ಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ನಡೆದ ಎಐ ಕೃತಕ ಬುದ್ಧಿಮತ್ತೆ, ನೂತನ ತಂತ್ರಜ್ಞಾನಗಳ ಬಳಕೆ ಕುರಿತ 2ದಿನಗಳ ಶಿಬಿರ
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರುಬಡವರ ಕಷ್ಟ, ಸಮಸ್ಯೆಗಳನ್ನು ಸಮಾಜದ ಮತ್ತು ಸರ್ಕಾರದ ಗಮನಕ್ಕೆ ತರುವ ಕೆಲಸವನ್ನು ಮಾಧ್ಯಮಗಳು ಮಾಡಬೇಕು ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು.
ಹೊನ್ನ ಬಿತ್ತೇವು ಹೊಲಕೆಲ್ಲ ವತಿಯಿಂದ ಶನಿವಾರ ನಗರದ ಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಆಯೋಜಿಸಿರುವ ಎಐ ಕೃತಕ ಬುದ್ಧಿಮತ್ತೆ ಹಾಗೂ ನೂತನ ತಂತ್ರಜ್ಞಾನಗಳ ಬಳಕೆ ಕುರಿತ ಎರಡು ದಿನಗಳ ತರಬೇತಿ ಶಿಬಿರಕ್ಕೆ ಶನಿವಾರ ಚಾಲನೆ ನೀಡಿ ಮಾತನಾಡಿದ ಅವರು, ಹೊಸ ಹೊಸ ಆವಿಷ್ಕಾರಗಳು, ತಂತ್ರಜ್ಞಾನಗಳಿಂದ ಮಾಧ್ಯಮ ಕ್ಷೇತ್ರ ಅತಿ ಕಡಿಮೆ ಸಮಯದಲ್ಲಿ ಬಹಳಷ್ಟು ವೇಗವಾಗಿ ಬೆಳೆದಿದೆ. ಸುದ್ದಿಗಳನ್ನು ಜನರಿಗೆ ಶೀಘ್ರ ತಲುಪಿಸಲು ಮಾಧ್ಯಮಗಳು ಕಾರ್ಯ ನಿರ್ವಹಿಸುತ್ತಿವೆಯಾದರೂ ದೃಶ್ಯ ಮಾಧ್ಯಮಗಳಲ್ಲಿ ಕೆಲವೊಮ್ಮೆ ಸುಳ್ಳು ಸುದ್ದಿಗಳು ಬಿತ್ತರವಾಗುತ್ತಿರುವ ಬಗ್ಗೆ ಕೆಲವರಲ್ಲಿ ಅಸಮಾಧಾನವಿದೆ ಎಂದರು. ಶೀಘ್ರವಾಗಿ ಸುದ್ದಿ ನೀಡುವ ಭರದಲ್ಲಿ ದೃಶ್ಯ ಮಾಧ್ಯಮ ಇಂತಹುದು ಮಾಡಬಾರದು. ಅಪಘಾತ, ಅವಘಡಗಳು ನಡೆದ ಸಂದರ್ಭದಲ್ಲಿ ದೃಶ್ಯ ಮಾಧ್ಯಮಗಳ ವರದಿಗಾರರು ವಿಡಿಯೋ ಚಿತ್ರೀಕಣ ಬಿಟ್ಟು ಜೀವ ಉಳಿಸಲು ಮುಂದಾಗಬೇಕು ಎಂದ ಅವರು ಸರ್ಕಾರ, ಜನಪ್ರತಿನಿಧಿ, ಅಧಿಕಾರಿಗಳ ತಪ್ಪನ್ನು ತೋರಿಸಿ ಎಚ್ಚರಿಸುವ ಕೆಲಸ ಮಾಧ್ಯಮಗಳು ಮಾಡಬೇಕು ಎಂದು ಹೇಳಿದರು.ಕೆಪಿಸಿಸಿ ವಕ್ತಾರ ಎಚ್.ಎಚ್. ದೇವರಾಜ್ ಮಾತನಾಡಿ, ವಿದ್ಯಾರ್ಥಿಗಳು ಮತ್ತು ಯುವಜನ ಮೊಬೈಲ್‌ನಿಂದ ಸಾಧ್ಯವಾದಷ್ಟು ದೂರವಿರಿ. ಮೊಬೈಲೇ ಜೀವನವಲ್ಲ, ಅದಿಲ್ಲದಿದ್ದರೂ ಬದುಕು ನಡೆಯುತ್ತದೆ. ಮೊಬೈಲನ್ನು ಮಿತವಾಗಿ ಬಳಸಿ ಎಂದು ಸಲಹೆ ಮಾಡಿದರು.ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್.ದೇವರಾಜ್ ಶೆಟ್ಟಿ ಮಾತನಾಡಿ, ನೂತನ ತಂತ್ರಜ್ಞಾನವನ್ನು ಯುವಜನತೆ ಸದುಪಯೋಗ ಪಡಿಸಿ ಕೊಳ್ಳಬೇಕು, ಸಮಾಜಕ್ಕೆ, ದೇಶಕ್ಕೆ ಒಳಿತಾಗುವ ರೀತಿ ತಂತ್ರಜ್ಞಾನ ಬಳಕೆ ಮಾಡ ಎಂದು ಮನವಿ ಮಾಡಿದರು.ಸಿಪಿಐ ಕಾರ್ಯದರ್ಶಿ ಜಿ.ರಘು ಮಾತನಾಡಿ ಮೊಬೈಲ್ ಸೇರಿದಂತೆಎಲ್ಲಾ ತಂತ್ರಜ್ಞಾನ ಒಳ್ಳೆಯದಕ್ಕೆ ಮಾತ್ರ ಬಳಕೆ ಯಾಗಬೇಕು ಎಂದರು.
ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ರಾಜ್ಯಾಧ್ಯಕ್ಷ ಎನ್.ರಾಜು ಮಾತನಾಡಿ, ತಂತ್ರಜ್ಞಾನವನ್ನು ಸಮಾಜ, ದೇಶದ ಒಳಿತಿಗೆ ಬಳಸಿ, ಯುವಜನತೆ ಈ ಶಿಬಿರದಲ್ಲಿ ನೂತನ ತಂತ್ರಜ್ಞಾನಗಳ ಅರಿವು ಪಡೆಯಬೇಕು ಎಂದು ಮನವಿ ಮಾಡಿದರು.
ರೈತ ಸಂಘದ ಮುಖಂಡ ಗುರುಶಾಂತಪ್ಪ ಮಾತನಾಡಿದರು. ಐಐಪಿ ಸಂಸ್ಥಾಪಕ ನಂಜೇಶ್ ಬೆಣ್ಣೂರು ‘ಎ.ಐ.ಕೃತಕ ಬುದ್ಧಿಮತ್ತೆ ಯಿಂದ ಉದ್ಯೋಗ ಕಡಿತದ ಸಾಧಕ ಬಾಧಕ ಮತ್ತು ಪರಿಹಾರೋಪಾಯಗಳ ಕುರಿತು ಉಪನ್ಯಾಸ ನೀಡಿದರು.
ಜೆನ್.ಜಿ ಹೊಸ ತಲೆಮಾರಿನ ಪಲ್ಲಟಗಳು, ಅಂತರ್ಜಾಲದ ದುರುಪಯೋಗ, ಪರಿಹಾರ ಕುರಿತು ಹಾಸನ ನವ್ಕಿನ್ ಎಂಜಿನಿಯ ರಿಂಗ್ ಕಾಲೇಜಿನ ಎಐ ವಿಭಾಗದ ಮುಖ್ಯಸ್ಥ ಪ್ರೊ ವಿವೇಕಾನಂದ ಹಾಗೂ ದೈನಂದಿನ ಬದುಕಿನಲ್ಲಿ ಎಐ ತಂತ್ರಜ್ಞಾನ ಬಳಕೆ ಕುರಿತು ನಂಜೇಶ್ ಬೆಣ್ಣೂರು ಉಪನ್ಯಾಸ ನೀಡಿದರು.ಸಾಹಿತಿ ಡಿ.ಎಂ.ಮಂಜುನಾಥ ಸ್ವಾಮಿ, ಪಿಳ್ಳೆನಹಳ್ಳಿ ವಿಜಯಕುಮಾರ್. ಜೆಡಿಎಸ್ ಮುಖಂಡ ಎಚ್.ಎಸ್.ಮಂಜಪ್ಪ, ನಟರಾಜ್ ಎಸ್.ಕೊಪ್ಪಲು ಉಪಸ್ಥಿತರಿದ್ದರು.
ಫೋಟೋ--ನಗರದ ಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ನಡೆದ ಎಐ ಕೃತಕ ಬುದ್ಧಿಮತ್ತೆ ಕುರಿತ ಎರಡು ದಿನಗಳ ತರಬೇತಿ ಶಿಬಿರಕ್ಕೆ ಶಾಸಕ ಎಚ್,ಡಿ.ತಮ್ಮಯ್ಯ ಶನಿವಾರ ಚಾಲನೆ ನೀಡಿದರು.ಕೆಪಿಸಿಸಿ ವಕ್ತಾರ ಎಚ್.ಎಚ್. ದೇವರಾಜ್, ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್. ದೇವರಾಜ್ ಶೆಟ್ಟಿ, ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ರಾಜ್ಯಾಧ್ಯಕ್ಷ ರಾಜು, ಸಾಹಿತಿ ಡಿ.ಎಂ.ಮಂಜುನಾಥ ಸ್ವಾಮಿ, ಪಿಳ್ಳೆನಹಳ್ಳಿ ವಿಜಯಕುಮಾರ್.ಜೆಡಿಎಸ್ ಮುಖಂಡ ಎಚ್.ಎಸ್.ಮಂಜಪ್ಪ, ನಟರಾಜ್ ಎಸ್.ಕೊಪ್ಪಲು ಇದ್ದರು.