ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರುಭ್ರೂಣಶಾಸ್ತ್ರ ಮತ್ತು ನೆರವಿನ ಸಂತಾನೋತ್ಪತ್ತಿಯಂತಹ ಹೊಸ ತಂತ್ರಜ್ಞಾನಗಳು ಹೆಚ್ಚಿನ ಪ್ರಮಾಣದಲ್ಲಿ ವಿಕಸನಗೊಳ್ಳಬೇಕಾಗಿದೆ ಎಂದು ಮೈಸೂರು ವಿವಿ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್ಹೇಳಿದರು.ಏಷ್ಯಾ ಫೆಸಿಪಿಕ್ ಭ್ರೂಣಶಾಸ್ತ್ರ ಸಂಸ್ಥೆ ಹಾಗೂ ಮೈಸೂರು ವಿವಿ ಸಹಯೋಗದಲ್ಲಿ ಶನಿವಾರ ಏರ್ಪಡಿಸಿದ್ದ ‘ ಸಂತಾನೋತ್ಪತಿ ನೆರವಿಗಾಗಿ ನಾವೀನ್ಯತೆ ಮತ್ತು ಮುಂದುವರೆದ ತಂತ್ರಜ್ಞಾನ’ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.ಇದು ಕೇವಲ ವೈದ್ಯಕೀಯ ಪ್ರಗತಿಗಾಗಿ ಮಾತ್ರವಲ್ಲದೆ, ಸಮಾಜ ಎದುರಿಸುತ್ತಿರುವ ಸವಾಲು ಪರಿಹಾರಕ್ಕೆ ಅಗತ್ಯವಾಗಿ ಬೇಕಿದೆ. ಶತಮಾನೋತ್ಸವ ತುಂಬಿದ ಮೈಸೂರು ವಿವಿಯು ವೈಜ್ಞಾನಿಕ ಸಂಶೋಧನೆ ಹಾಗೂ ಪ್ರಗತಿಗಳು ಮತ್ತು ನಾವೀನ್ಯ ಶಿಕ್ಷಣ ಬೆಳವಣಿಗೆಯನ್ನು ಬೆಂಬಲಿಸಲು ಸಂಪೂರ್ಣವಾಗಿ ಬದ್ಧವಾಗಿದೆ ಎಂದರು.ಇತ್ತೀಚೆಗೆ ಗರ್ಭಧಾರಣೆಯ ಫಲವತ್ತತೆಯ ದರ ಕ್ಷೀಣಿಸುತ್ತಿರುವುದು ಸಾಮಾಜಿಕ ಸವಾಲಾಗಿ ಪರಿಣಮಿಸಿದೆ. ಆದ್ದರಿಂದ ಭ್ರೂಣಶಾಸ್ತ್ರ ಮತ್ತು ನೆರವಿನ ಸಂತಾನೋತ್ಪತ್ತಿಯಂತಹ ಹೊಸ ತಂತ್ರಜ್ಞಾನ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ವಿಕಸನಗೊಳ್ಳಬೇಕು ಎಂದರು.ಎಎಸ್ಪಿಐಇಆರ್ ನಲ್ಲಿ ಅನುಷ್ಠಾನಗೊಳಿಸಿರುವ ಎಂಎಸ್ಸಿ ಪದವಿಯು ದೇಶದ ಪ್ರಮುಖ ಸ್ನಾತಕೋತ್ತರ ಪದವಿಯಲ್ಲಿ ಒಂದು ಎಂಬ ಖ್ಯಾತಿ ಗಳಿಸಿದೆ. ಇದು ಸಣ್ಣ ಸಾಧನೆಯಲ್ಲ.