ಮಳವಳ್ಳಿ ತಾಲೂಕು ಮಾಗನೂರು- ಕೋರೆಗಾಲ ಸಮೀಪದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ ಮೆಕ್ಯಾನಿಕಲ್ ಎಂಜಿನಿಯರಿಂಗ್ ಹಾಗೂ ಸಿವಿಲ್ ಎಂಜಿನಿಯರಿಂಗ್ ಕೋರ್ಸ್ ಪ್ರಾರಂಭಗೊಳ್ಳುತ್ತಿದ್ದು, ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ದೊಡ್ಡ ಸೌಲಭ್ಯ ಸಿಕ್ಕಂತಾಗಿದೆ.
ಕನ್ನಡಪ್ರಭ ವಾರ್ತೆ ಮಳವಳ್ಳಿ
ತಾಲೂಕು ಮಾಗನೂರು- ಕೋರೆಗಾಲ ಸಮೀಪದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ ಮೆಕ್ಯಾನಿಕಲ್ ಎಂಜಿನಿಯರಿಂಗ್ ಹಾಗೂ ಸಿವಿಲ್ ಎಂಜಿನಿಯರಿಂಗ್ ಕೋರ್ಸ್ ಪ್ರಾರಂಭಗೊಳ್ಳುತ್ತಿದ್ದು, ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ದೊಡ್ಡ ಸೌಲಭ್ಯ ಸಿಕ್ಕಂತಾಗಿದೆ.ರಾಜ್ಯದ 19 ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಹೊಸ ಕೋರ್ಸ್ ತೆರೆಯಲು ಉನ್ನತ ಶಿಕ್ಷಣ ಇಲಾಖೆ ಅಧೀನ ಕಾರ್ಯದರ್ಶಿ ಪಿ.ರೂಪಾ ಆದೇಶ ಹೊರಡಿಸಿದ್ದು, ಪ್ರತಿ ಕೋರ್ಸ್ ಗೆ 60 ವಿದ್ಯಾರ್ಥಿಗಳ ದಾಖಲಾತಿಗೆ ಅನುಮತಿ ದೊರಕಿದೆ.
ಮಳವಳ್ಳಿ ತಾಲೂಕಿಗೆ ಮೊದಲ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಎನ್ನುವ ಹೆಗ್ಗಳಿಕೆ ಹೊಂದಿ 2022-23ನೇ ಸಾಲಿನಲ್ಲಿ ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಷನ್, ಕಂಪ್ಯೂಟರ್ ಸೈನ್ಸ್, ಎಲೆಕ್ಟ್ರಿಕಲ್ ಅಂಡ್ ಎಲೆಕ್ಟ್ರಾನಿಕ್ಸ್ ಎಂಬ ಮೂರು ಕೋರ್ಸ್ ಗಳಲ್ಲಿ ಪ್ರಾರಂಭಗೊಂಡಿತು. ಪ್ರತಿವರ್ಷ 450 ವಿದ್ಯಾರ್ಥಿಗಳು ಮದ್ದೂರು, ಮೈಸೂರು, ಟಿ.ನರಸೀಪುರ, ಬನ್ನೂರು ಸೇರಿದಂತೆ ಹಲವೆಡೆಯಿಂದ ಬಂದು ಪ್ರವೇಶ ಪಡೆದು ವ್ಯಾಸಂಗ ಮಾಡುತ್ತಿದ್ದಾರೆ.ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಇದ್ದರೂ ಕೂಡ ಎಂಜಿನಿಯರ್ ಪದವಿ ವ್ಯಾಸಂಗ ಮಾಡಲು ಚನ್ನಪಟ್ಟಣ, ಮೈಸೂರಿಗೆ ಹೋಗಬೇಕಾದ ಪರಿಸ್ಥಿತಿ ಇರುವುದರಿಂದ ಎಂಜಿನಿಯರಿಂಗ್ ಪ್ರಾರಂಭಿಸಲು ಗ್ರಾಮೀಣ ವಿದ್ಯಾರ್ಥಿಗಳಿಂದ ಕೂಗು ಕೇಳಿ ಬರುತ್ತಿತ್ತು. ತಾಲೂಕಿನ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅವರು 2024-25ರಲ್ಲಿ ಸರ್ಕಾರಕ್ಕೆ ಪ್ರಾಸ್ತಾವನೆ ಸಲ್ಲಿಸಿದ್ದರು. ಉನ್ನತ ಶಿಕ್ಷಣ ಇಲಾಖೆ ಶಾಸಕರ ಮನವಿಗೆ ಸ್ಪಂದಿಸಿ ಎಂಜಿನಿಯರಿಂಗ್ ಕೋರ್ಸ್ ಗೆ ಅನುಮತಿ ಸಿಕ್ಕಿದ್ದು, ವಿದ್ಯಾರ್ಥಿಗಳ ಕನಸು ನನಸಗಿದೆ.
