ಗ್ರಾಮೀಣ ಭಾಗದಲ್ಲಿ ವೈದ್ಯಕೀಯ ಸೇವೆ ಶೋಚನೀಯ: ಬಸವರಾಜ ರಾಯರಡ್ಡಿ

| Published : Aug 31 2024, 01:36 AM IST

ಸಾರಾಂಶ

ಪ್ರತಿ ಸಾವಿರ ಜನಸಂಖ್ಯೆಗೆ ಓರ್ವ ವೈದ್ಯನಿರಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆಯಾದರೂ ಗ್ರಾಮೀಣ ಪ್ರದೇಶದಲ್ಲಿ ಇನ್ನೂ ಅಂತಹ ಸೇವೆ ದೊರೆಯುತ್ತಿಲ್ಲ ಎಂದು ಬಸವರಾಜ ರಾಯರಡ್ಡಿ ಹೇಳಿದರು.

ಕೊಪ್ಪಳ: ದೇಶದಲ್ಲಿ ಈಗಲೂ ಗ್ರಾಮೀಣ ಪ್ರದೇಶದಲ್ಲಿ ವೈದ್ಯಕೀಯ ಸೇವೆ ಶೋಚನೀಯವಾಗಿದ್ದು, ಇದು ಅತ್ಯಂತ ಕಳವಳಕಾರಿ ಎಂದು ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿದ್ದಾರೆ.

ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಮಹಾವೀರ ಭವನದಲ್ಲಿ ಆಯೋಜಿಸಿದ್ದ ಯುವ ರೆಡ್ ಕ್ರಾಸ್ ಕಲಬುರಗಿ ವಿಭಾಗಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಪ್ರತಿ ಸಾವಿರ ಜನಸಂಖ್ಯೆಗೆ ಓರ್ವ ವೈದ್ಯನಿರಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆಯಾದರೂ ಗ್ರಾಮೀಣ ಪ್ರದೇಶದಲ್ಲಿ ಇನ್ನೂ ಅಂತಹ ಸೇವೆ ದೊರೆಯುತ್ತಿಲ್ಲ ಎಂದರು.

ಸಾರ್ವಜನಿಕ ಹಣದಲ್ಲಿ ಶಿಕ್ಷಣ ಪಡೆದವರೂ ದೇಶದಲ್ಲಿಯೇ ಸೇವೆ ಮಾಡುವ ಬದಲು ವಿದೇಶಕ್ಕೆ ಹೋಗಿ ಸೇವೆ ಮಾಡುತ್ತಾರೆ. ಇದು ಅತ್ಯಂತ ನೋವಿನ ಸಂಗತಿಯಾಗಿದೆ ಎಂದರು.

ಗ್ರಾಮೀಣ ಪ್ರದೇಶದಲ್ಲಿ ಆರೋಗ್ಯ ಕ್ಷೇತ್ರದ ಸುಧಾರಣೆಯಾಗಬೇಕಾಗಿದೆ. ಗ್ರಾಮೀಣ ಪ್ರದೇಶದಲ್ಲಿ ವೈದ್ಯರ ಸೇವೆ ಕಡ್ಡಾಯ ಮಾಡಿ, ಸರ್ಕಾರ ಆದೇಶ ಮಾಡಿದರೂ ಅದಕ್ಕ ತಡೆಯಾಜ್ಞೆ ತರಲಾಯಿತು. ಹೀಗಾಗಿಯೇ, ಇಂದಿಗೂ ಗ್ರಾಮೀಣ ಪ್ರದೇಶದಲ್ಲಿ ನಿರೀಕ್ಷಿತ ಮಟ್ಟದ ವೈದ್ಯಕೀಯ ಸೇವೆ ಇಲ್ಲವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಹಣ ಮಾಡುವುದಕ್ಕಾಗಿ ವಿದೇಶಕ್ಕೆ ಹೋಗುತ್ತಿದ್ದಾರೆ. ಆದರೆ, ಅವರೇ ಗ್ರಾಮೀಣ ಪ್ರದೇಶದಲ್ಲಿ ಸೇವೆ ಮಾಡುವ ಮನೋಭಾವ ಬೆಳೆಸಿಕೊಳ್ಳುವ ಅಗತ್ಯವಿದೆ ಎಂದರು.

