ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ನಿಸರ್ಗ ಸೌಂದರ್ಯ ಮಾತ್ರವಲ್ಲ. ನಮ್ಮೆಲ್ಲರ ಬದುಕಿನ ವ್ಯಕ್ತಿತ್ವದ ವಿಸ್ತಾರ. ಆದರೆ ನಾವಿಂದು ಯಾಂತ್ರಿಕ ನಾಗರೀಕತೆಯಿಂದಾಗಿ ಪ್ರಕೃತಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದೇವೆ ಎಂದು ಸಂಸ್ಕೃತಿ ಚಿಂತಕ ಶಂಕರ್ ದೇವನೂರು ಕಳವಳ ವ್ಯಕ್ತಪಡಿಸಿದರು.ನಗರದ ಮಹಾರಾಣಿ ಮಹಿಳಾ ಕಲಾ ಕಾಲೇಜಿನ ಸಾಂಸ್ಕೃತಿಕ ವೇದಿಕೆ 2023-24 ಮತ್ತು ಅಸ್ತಿತ್ವ ಸಾಂಸ್ಕೃತಿಕ ವೇದಿಕೆ ಸಹಯೋಗದಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಡಾ.ಎನ್.ಕೆ. ಲೋಲಾಕ್ಷಿ ಅವರ ದೃಶ್ಯಕಾವ್ಯ ಲೋಕಾರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನಾವಿಂದು ಆರ್ಥಿಕ ಅವಿವೇಕತನ ಮತ್ತು ಯಾಂತ್ರಿಕ ನಾಗರೀಕತೆಯಲ್ಲಿ ಬದುಕುತಿದ್ದೇವೆ. ನಿಸರ್ಗವು ಸೌಂದರ್ಯ ಮಾತ್ರವಲ್ಲ. ನಮ್ಮೆಲ್ಲರ ಬದುಕಿನ ವ್ಯಕ್ತಿತ್ವದ ವಿಸ್ತಾರ. ಹುಟ್ಟುತ್ತ ಮಾನವ, ಬೆಳೆಯುತ್ತ ಸಾಧಕನಾಗಿ ಕೊನೆಯಲ್ಲಿ ಬೆಳಕಾಗಬೇಕು. ಇದು ಭಗವಂತ ಮನುಷ್ಯನಿಗೆ ಕೊಟ್ಟ ಮಹತ್ವದ ಸಂದೇಶ. ಬದುಕು ಬೆಳಕಾಗಬೇಕು. ಬದುಕು ಬಯಲಾಗಬೇಕು ಎಂದರು.ಸಂಸ್ಕಾರ ಹೋಳಿಗೆಯಂತೆ. ಹೂರಣ ಸಂಸ್ಕಾರ, ಸಂಸ್ಕೃತಿ. ಮೈದಾ ತೋರಣ- ಅದು ಹಣ, ಅಧಿಕಾರ, ಪದವಿಯ ಪ್ರತೀಕ. ತೋರಣ ಕೆಟ್ಟರೂ ಪರವಾಗಿಲ್ಲ ಹೂರಣ ಕೆಡದಂತೆ ನಾವೆಲ್ಲರೂ ಎಚ್ಚರಿವಹಿಸಬೇಕು. ಸಂಪಿಗೆ, ಮಲ್ಲಿಗೆಯ ಪರಿಮಳ ವಾತಾವರಣದಲ್ಲಿ ಸೀಮಾತೀತವಾಗಿ ಪಸರಿಸುತ್ತದೆ. ನಮ್ಮೆಲ್ಲರ ಬದಕು ಹೂವಿನಂತಾಗಬೇಕು. ಇದೇ ಜೀವನದ ಸಂಸ್ಕಾರ ಮತ್ತು ಸಂಸ್ಕೃತಿ ಎಂದು ಅವರು ತಿಳಿಸಿದರು.