ಹೊಸ ಕೋರ್ಸ್‌ಗೆ ಸಂಬಂಧಿಸಿದಂತೆ ಕೊಠಡಿ ನಿರ್ಮಾಣಕ್ಕೆ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅವರು ಭೂಮಿ ಪೂಜೆ ನೆರವೇರಿಸಿದ್ದು, ಕಟ್ಟಡ ಪ್ರಗತಿಯಲ್ಲಿದೆ. ಆಲ್ ಇಂಡಿಯಾ ಕೌನ್ಸಿಲ್ ಫಾರ್ ಟೆಕ್ನಿಕಲ್ ಎಜುಕೇಷನ್‌ನಿಂದ ಪರಿಶೀಲನೆ ನಡೆದು ಅಂಕಿತ ನೀಡಿದ ನಂತರ ಶೈಕ್ಷಣಿಕ ಚಟುವಟಿಕೆ ಪ್ರಾರಂಭವಾಗಲಿದೆ ಎಂದು ಪ್ರಾಂಶುಪಾಲ ಬಸವರಾಜು ಮಾಹಿತಿ ನೀಡಿದ್ದಾರೆ.ಹಳ್ಳಿಗಾಡಿನ ಹೆಚ್ಚಿನ ವಿದ್ಯಾರ್ಥಿಗಳಿಗೆ ತಾಂತ್ರಿಕ ಶಿಕ್ಷಣ ಸಿಗಬೇಕೆಂಬ ಉದ್ದೇಶ ನನ್ನದಾಗಿದ್ದು, ಮಳವಳ್ಳಿಯಲ್ಲಿ ಪಾಲಿಟೆಕ್ನಿಕ್ ಜೊತೆಗೆ ಎಂಜಿನಿಯರಿಂಗ್‌ಗೆ ಅವಕಾಶ ಮಾಡಿಕೊಡಬೇಕೆಂದು ಸರ್ಕಾರಕ್ಕೆ ಪ್ರಸ್ತಾವಣೆ ಸಲ್ಲಿಸಲಾಗಿತ್ತು. ಉನ್ನತ ಶಿಕ್ಷಣ ಇಲಾಖೆ ಮೆಕ್ಯಾನಿಕಲ್ ಎಂಜಿನಿಯರಿಂಗ್ ಹಾಗೂ ಸಿವಿಲ್ ಎಂಜಿನಿಯರಿಂಗ್ ಕೋರ್ಸ್ ಆರಂಭಕ್ಕೆ ಅನುಮತಿ ನೀಡಿದೆ. ಗ್ರಾಮೀಣ ಪ್ರತಿಭಾವಂತ ವಿದ್ಯಾರ್ಥಿಗಳು ಸಮರ್ಪಕವಾಗಿ ಬಳಸಿಕೊಳ್ಳಬೇಕು.-ಪಿ.ಎಂ ನರೇಂದ್ರಸ್ವಾಮಿ ಶಾಸಕರು, ಮಳವಳ್ಳಿ ವಿಧಾನಸಭಾ ಕ್ಷೇತ್ರ