ಕೊಪ್ಪಳ ಜಿಲ್ಲೆಯಲ್ಲಿ ರೆಡ್‌ಕ್ರಾಸ್‌ ಕಳೆದ 10 ವರ್ಷದಿಂದ ಮಾನವೀಯ ಸೇವೆ ಮಾಡುತ್ತ ಬಂದಿದೆ. ಈ ಸಂಸ್ಥೆ 10871 ರಕ್ತದಾನ ಶಿಬಿರ ಮಾಡಿ ಗಮನ ಸೆಳೆದಿದೆ ಎಂದರು.

ರೆಡ್ ಕ್ರಾಸ್ ಸಂಸ್ಥೆಗೆ ನೆರವು

ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕೊಪ್ಪಳದಲ್ಲಿ ಅತ್ಯುತ್ತಮ ಕಾರ್ಯ ಮಾಡುತ್ತಿದೆ. ಈಗಾಗಲೇ ನಿರ್ಮಾಣ ಹಂತದಲ್ಲಿರುವ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಕಟ್ಟಡಕ್ಕೆ ಅನುದಾನ ಅವಶ್ಯಕತೆ ಇದ್ದು, ಕೆಕೆಆರ್‌ಡಿಬಿಯ ಮೂಲಕ ಹದಿನೈದು ದಿನಗಳಲ್ಲಿ ನೀಡಲಾಗುವುದು ಎಂದರು.

ಅಂಗಾಂಗ ಬ್ಯಾಂಕ್ ಸೇರಿದಂತೆ ಅನೇಕ ಆರೋಗ್ಯ ಸೇವಾ ಯೋಜನೆಗಳನ್ನು ಹಾಕಿಕೊಂಡಿರುವುದರಿಂದ ಇದಕ್ಕೆ ಸಹಕಾರ ನೀಡಲಾಗುವುದು ಎಂದರು.

ಶಾಸಕ ರಾಘವೇಂದ್ರ ಹಿಟ್ನಾಳ ಮಾತನಾಡಿ, ಕೊಪ್ಪಳ ಜಿಲ್ಲೆಯಲ್ಲಿ ಕಳೆದ 10 ವರ್ಷದಲ್ಲಿ ರೆಡ್ ಕ್ರಾಸ್ ಸಂಸ್ಥೆ ರಕ್ತ ಕೇಂದ್ರ ಆರಂಭಿಸಿ, ಈ ಭಾಗದ ಜನರಿಗೆ ತುಂಬ ಆಸರೆಯಾಗಿದೆ. ಹಿಂದೆ, ನಮ್ಮ ಜಿಲ್ಲೆ ಜನ ಸಣ್ಣ ಪುಟ್ಟ ರೋಗಕ್ಕೂ ಬೇರೆ ಊರಿಗೆ ಹೋಗುವ ಸ್ಥಿತಿ ಇತ್ತು. ಆದರೆ, ರೆಡ್‌ ಕ್ರಾಸ್‌ ಸಂಸ್ಥೆಯ ಬ್ಲಡ್ ಬ್ಯಾಂಕ್ ಆರಂಭದ ಬಳಿಕ ಜನರಿಗೆ ಬಹು ದೊಡ್ಡ ಆಸರೆಯಾಗಿದೆ. ಬ್ಲಡ್ ಬ್ಯಾಂಕ್ ಕಟ್ಟಡ ಆರಂಭಕ್ಕೆ ಶಕ್ತಿ ಬಂದಿದೆ. ನಮ್ಮ ಸರ್ಕಾರ ಬ್ಲಡ್ ಬ್ಯಾಂಕ್ ಕಟ್ಟಡಕ್ಕೆ ಆರ್ಥಿಕ ನೆರವು ನೀಡಲಿದೆ ಎಂದರು.

