಿಲ್ಲೆಯಲ್ಲಿ ಜೂಜಾಟ ಪ್ರಕರಣ ಬಗ್ಗೆ ಮಾಹಿತಿ ಸಂಗ್ರಹಿಸಿ ಪ್ರಕರಣ ದಾಖಲಿಸಲಾಗುತ್ತಿದೆ. ನಮ್ಮಲ್ಲಿಯೇ ಕೆಲವರು ಮಾಹಿತಿ ನೀಡುತ್ತಿದ್ದರೆ ಅಂತಹವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುತ್ತದೆ. ಕರ್ತವ್ಯ ಲೋಪ ಮಾಡಿದ ನಮ್ಮ ಕೆಲವು ಸಿಬ್ಬಂದಿ ವಿರುದ್ಧ ಕೂಡ ಕ್ರಮ ಜರುಗಿಸಲಾಗಿದೆ. ಅಲ್ಲದೆ ಜಿಲ್ಲೆಯಲ್ಲಿ ಉತ್ತಮ ಕೆಲಸ ಮಾಡಿದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಇಲಾಖೆಯಿಂದ ಶ್ಲಾಘಿಸಲಾಗಿದೆ ಎಂದು ಹೇಳಿದರು.
ಮಾಜಿ ಯೋಧ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಡೆತ್ ನೋಟ್ ನಲ್ಲಿ ಉಲ್ಲೇಖ ಆಗಿರುವ ಪೊಲೀಸ್ ಸತೀಶ್ ಅವರ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಎಸ್ಪಿ, ಸತೀಶ್ ಎಂಬ ಹೆಸರಿನಲ್ಲಿ ಪೊಲೀಸ್ ಇಲಾಖೆಯಲ್ಲಿ ಯಾರೂ ಕೂಡ ಇಲ್ಲ. ನಾವು ತಪ್ಪು ಮಾಡಿದವರನ್ನು ಯಾವುದೇ ಕಾರಣಕ್ಕೂ ರಕ್ಷಿಸುವುದಿಲ್ಲ. ನಮ್ಮ ಇಲಾಖೆಯಲ್ಲಿನ ಸಿಬ್ಬಂದಿ ತಪ್ಪು ಮಾಡಿದ್ದರೆ ಅಂತಹವರ ವಿರುದ್ಧ ಕೂಡ ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿ ಸ್ಪಷ್ಟಪಡಿಸಿದರು.ವಲಸೆ ಕಾರ್ಮಿಕರಿಂದ ಹಲವು ಕಡೆಗಳಲ್ಲಿ ಸಮಸ್ಯೆಯಾಗುತ್ತಿದೆ. ಇದರಲ್ಲಿ ಪೊಲೀಸ್ ಇಲಾಖೆಯ ಜವಾಬ್ದಾರಿ ಮಾತ್ರವಲ್ಲ. ಬೆಳೆಗಾರರದ್ದು ಕೂಡ ಅಷ್ಟೇ ಜವಾಬ್ದಾರಿ ಇದೆ. ಕೆಲವು ಬೆಳೆಗಾರರು ಸಮಸ್ಯೆ ಆದ ಮೇಲೆ ನಮ್ಮ ಬಳಿ ಬರುತ್ತಾರೆ. ಆದ್ದರಿಂದ ತೋಟಕ್ಕೆ ವಲಸೆ ಕಾರ್ಮಿಕರನ್ನು ತೆಗೆದುಕೊಳ್ಳುವ ಸಂದರ್ಭದಲ್ಲಿ ಅವರ ದಾಖಲೆಗಳನ್ನು ತೆಗೆದುಕೊಳ್ಳುವುದು ಮುಖ್ಯ ಎಂದರು.
ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಮುರುಳೀಧರ್ ಇದ್ದರು. ಸಂಘದ ಗೌರವ ಸಲಹೆಗಾರ ಅನಿಲ್ ಎಚ್.ಟಿ. ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಉಜ್ವಲ್ ರಂಜಿತ್ ಸ್ವಾಗತಿಸಿ, ಉಪಾಧ್ಯಕ್ಷ ರವಿ ಕುಮಾರ್ ವಂದಿಸಿದರು. ಕೌಟುಂಬಿಕ ಕಲಹಕ್ಕೆ ಕುಡಿತ ಕಾರಣ!ಕೊಡಗು ಜಿಲ್ಲೆಯಲ್ಲಿ ರಾಜಕೀಯ ಹಾಗೂ ಧಾರ್ಮಿಕ ವಿಚಾರಕ್ಕೆ ಸಂಬಂಧಿಸಿದ ಕಲಹಗಳು ಕಡಿಮೆ. ಆದರೆ ಕೌಟುಂಬಿಕ ಕಲಹ ಪ್ರಕರಣಗಳು ಹೆಚ್ಚಾಗಿವೆ. ಇದಕ್ಕೆ ಮದ್ಯಪಾನವೇ ಪ್ರಮುಖ ಕಾರಣವಾಗಿದೆ. ಬಹುತೇಕ ಪ್ರಕರಣಗಳಲ್ಲಿ ಕುಡಿತದಿಂದಲೇ ಅಪರಾಧ ಕೃತ್ಯ ಪ್ರಕರಣಗಳು ನಡೆದಿರುವುದು ಅಧಿಕ. ಜಿಲ್ಲೆಯಲ್ಲಿ ಅಕ್ರಮ ಮದ್ಯ ಮಾರಾಟದ ಬಗ್ಗೆ ಕೂಡ ಕ್ರಮ ಆಗುತ್ತಿದೆ. ಅಕ್ರಮ ಮದ್ಯ ಮಾರಾಟ ಮಾಡುವವರಿಗೆ ಕಾನೂನಿನ ಭಯ ಇರಬೇಕು. ಹಾಗಿದ್ದಲ್ಲಿ ಮಾತ್ರ ಇದನ್ನು ತಡೆಗಟ್ಟಲು ಸಾಧ್ಯ ಎಂದರು. ಅನಧಿಕೃತ ಹೋಂಸ್ಟೇ ಇದ್ದರೆ 112ಗೆ ಕರೆ ಮಾಡಿ...
ಕೊಡಗು ಜಿಲ್ಲೆಯಲ್ಲಿ ಹೋಂಸ್ಟೇ ಪದ್ಧತಿ ಹಲವು ವರ್ಷಗಳಿಂದ ನಡೆದುಕೊಂಡು ಬರುತ್ತಿದೆ. ಇದು ಕೊಡಗಿನ ಪ್ರಮುಖ ಉದ್ಯಮ ಕೂಡ ಇತ್ತೀಚೆಗೆ ಆಗಿದೆ. ಆದ್ದರಿಂದ ಅಧಿಕೃತವಾಗಿ ಹೋಂಸ್ಟೇಗಳನ್ನು ನಡೆಸಬೇಕು. ಯಾವುದಾದರೂ ಅಕ್ರಮ ಹೋಂಸ್ಟೇಗಳು ನಡೆಯುತ್ತಿರುವುದು ಕಂಡುಬಂದರೆ ಸಾರ್ವಜನಿಕರು ಈ ಬಗ್ಗೆ 112ಗೆ ಕರೆ ಮಾಡಿ ಮಾಹಿತಿ ನೀಡುವಂತೆ ಎಸ್ಪಿ ತಿಳಿಸಿದರು. ಕೊಡಗಿನಲ್ಲಿ ಅಪರಾಧ ಪ್ರಕರಣ ವಿವರ...ಕೊಡಗು ಜಿಲ್ಲೆಯಲ್ಲಿ ಪೊಲೀಸ್ ಇಲಾಖೆಯಲ್ಲಿ 2021ರಲ್ಲಿ 2283, 2022ರಲ್ಲಿ 2171 ಹಾಗೂ 2023ರಲ್ಲಿ 2788 ಅಪರಾಧ ಪ್ರಕರಣಗಳು ದಾಖಲಾಗಿವೆ. ಮಾದಕ ವಸ್ತು ಸಾಗಾಟ ಸಂಬAಧ 2021ರಲ್ಲಿ 17 ಪ್ರಕರಣದಲ್ಲಿ 36 ಆರೋಪಿಗಳ ಬಂಧನ ಮಾಡಲಾಗಿದೆ. 2022ರಲ್ಲಿ 21 ಪ್ರಕರಣದಲ್ಲಿ 49 ಆರೋಪಿಗಳ ಬಂಧನ ಹಾಗೂ 2023ರಲ್ಲಿ 101 ಪ್ರಕರಣಲ್ಲಿ 234 ಜನರ ಬಂಧನವಾಗಿದೆ ಎಂದು ಎಸ್ಪಿ ಕೆ. ರಾಮರಾಜನ್ ತಿಳಿಸಿದರು.