ಅಂತಃಶಕ್ತಿ ಅರಿಯಲು ಧ್ಯಾನವೇ ಮೂಲ ಅಸ್ತ್ರ: ಸ್ವಾಮಿ ಜ್ಯೋತಿರ್ಮಯಾನಂದ

| Published : Aug 04 2025, 11:45 PM IST

ಅಂತಃಶಕ್ತಿ ಅರಿಯಲು ಧ್ಯಾನವೇ ಮೂಲ ಅಸ್ತ್ರ: ಸ್ವಾಮಿ ಜ್ಯೋತಿರ್ಮಯಾನಂದ
Share this Article
  • FB
  • TW
  • Linkdin
  • Email

ಸಾರಾಂಶ

ಇಲ್ಲಿನ ಶಿವನಗರದಲ್ಲಿರುವ ರಾಮಕೃಷ್ಣ ವಿವೇಕಾನಂದ ಆಶ್ರಮ ಪರಿಸರದಲ್ಲಿ ನಿರ್ಮಿಸುತ್ತಿರುವ ವಿವೇಕಾನಂದ ಧ್ಯಾನ ಕುಟೀರಕ್ಕೆ ಸೋಮವಾರ ಆಶ್ರಮದ ಅಧ್ಯಕ್ಷರಾದ ಸ್ವಾಮಿ ಜ್ಯೋತಿರ್ಮಯಾನಂದ ಮಹಾರಾಜ ಅವರು ಭೂಮಿಪೂಜೆ ನೆರವೇರಿಸಿ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ, ಬೀದರ್‌

ಇಲ್ಲಿನ ಶಿವನಗರದಲ್ಲಿರುವ ರಾಮಕೃಷ್ಣ ವಿವೇಕಾನಂದ ಆಶ್ರಮ ಪರಿಸರದಲ್ಲಿ ನಿರ್ಮಿಸುತ್ತಿರುವ ವಿವೇಕಾನಂದ ಧ್ಯಾನ ಕುಟೀರಕ್ಕೆ ಸೋಮವಾರ ಆಶ್ರಮದ ಅಧ್ಯಕ್ಷರಾದ ಸ್ವಾಮಿ ಜ್ಯೋತಿರ್ಮಯಾನಂದ ಮಹಾರಾಜ ಅವರು ಭೂಮಿಪೂಜೆ ನೆರವೇರಿಸಿ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಪೂಜ್ಯರು, ಆರೋಗ್ಯ ಭಾಗ್ಯ ಹಾಗೂ ಸ್ವಪರಿವರ್ತನೆಗಾಗಿ ನಮ್ಮ ಪೂರ್ವಜರು ಬದುಕಿನ ಅನುಭವಗಳನ್ನು ವೈಜ್ಞಾನಿಕ ಸಂಶೋಧನೆ ಮೂಲಕ ಯೋಗ, ಧ್ಯಾನ, ಪ್ರಾಕೃತಿಕ ಚಿಕಿತ್ಸೆ ಮತ್ತು ಆಯುರ್ವೇದಿಕ್‌ ಜೀವನ ಪದ್ಧತಿಯಿಂದ ದುಃಖಿಯನ್ನು ಸುಖಿಯಾಗಿಸುವ, ಅಜ್ಞಾನಿಗೆ ಜ್ಞಾನಿಯಾಗಿಸುವ ಮತ್ತು ರೋಗಿಗೆ ನಿರೋಗಿ ಯಾಗಿಸಿ ಪರಮ ಯೋಗಿಯನ್ನಾಗಿಸುವ ಚಮತ್ಕಾರಿ ಸೂತ್ರಗಳು ಕೊಟ್ಟಿದ್ದಾರೆ ಎಂದರು.

ಆ ಸೂತ್ರಗಳಂತೆ ಮಾನವನ ಒತ್ತಡ ಬದುಕಿನ ಸಮಗ್ರ ಪರಿವರ್ತನೆಗಾಗಿ ಭಕ್ತರ ಅಪೇಕ್ಷೆ ಮತ್ತು ನೆರವಿನಿಂದ ಇಲ್ಲಿ ಧ್ಯಾನ ಕುಟೀರ ಸ್ಥಾಪಿಸಲಾಗುತ್ತಿದೆ. ಬರುವ ಜನವರಿ 12ರಂದು (ಸ್ವಾಮಿ ವಿವೇಕಾನಂದರ ಜಯಂತಿಗೆ) ಇದರ ಲೋಕಾರ್ಪಣೆ ಮಾಡುವ ಉದ್ದೇಶವಿದೆ ಎಂದರು.

ಇಂದಿನ ಹಾಗೂ ಮುಂದಿನ ಜನಾಂಗವನ್ನು ಯೋಗ ಮತ್ತು ಧ್ಯಾನದ ದಿವ್ಯ ಶಕ್ತಿಯಿಂದ ಖಿನ್ನತೆ, ಒತ್ತಡ, ರೋಗಗಳಿಂದ ಮುಕ್ತರಾಗಿಸಿ ಸದೃಢ ಭಾರತವನ್ನು ಕಟ್ಟುವ ಬಹುದೊಡ್ಡ ಹೊಣೆ ನಮ್ಮೆಲ್ಲರ ಮೇಲಿದೆ. ಇಂದಿನ ಬದಲಾದ ಆಧುನಿಕ ಜೀವನ ಶೈಲಿ ಮತ್ತು ಆಹಾರ ಶೈಲಿ ಪ್ರತಿಯೊಬ್ಬರ ಆರೋಗ್ಯಕ್ಕೆ ಕುತ್ತಾಗಿ ಪರಿಣಮಿಸಿದೆ. ಆರೋಗ್ಯ ಸಮಸ್ಯೆಯಿಂದ ನಾವು ಪಾರಾಗಬೇಕಾದರೆ "ಗೋ ಬ್ಯಾಕ್‌ ಟು ನೇಚರ್‌ " ತತ್ವಕ್ಕೆ ಸೈ ಎಂದು ಮತ್ತೆ ನಮ್ಮ ಪೂರ್ವಜರ ಜೀವನಶೈಲಿ ಅಳವಡಿಸಿಕೊಳ್ಳುವುದು ಅನಿವಾರ್ಯವಾಗಿದೆ ಎಂದರು.