ನಿಸರ್ಗದ ಮಹತ್ವ ಅರಿಯಲು ಜನ ವಿಫಲರಾಗಿದ್ದಾರೆ. ಸಂತರು, ಶರಣರು ತಮ್ಮ ಬದುಕನ್ನು ನಿಸರ್ಗದೊಂದಿಗೆ ಏಕೀಕರಿಸಿಕೊಂಡಿದ್ದರು. ಇಂದು ನಮ್ಮ ಬದುಕು ಪ್ರಕೃತಿ ವಿರುದ್ಧವಾಗಿದೆ. ಕಾಡು-ಮೇಡು, ವನ್ಯಪ್ರಾಣಿ ಇರುವ ತನಕ ಈ ಭೂಮಿ ಮನುಷ್ಯನಿಗೆ ಆಶ್ರಯ ನೀಡಬಲ್ಲದು. ಈ ಮಾತನ್ನು ಈ ಹಿಂದೆಯೇ ನಮ್ಮ ಪೂರ್ವಿಕರು ಅರಿತಿದ್ದಾಗಿ ಅವರು ಹೇಳಿದರು.ಯಾಂತ್ರೀಕರಣ ಮತ್ತು ಅಭಿವೃದ್ಧಿಶೀಲತೆಯ ಹೆಸರಿನಲ್ಲಿ ನಿಸರ್ಗ- ವ್ಯಕ್ತಿಯ ನಡುವಿನ ಕರುಳ ಬಳ್ಳಿ ಸಂಬಂಧವನ್ನು ಕಡಿದುಕೊಳ್ಳುವ ದುಸ್ಥಿತಿ ಎದುರಾಗಿದೆ. ನೆಲ, ನೆಲೆಯ ಬಗ್ಗೆ ಅಭಿಮಾನ ಇರಿಸಿಕೊಳ್ಳಬೇಕು. ಅಭಿಮಾನ ಅಂದ್ರೆ ಅಹಂಕಾರ ಅಲ್ಲ. ನೆಲದೊಂದಿಗೆ ತಾದ್ಯಾತ. ಇದೊಂದು ಮೌಲ್ಯ. ಪ್ರತಿಯೊಬ್ಬರೂ ನನ್ನ ನೆಲೆ, ಜಲ ಪರಂಪರೆಯನ್ನು ತಮ ಹೃದಯದಲ್ಲಿ ಸ್ಥಾಪಿಸಿಕೊಳ್ಳಬೇಕು ಎಂದು ಅವರು ಕಿವಿಮಾತು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ಬಿ.ವಿ. ವಸಂತಕುಮಾರ್ ನಟಿ ಅಖಿಲಾ ತಾಂಡೂರು ದೃಶ್ಯಕಾವ್ಯ ಲೋಕಾರ್ಪಣೆಗೊಳಿಸಿದರು. ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ ಕಚೇರಿ ಪೊಲೀಸ್ ಅಧೀಕ್ಷಕಿ ಡಾ.ಬಿ.ಟಿ. ಕವಿತಾ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಡಾ.ಎನ್.ಕೆ. ಲೋಲಾಕ್ಷಿ ವಿಶೇಷ ಉಪನ್ಯಾಸ ನೀಡಿದರು. ಸಾಂಸ್ಕೃತಿಕ ವೇದಿಕೆ ಅಧ್ಯಾಪಕ ಕಾರ್ಯದರ್ಶಿ ಎಂ. ನಂಜುಂಡಯ್ಯ, ಖಜಾಂಚಿ ಅಶ್ವಿನಿ, ಸಾಂಸ್ಕೃತಿಕ ವೇದಿಕೆಯ ವಿದ್ಯಾರ್ಥಿ ಅಧ್ಯಕ್ಷೆ ರಕ್ಷಿತಾ, ಕಾರ್ಯದರ್ಶಿ ಜೆ.ಎಸ್. ಜೇನುಶ್ರೀ, ಗಾಯಕ ಅಮ್ಮ ರಾಮಚಂದ್ರ ಇದ್ದರು.