ಮಾಧ್ಯಮ ಪ್ರತಿನಿಧಿಗಳ ಸಂಘ ಉದ್ಘಾಟನೆ

| Published : Jul 21 2025, 01:30 AM IST

ಸಾರಾಂಶ

ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗಗಳಿಗೆ ಎಷ್ಟು ಮಹತ್ವ ನೀಡುತ್ತಿವೆಯೋ ಅದೇ ರೀತಿ ಪತ್ರಿಕಾರಂಗಕ್ಕೂ ಸಮಾಜದಲ್ಲಿ ಅಷ್ಟೇ ಗೌರವವನ್ನು ನೀಡಿದ್ದಾರೆ.

ಸಿದ್ದಾಪುರ: ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗಗಳಿಗೆ ಎಷ್ಟು ಮಹತ್ವ ನೀಡುತ್ತಿವೆಯೋ ಅದೇ ರೀತಿ ಪತ್ರಿಕಾರಂಗಕ್ಕೂ ಸಮಾಜದಲ್ಲಿ ಅಷ್ಟೇ ಗೌರವವನ್ನು ನೀಡಿದ್ದಾರೆ. ಈ ಮೂರೂ ಅಂಗಗಳಲ್ಲಿ ಏನಾದರೂ ವ್ಯತ್ಯಾಸಗಳಾದಲ್ಲಿ ಸರಿಯಾದ ದಿಕ್ಕನ್ನು ತೋರಿಸುವ ಜವಾಬ್ದಾರಿ ಪತ್ರಿಕೆಯ ಮೇಲಿದೆ ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು.

ನೂತನವಾಗಿ ಅಸ್ತಿತ್ವಕ್ಕೆ ಬಂದ ಮಾಧ್ಯಮ ಪ್ರತಿನಿಧಿಗಳ ಸಂಘದ ಉದ್ಘಾಟಿಸಿ, ಮಾಧ್ಯಮ ದಿನಾಚರಣೆ ಕಾರ್ಯಕ್ರಮದಲ್ಲಿ ಸಾಧಕರನ್ನು ಸನ್ಮಾನಿಸಿ ಅವರು ಮಾತನಾಡಿದರು.

ಇಂದು ಕೆಲವು ಪತ್ರಕರ್ತರು ತಮ್ಮ ಸ್ವಾರ್ಥಕ್ಕಾಗಿ, ದ್ವೇಷಕ್ಕಾಗಿ ಅಥವಾ ಯಾವುದೋ ಕಾರಣಕ್ಕಾಗಿ ಒಬ್ಬ ವ್ಯಕ್ತಿಯ ಪರವಾಗಿ ಬರೆದು ಮತ್ತೊಬ್ಬ ವ್ಯಕ್ತಿಯ ವಿರುದ್ಧವಾಗಿ ಬರೆಯುವ ಪ್ರವೃತ್ತಿ ಬೆಳೆಸಿಕೊಂಡಿದ್ದಾರೆ. ಇದು ಒಬ್ಬ ಪತ್ರಕರ್ತನಿಂದ ಆಗಬಾರದು. ಪತ್ರಕರ್ತನಿಗೆ ಸರಿಯಾದ ಆಳವಾದ ಅಧ್ಯಯನ ಇಲ್ಲದಿದ್ದಾಗ ಇಂತಹ ತಪ್ಪುಗಳು ಆಗುತ್ತವೆ. ಒಬ್ಬ ಪತ್ರಕರ್ತ ಆಚಾರ ವಿಚಾರಗಳಿಂದ ಹೆಜ್ಜೆ ಇಟ್ಟಾಗ ಮಾತ್ರ ಪತ್ರಿಕಾರಂಗವು ಸರಿಯಾದ ಹಾದಿಯಲ್ಲಿ ನಡೆಯುತ್ತದೆ. ಪತ್ರಿಕೋದ್ಯಮದಿಂದ ಸಮಾಜಕ್ಕೆ ನ್ಯಾಯವನ್ನು ಕೊಡುವ ಕೆಲಸವಾಗಬೇಕು ಹೊರತು ಒಬ್ಬ ವ್ಯಕ್ತಿಯ ತೇಜೋವಧೆ ಮಾಡುವ ಕೆಲಸ ಆಗಬಾರದು ಎಂದರು.

ಮಾಧ್ಯಮ ಪ್ರತಿನಿಧಿಗಳ ಸಂಘದ ಅಧ್ಯಕ್ಷ ಕನ್ನೇಶ್ ಕೋಲಸಿರ್ಸಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಲಾವಿದ ಚಂದ್ರಶೇಖರ ಸಿರಿವಂತೆ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯಕ್ಷಗಾನ ಭಾಗವತ ಕೊಳಗಿ ಕೇಶವ ಹೆಗಡೆ, ಶಿರಸಿಯ ಲಾ ಚೇಬರ್‌ನ ತೆರಿಗೆ ಸಲಹೆಗಾರ ನರೇಂದ್ರ ಹಿರೇಕೈ ಅವರನ್ನು ಸನ್ಮಾನಿಸಲಾಯಿತು.

ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಕೆ.ಜಿ. ನಾಗರಾಜ, ತಾಲೂಕು ಕಸಾಪ ಅಧ್ಯಕ್ಷ ಚಂದ್ರಶೇಖರ್ ನಾಯ್ಕ ಕುಂಬ್ರಿಗದ್ದೆ ಮಾತನಾಡಿದರು. ಸಂಘದ ಕಾರ್ಯದರ್ಶಿ ಯಶವಂತ ನಾಯ್ಕ ಉಪಸ್ಥಿತರಿದ್ದರು. ನಾಗರಾಜ ನಾಯ್ಕ ಮಾಳ್ಕೋಡ ಸ್ವಾಗತಿಸಿದರು. ಗೋಪಾಲ ಕಾನಳ್ಳಿ ನಿರೂಪಿಸಿದರು. ನಾಗರಾಜ್ ಶೇಟ, ಗಣೇಶ್ ಮೇಸ್ತ, ಟಿಕೆಎಂ ಆಜಾದ ಸನ್ಮಾನಿತರನ್ನು ಪರಿಚಯಿಸಿದರು. ದಿವಾಕರ್ ಸಂಪಖಂಡ ವಂದಿಸಿದರು.