ಹಿರಿಯ ಪತ್ರಕರ್ತ ಸದಾನಂದ ಜೋಶಿ ಮಾತನಾಡಿ, ಧ್ಯಾನವು ಮನಸ್ಸಿಗೆ ಶಾಂತಿ, ಏಕಾಗ್ರತೆ ನೀಡಿ ಆಧ್ಯಾತ್ಮಿಕ ಪ್ರಗತಿ, ವ್ಯಕ್ತಿತ್ವ ವಿಕಸನಕ್ಕೆ ದಾರಿ ತೋರಿಸುವ ಸರಳ ಸಾಧನವಾಗಿದೆ. ಈ ಧ್ಯಾನ ಕುಟೀರ ಸ್ಥಳೀಯರ ಪಾಲಿಗೆ ಆಧ್ಯಾತ್ಮಿಕ ದಿವ್ಯಚೇತನ ಕೇಂದ್ರವಾಗಲಿದೆ. ರಾಮಕೃಷ್ಣ ಆಶ್ರಮವು ಎರಡು ದಶಕಗಳಿಂದ ಇಲ್ಲಿ ವ್ಯಕ್ತಿ ನಿರ್ಮಾಣದಂಥ ಮಹತ್ಕಾರ್ಯದಲ್ಲಿ ತೊಡಗಿದೆ. ಪೂಜ್ಯರ ಜನಪರ, ಜೀವಪರ ಕಾಳಜಿ ಮಾದರಿಯಾಗಿದೆ ಎಂದು ಬಣ್ಣಿಸಿದರು.

ಪ್ರಮುಖರಾದ ಅನೀತಾ ಪಾಟೀಲ್‌, ಪದ್ಮಜಾ ವಿಶ್ವಕರ್ಮ, ಅಂಬುಜಾ ವಿಶ್ವಕರ್ಮ, ಜಯಪ್ರಕಾಶ ಪೊದ್ದಾರ್‌, ಚನ್ನಬಸವ ಹೇಡೆ, ನಿತಿನ್‌ ಕರ್ಪೂರ, ಡಾ.ಸಿದ್ದನಗೌಡ, ಗುಣ ವಂತ ರಾಜೋಳೆ, ಹಾವಗಿರಾವ್‌ ಕಳಸೆ, ಬಸವರಾಜ ಬುನ್ನಾ, ನಾಗಶೆಟ್ಟಿ, ಡಾ. ಶ್ರದ್ಧಾ, ಗೋರಖನಾಥ, ಗುರುನಾಥ ರಾಜಗೀರಾ, ಸಚಿದಾನಂದ ಚಿದ್ರೆ, ಸತ್ಯಪ್ರಕಾಶ, ಜಗದೀಶ ಮುಖೇಡಕರ್, ಗಣೇಶ ಕಳಸೆ ಸೇರಿದಂತೆ ಆಶ್ರಮದ ಭಕ್ತರು ಉಪಸ್ಥಿತರಿದ್ದರು.

ಸೆ.11ಕ್ಕೆ ಆರೋಗ್ಯಧಾಮ ಉದ್ಘಾಟನೆ

ಆಯುರ್ವೇದ, ನೈಸರ್ಗಿಕ ಚಿಕಿತ್ಸೆ ಜೊತೆಗೆ ನಿರಂತರ ಯೋಗ, ಧ್ಯಾನ ತರಗತಿಗಳನ್ನು ನಡೆಸುವ ಉದ್ದೇಶದಿಂದ ಆಶ್ರಮದಿಂದ ಸ್ವಾಮಿ ವಿವೇಕಾನಂದ ಆರೋಗ್ಯ ಧಾಮ ಆಯುರ್ವೇದಿಕ್‌ ಆಸ್ಪತ್ರೆಯು ಬರುವ ತಿಂಗಳು 11ರಂದು ಆರಂಭಿಸಲಾಗುತ್ತಿದೆ ಎಂದು ಸ್ವಾಮಿ ಜ್ಯೋತಿರ್ಮಯಾನಂದ ಮಹಾರಾಜ ತಿಳಿಸಿದರು.

ಸ್ವಾಮಿ ವಿವೇಕಾನಂದರು ಚಿಕಾಗೋದಲ್ಲಿ ಉಪನ್ಯಾಸ ನೀಡಿದ ಐತಿಹಾಸಿಕ ದಿನದಂದು ಆರೋಗ್ಯಧಾಮ ಲೋಕಾರ್ಪಣೆ ನಡೆಯಲಿದೆ. ಪರಿಣಿತ ತಂಡ ಕಡಿಮೆ ದರದಲ್ಲಿ ಗುಣಮಟ್ಟದ ಸೇವೆ ನೀಡಲಿದೆ. ಜನರ ಉತ್ತಮ ಆರೋಗ್ಯಕ್ಕಾಗಿ ಈ ಧಾಮವು ನಿರಂತರ ಶ್ರಮಿಸಲಿದೆ. ಜಿಲ್ಲೆಯ ಜನರು ಇದರ ಸದ್ಬಳಕೆ ಮಾಡಿಕೊಳ್ಳುವಂತೆ ಕೋರಿದರು.