ಕೊಪ್ಪಳದಲ್ಲಿ 450 ಬೆಡ್ ಆಸ್ಪತ್ರೆಯ ಕಟ್ಟಡ ಪೂರ್ಣಗೊಂಡಿದೆ. ಶೀಘ್ರವಾಗಿ ಆ ಕಟ್ಟಡ ಲೋಕಾರ್ಪಣೆ ಮಾಡಲಿದ್ದೇವೆ. ಮುಂದಿನ ದಿನಗಳಲ್ಲಿ ಜಿಲ್ಲೆಗೆ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆ ಆರಂಭಕ್ಕೆ ಒತ್ತು ನೀಡಲಿದ್ದೇವೆ. ಮುಂದೆಯೂ ಈ ಸಂಸ್ಥೆಗೆ ಸಹಕಾರ ನೀಡಲಿದ್ದೇವೆ ಎಂದರು.

ಪ್ರಾಸ್ತಾವಿಕವಾಗಿ ಡಾ. ಶ್ರೀನಿವಾಸ ಹ್ಯಾಟಿ ಮಾತನಾಡಿ, ಭಾರತೀಯ ರೆಡ್ ಕ್ರಾಸ್ ಏಳು ತತ್ವಗಳೊಂದಿಗೆ ವಿಶ್ವದಲ್ಲಿ ಕೆಲಸ ಮಾಡುತ್ತಿದೆ. ಇದೊಂದು ವಿಭಾಗ ಮಟ್ಟದ ಕಾರ್ಯಾಗಾರ. ಏಳು ಜಿಲ್ಲೆಗಳ ವಿದ್ಯಾರ್ಥಿಗಳು ಆಗಮಿಸಿದ್ದು, ಇಲ್ಲಿ ಸಂಪನ್ಮೂಲ ವ್ಯಕ್ತಿಗಳು ಸಮಗ್ರ ಮಾಹಿತಿ ನೀಡಲಿದ್ದಾರೆ ಎಂದರು.

ರೆಡ್ ಕ್ರಾಸ್ ಸಂಸ್ಥೆಯ ಕೊಪ್ಪಳ ಜಿಲ್ಲಾ ಶಾಖೆ ಸಭಾಪತಿ ಸೋಮರಡ್ಡಿ ಅಳವಂಡಿ ಅಧ್ಯಕ್ಷತೆ ವಹಿಸಿದ್ದರು. ಡಿಸಿ ನಲಿನ್ ಅತುಲ್, ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್, ಡಾ. ಪ್ರಕಾಶ, ಡಾ. ಗವಿ ಪಾಟೀಲ್, ನಾಗರಾಜ ಜುಮ್ಮಣ್ಣನವರ್, ಡಿವೈಎಸ್ಪಿ ಎಂ.ಎಸ್. ಸರವಳಕರ್, ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಬಾಲಸುಬ್ರಹ್ಮಣ್ಯಂ, ಎಂ.ಎಸ್. ಶರತ್, ಉಪಸಭಾಪತಿ ಡಾ. ಗವಿಸಿದ್ದನಗೌಡ, ನಿರ್ದೇಶಕ ರಾಜೇಶ ಯಾವಗಲ್ ಇದ್ದರು.

ಡಾ. ಸಿ.ಎಸ್. ಕರಮುಡಿ ಕಾರ್ಯಕ್ರಮ ನಿರೂಪಿಸಿದರು. ಡಾ. ದಾನರಡ್ಡಿ ವಂದಿಸಿದರು.

ಮಾನವೀಯತೆಗಾಗಿ ನಡಿಗೆ

ಭಾರತೀಯ ರೆಡ್ ಕ್ರಾಸ್ ಸಂಸ್ಥೆ ವಿಶ್ವಶಾಂತಿ ದಿನಾಚರಣೆ ಅಂಗವಾಗಿ ಮಾನವೀಯತೆಗಾಗಿ ನಡಿಗೆ ಕಾರ್ಯಕ್ರಮ ನಡೆಸಲಾಯಿತು.

ನಗರದ ತಾಲೂಕು ಕ್ರೀಡಾಂಗಣದಲ್ಲಿ ಜಿಲ್ಲಾಧಿಕಾರಿ ನಲಿನ್ ಅತುಲ್ ಚಾಲನೆ ನೀಡಿದರು. ಬಳಿಕ ಜಾಥಾ ಮೂರು ಕಿ.ಮೀ ಕ್ರಮಿಸಿ, ಮಹಾವೀರ ಭವನ ತಲುಪಿತು.