ಚಾಲಕನ ಜೀವ ಉಳಿಸಿದ ಮೆಡಿಟೈಡ್ ಆಸ್ಪತ್ರೆ

| Published : Feb 24 2025, 12:30 AM IST

ಸಾರಾಂಶ

ಕಳೆದ ವಾರ ಈ ಘಟನೆ ನಡೆದಿದ್ದು, ತಡರಾತ್ರಿ ಆಸ್ಪತ್ರೆಗೆ ದಾಖಲಾದ ವ್ಯಕ್ತಿಗೆ ಕೂಡಲೇ ಸತತ ನಾಲ್ಕುಗಂಟೆಗಳ ಕಾಲ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದ್ದು ,3- 4 ವಾರದಲ್ಲಿ ವ್ಯಕ್ತಿ ಚೇತರಿಸಿಕೊಂಡು ಎಂದಿನ ಜೀವನಕ್ಕೆ ಮರಳಲಿದ್ದಾರೆ .

ದಾಬಸ್‍ಪೇಟೆ: ರಸ್ತೆ ಅಪಘಾತದಿಂದ ದೇಹದ ವಿವಿಧೆಡೆ ಮೂಳೆ ಮುರಿತಕ್ಕೆ ಒಳಗಾಗಿದ್ದ ರಾಜಸ್ಥಾನ ಮೂಲದ 50 ವರ್ಷದ ವ್ಯಕ್ತಿಗೆ ಮೆಡಿಟೈಡ್ ಆಸ್ಪತ್ರೆಯಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ ನೀಡಿ ಜೀವ ಉಳಿಸಲಾಗಿದೆ ಎಂದು ಆಸ್ಪತ್ರೆ ವ್ಯವಸ್ಥಾಪಕ ನಿರ್ದೇಶಕ ತ್ರಿನೇತ್ರ ತಿಳಿಸಿದ್ದಾರೆ.

ಆಸ್ಪತ್ರೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ ವಾರ ಈ ಘಟನೆ ನಡೆದಿದ್ದು, ತಡರಾತ್ರಿ ಆಸ್ಪತ್ರೆಗೆ ದಾಖಲಾದ ವ್ಯಕ್ತಿಗೆ ಕೂಡಲೇ ಸತತ ನಾಲ್ಕುಗಂಟೆಗಳ ಕಾಲ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದ್ದು ,3- 4 ವಾರದಲ್ಲಿ ವ್ಯಕ್ತಿ ಚೇತರಿಸಿಕೊಂಡು ಎಂದಿನ ಜೀವನಕ್ಕೆ ಮರಳಲಿದ್ದಾರೆ ಎಂದರು.

ಶಸ್ತ್ರಚಿಕಿತ್ಸೆ ನಡೆಸಿದ ಕೀಲು- ಮೂಳೆ ತಜ್ಞರಾದ ಡಾ.ದುಷ್ಯಂತ್ ಮಾತನಾಡಿ, ರೋಗಿ ನಮ್ಮಲ್ಲಿ ದಾಖಲಾದಾಗ ತೊಡೆಮೂಳೆ, ತೊಡೆಕೀಲು, ಹಿಪ್ ಜಾಯಿಂಟ್ ಹಾಗೂ ಎರಡೂ ಕಾಲುಗಳ ಮೂಳೆಗಳು ಮುರಿದು ಹೊರಬಂದಿದ್ದವು. ಇಂತಹ ಸಮಯದಲ್ಲಿ ಆಸ್ಪತ್ರೆಗೆ ದಾಖಲಾಗುವ ಮುನ್ನವೇ ತೀವ್ರ ರಕ್ತಸ್ತ್ರಾವದಿಂದ ರೋಗಿ ಸಾವನ್ನಪ್ಪುವ ಸಾಧ್ಯತೆ ಹೆಚ್ಚಿರುತ್ತದೆ. ಆದರೆ ನಮ್ಮ ತಂಡ ಕೂಡಲೇ ಅವರನ್ನು ದಾಖಲಿಸಿ ಅವರಿಗೆ ತಕ್ಷಣವೇ ಶಸ್ತ್ರಚಿಕಿತ್ಸೆ ನೀಡಿ ಬದುಕಿಸಲಾಗಿದೆ ಎಂದರು.

ಆಸ್ಪತ್ರೆ ಸಿಇಒ ವಿಜಯ್ ಮಾತನಾಡಿ, ದಾಬಸ್‍ಪೇಟೆಯ ಜನರಿಗೆ 24 ಗಂಟೆಗಳ ಕಾಲ ಸೇವೆ ಒದಗಿಸುವುದು ನಮ್ಮ ಆದ್ಯತೆ ಹಾಗೂ ಗುರಿಯಾಗಿದ್ದು, ನಮ್ಮಲ್ಲಿರುವ ವಿಶ್ವದರ್ಜೆಯ ಶಸ್ತ್ರಚಿಕಿತ್ಸೆ, ಸಿಟಿ ಹಾಗೂ ಲ್ಯಾಬರೋಟರಿ, ರಕ್ತನಿಧಿ, ಐಸಿಯು ಹಾಗೂ ನುರಿತ ವೈದ್ಯಕೀಯ ಸಿಬ್ಬಂದಿ ನೆರವಿನಿಂದ ಈ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದ್ದು ಮುಂದೆಯೂ ನಮ್ಮ ಸೇವೆ ಜನರಿಗೆ ದೊರೆಯಲಿದೆ ಎಂದರು.