ಈ ವಿಷಯವು ಶೈಕ್ಷಣಿಕ ಜ್ಞಾನವನ್ನು ಮಾತ್ರವಲ್ಲದೆ ಫಲವತ್ತತೆ ಕ್ಲಿನಿಕ್ ಗಳನ್ನು, ಐವಿಎಫ್ ಪ್ರಯೋಗಾಲಯಗಳು ಮತ್ತು ಇತರ ಸಂತಾನೋತ್ಪತ್ತಿ ಔಷಧ ಕ್ಷೇತ್ರಗಳಲ್ಲಿ ಅಭಿವೃದ್ಧಿ ಹೊಂದಲು ಅಗತ್ಯ ಪ್ರಾಯೋಗಿಕ ಕೌಶಲಗಳೊಂದಿಗೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುತ್ತದೆ. ಪದವಿ ಮುಗಿಸಿ ವಿಶ್ವವಿದ್ಯಾನಿಲಯದಿಂದ ಹೊರಬರುವ ಭ್ರೂಣಶಾಸ್ತ್ರಜ್ಞರು ಐವಿಎಫ್ ಚಿಕಿತ್ಸೆಗೆ ಮೂಲಾಧಾರವಾಗುತ್ತಾರೆ. ಅಲ್ಲದೆ ಬಂಜೆತನದಿಂದ ಬಳಲುತ್ತಿರುವ ದಂಪತಿಗಳಲ್ಲಿ ಸಂತಾನೋತ್ಪತಿ ಫಲವತ್ತತೆ ಉಂಟಾಗಲು ವೈದ್ಯಕೀಯ ಸಹಾಯ ಮಾಡುತ್ತಾರೆ. ಈ ಪಯಾಣದಲ್ಲಿ ಮೈಸೂರು ವಿಶ್ವವಿದ್ಯಾನಿಲಯವು ಪಾಲುದಾರರಾಗಿದ್ದು, ಹೊಸ ದೃಷ್ಟಿಕೋನವನ್ನು ಬೆಂಬಲಿಸುತ್ತದೆ ಎಂದು ಅವರು ಹೇಳಿದರು.ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಪುರಷರಷ್ಟೇ ಅಲ್ಲ ಮಹಿಳೆಯರೂ ಕೂಡಾ ಹಲವು ಜವಾಬ್ದಾರಿ ನಿರ್ವಹಿಸುವ ಕಾರಣದಿಂದ ಹಾಗೂ ಕೆಲಸಗಳ ಒತ್ತಡದಿಂದಾಗಿ ಮದುವೆಯಾದ ಎಷ್ಟೋ ವರ್ಷಗಳ ಬಳಿಕ ಮಕ್ಕಳು ಆಗಬೇಕು ಎನ್ನುವ ಧ್ಯೇಯ ಇಟ್ಟುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಸಂತಾನೋತ್ಪತ್ತಿಗೆ ಅಗತ್ಯವಾದ ವಯಸ್ಸು ಮೀರಿ ಹೋಗುತ್ತದೆ. ಇದರ ಜೊತೆಗೆ ಒತ್ತಡದ ಜೀವನದಿಂದ ದೈಹಿಕ ಮತ್ತು ಮಾನಸಿಕ ಆಯಾಸವು ಇರುತ್ತದೆ. ಇದರಿಂದಾಗಿ ಫಲವತ್ತತೆಯೂ ಕ್ಷೀಣಿಸುತ್ತದೆ ಎಂದರು.ಆದ್ದರಿಂದ ಭ್ರೂಣಶಾಸ್ತ್ರದಂತಹ ನೂತನ ವಿಷಯಗಳು ಇಂತಹ ವಿಷಯದ ಕಡೆ ಹೆಚ್ಚು ಗಮನಹರಿಸಿ, ಸಮಸ್ಯೆ ಪರಿಹಾರಿಸಲು ಸಮಾಜಮುಖಿ ಸಂಶೋಧನೆ ಕೈಗೊಳ್ಳಬೇಕು. ಹೊಸ ತಂತ್ರಜ್ಞಾನಗಳಿಂದ ಜನರಿಗೆ ಅನುಕೂಲ ಮಾಡಿಕೊಡಬೇಕು ಎಂದರು.ಮೈವಿವಿ ಕುಲಸಚಿವ ನಾಗರಾಜು, ಭ್ರೂಣಶಾಸ್ತ್ರಜ್ಞ ಡಾ. ಗೋಪಾಲ್, ಎಎಸ್ಪಿಐಇಆರ್ ಮುಖ್ಯಸ್ಥ ಡಾ. ಸುರೇಶ್ ಕಟ್ಟೇರ ಇದ್ದರು.