ಧ್ಯಾನದಿಂದ ಮಾನಸಿಕ ಹಾಗೂ ದೈಹಿಕ ನೆಮ್ಮದಿ ಸಾಧ್ಯ

| Published : Mar 11 2025, 12:46 AM IST

ಸಾರಾಂಶ

ಚಿತ್ರದುರ್ಗದ ತರಾಸು ರಂಗಮಂದಿರದಲ್ಲಿ ರಾಮಚಂದ್ರ ಮಿಷನ್ ಹಾರ್ಟ್‍ಫುಲ್‍ನೆಸ್ ಧ್ಯಾನ ಕೇಂದ್ರದಿಂದ ಆಯೋಜಿಸಲಾದ ಧ್ಯಾನೋತ್ಸವವನ್ನು ನಿವೃತ್ತ ಡಿಡಿಪಿಐ ರೇವಣಸಿದ್ದಪ್ಪ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ವಿಜ್ಞಾನ-ತಂತ್ರಜ್ಞಾನ ಯುಗದಲ್ಲಿ ಪ್ರತಿಯೊಬ್ಬರು ಒತ್ತಡದ ಜೀವನದಲ್ಲಿ ಬದುಕುವಂತಾಗಿದೆ. ಎಲ್ಲರೂ ಒಂದಲ್ಲ ಒಂದು ರೀತಿಯ ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಿದ್ದು, ಧ್ಯಾನ ಮಾಡುವುದರಿಂದ ಮಾನಸಿಕ ಹಾಗೂ ದೈಹಿಕವಾಗಿ ನೆಮ್ಮದಿ ಕಂಡುಕೊಳ್ಳಬಹುದೆಂದು ನಿವೃತ್ತಿ ಡಿಡಿಪಿಐ ರೇವಣಸಿದ್ದಪ್ಪ ಹೇಳಿದರು.

ರಾಮಚಂದ್ರ ಮಿಷನ್ ಹಾರ್ಟ್‍ಫುಲ್‍ನೆಸ್ ಧ್ಯಾನ ಕೇಂದ್ರದಿಂದ ತರಾಸು ರಂಗಮಂದಿರದಲ್ಲಿ ನಡೆದ ಧ್ಯಾನೋತ್ಸವ ಉದ್ಘಾಟಿಸಿ ಮಾತನಾಡಿದ ಅವರು ಹೃದಯನ್ನು ಆರೋಗ್ಯವಾಗಿಟ್ಟುಕೊಂಡರೆ ಮನಸ್ಸು ಶಾಂತವಾಗಿರುತ್ತದೆಂದೆ ಎಂದರು.

ಎಸ್.ಎನ್.ಕಾಶಿವಿಶ್ವನಾಥ ಶೆಟ್ಟಿ ಮಾತನಾಡಿ, ಒತ್ತಡದ ಜೀವನದಿಂದ ಹೊರ ಬರಬೇಕಾದರೆ ಧ್ಯಾನ ಅತ್ಯವಶ್ಯಕ. ಒಂದು ತಲೆಮಾರಿನಿಂದ ಮತ್ತೊಂದು ತಲೆಮಾರಿನ ಜೀವನ ಶೈಲಿಗೆ ಸಾಕಷ್ಟು ಬದಲಾವಣೆಗಳಿರುತ್ತವೆ. ಒತ್ತಡ ನಿವಾರಿಸಿ ಮನಸ್ಸಿಗೆ ಶಾಂತಿ ನೀಡುವ ಧ್ಯಾನವನ್ನು ಎಲ್ಲರೂ ಅಭ್ಯಾಸ ಮಾಡಿಕೊಳ್ಳುವುದು ಒಳ್ಳೆಯದು ಎಂದು ಹೇಳಿದರು.

ಹಾರ್ಟ್‍ಫುಲ್‍ನೆಸ್ ರಾಜ್ಯ ಸಂಚಾಲಕ ಮೈಸೂರಿನ ಮಧುಸೂದನ್ ಮಾತನಾಡಿ ಸದೃಢ ಸಮಾಜ ನಿರ್ಮಿಸಲು ಯೋಚಿಸುವಂತ ಮನಸ್ಸುಗಳು ಇಂದಿನ ಸಮಾಜಕ್ಕೆ ಬೇಕು. ವಿವೇಕಯುತ ಜೀವನ ಮಾಡುವುದಕ್ಕಾಗಿ ಎಲ್ಲರೂ ಧ್ಯಾನದ ಮೊರೆ ಹೋಗಲೇಬೇಕು. ಧ್ಯಾನದ ಮೂಲಕ ಪರಿಶುದ್ಧವಾದ ಜೀವನ ಮಾಡಬಹುದು. ಪ್ರಜ್ಞಾ ಪೂರ್ವಕವಾಗಿ ಧ್ಯಾನ ಮಾಡಿದಾಗ ಮನಸ್ಸಿನಲ್ಲಿರುವ ಕ್ರೂರತ್ವ ದೂರವಾಗುತ್ತದೆ ಎಂದು ಹೇಳಿದರು. ಹಾರ್ಟ್‍ಫುಲ್‍ನೆಸ್ ಪ್ರಶಿಕ್ಷಕ ಡಾ.ವಿ.ಬಸವರಾಜ್ ಮಾತನಾಡಿ ಧ್ಯಾನೋತ್ಸವದ ಸತ್ವವನ್ನು ಎಲ್ಲರೂ ಅರಿಯಬೇಕು. ಜೀವನ ಶೈಲಿ ಹಾಗೂ ಆಹಾರದ ಕ್ರಮಗಳಲ್ಲಿ ಸಾಕಷ್ಟು ಬದಲಾವಣೆಯಾಗಿರುವುದರಿಂದ ಎಲ್ಲರೂ ರಕ್ತದೊತ್ತಡ, ಸಕ್ಕರೆ ಕಾಯಿಲೆಯಿಂದ ಬಳಲುವುದು ಸಹಜ. ಹಾಗಾಗಿ ಧ್ಯಾನದ ಮಹತ್ವವನ್ನು ನೀವು ಕಲಿಯಿರಿ, ನಿಮ್ಮ ಅಕ್ಕಪಕ್ಕದವರಿಗೂ ಕಲಿಯುವಂತೆ ಪ್ರೇರೇಪಿಸಿ ಎಂದು ಮನವಿ ಮಾಡಿದರು.

ಹಾರ್ಟ್‍ಫುಲ್‍ನೆಸ್ ವಿಭಾಗ ಸಂಚಾಲಕ ಡಾ.ವಿ.ಸಿದ್ದೇಶ್ವರನ್ ಮಾತನಾಡಿ ಮನಸ್ಸಿಗೆ ಶಾಂತಿ ಸಿಗಬೇಕಾದರೆ ಧ್ಯಾನದ ಜೊತೆಗೆ ಆಧ್ಯಾತ್ಮಿಕತೆಗೆ ಹೆಚ್ಚಿನ ಒತ್ತು ಕೊಡಬೇಕು. ಧ್ಯಾನದಿಂದ ನಾನಾ ರೀತಿಯ ರೋಗಗಳನ್ನು ಹತೋಟಿಗೆ ತರಬಹುದು. ಧ್ಯಾನ ಪ್ರಕ್ರಿಯೆಯಲ್ಲಿ ಪ್ರತಿನಿತ್ಯವೂ ತೊಡಗಿಕೊಂಡರೆ ಮಾನಸಿಕ ಹಾಗೂ ದೈಹಿಕ ನೆಮ್ಮದಿ ಕಂಡುಕೊಳ್ಳಬಹುದು. ಧ್ಯಾನವನ್ನು ಜೀವನದ ಅವಿಭಾಜ್ಯ ಅಂಗವಾಗಿ ರೂಢಿಸಿಕೊಂಡರೆ ರೋಗದಿಂದ ದೂರವಿರಬಹುದೆಂದು ತಿಳಿಸಿದರು.

ಹಾರ್ಟ್‍ಫುಲ್‍ನೆಸ್‍ನ ಹಿರಿಯ ಪ್ರಶಿಕ್ಷಕ ಎಸ್.ವೆಂಕಟಾದಿ, ನಿವೃತ್ತ ಡಿಡಿಪಿಐ ಎನ್.ಎಂ.ರಮೇಶ್ ವೇದಿಕೆಯಲ್ಲಿದ್ದರು.ಗಂಜಿಗಟ್ಟೆ ಆರ್.ಕೃಷ್ಣಮೂರ್ತಿ ಜಾನಪದ ಗೀತೆಗಳನ್ನು ಹಾಡಿ ರಂಜಿಸಿದರು.ಹಾರ್ಟ್‍ಫುಲ್‍ನೆಸ್ ಧ್ಯಾನ, ಹಾರ್ಟ್‍ಫುಲ್‍ನೆಸ್ ಶುದ್ದೀಕರಣ, ಹಾರ್ಟ್‍ಫುಲ್‍ನೆಸ್ ಪ್ರಾರ್ಥನೆ ಎಂಬ ವಿಚಾರ ಕುರಿತು ಗೋಷ್ಠಿಗಳು ನಡೆದವು.