ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು೨೦೨೪-೨೫ನೇ ಸಾಲಿಗೆ ಅಲ್ಪಾವಧಿ ಬೆಳೆ ಸಾಲ ಮಿತಿಯನ್ನು ನಿಗದಿಪಡಿಸುವ ಉದ್ದೇಶದಿಂದ ಜಿಲ್ಲಾ ಮಟ್ಟದ ಕೃಷಿ ತಜ್ಞ ಪ್ರತಿನಿಧಿಗಳ ಸಮಾಲೋಚನಾ ಸಭೆ ಮಂಗಳೂರಿನ ಎಸ್‌ಸಿಡಿಸಿಸಿ ಬ್ಯಾಂಕಿನಲ್ಲಿ ಶುಕ್ರವಾರ ಬ್ಯಾಂಕಿನ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅಧ್ಯಕ್ಷತೆಯಲ್ಲಿ ನಡೆಯಿತು.
ಅಧ್ಯಕ್ಷತೆ ವಹಿಸಿದ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಮಾತನಾಡಿ, ಎಸ್‌ಸಿಡಿಸಿಸಿ ಬ್ಯಾಂಕ್ ೨೦೨೩-೨೪ನೇ ಸಾಲಿಗೆ ಬೆಳೆ ಸಾಲಗಳ ಗುರಿ ೨,೧೩೩.೦೦ ಕೋಟಿ ರು. ಆಗಿದ್ದು, ೩೧-೦೩-೨೦೨೩ರ ಅಂತ್ಯಕ್ಕೆ ಬೆಳೆ ಸಾಲಗಳ ಹೊರಬಾಕಿ ೧,೬೭೪.೦೦ ಕೋಟಿ ರು. ಆಗಿರುತ್ತದೆ. ಈಗಾಗಲೇ ೧,೬೩೩.೪೩ ಕೋಟಿ ರು. ಬೆಳೆಸಾಲ ನೀಡಿದೆ ಎಂದರು.ನಬಾರ್ಡ್ ಪುರ್ನಧನ ಸಾಲ ಹಾಗೂ ಎಸ್‌ಸಿಡಿಸಿಸಿ ಬ್ಯಾಂಕಿನ ಸ್ವಂತ ಬಂಡವಾಳದಿಂದ ಕೃಷಿ ಉದ್ದೇಶಕ್ಕಾಗಿ ೨೦೨೨-೨೩ನೇ ಸಾಲಿನಲ್ಲಿ ಒಟ್ಟು ೧೫೦.೨೦ ಕೋಟಿ ರು. ಅವಧಿ ಸಾಲವನ್ನು ನೀಡಲಾಗಿದೆ. ೨೦೨೩-೨೪ನೇ ಸಾಲಿಗೆ ಈಗಾಗಲೇ ೮೨.೦೯ ಕೋಟಿ ರು. ಮಧ್ಯಮಾವಧಿ/ದೀರ್ಘಾವಧಿ ಕೃಷಿ ಸಾಲವನ್ನು ಬ್ಯಾಂಕ್ ನೀಡಿದೆ ಎಂದು ಡಾ. ಎಂ.ಎನ್. ರಾಜೇಂದ್ರ ಕುಮಾರ್ ತಿಳಿಸಿದರು.೨೦೨೪-೨೫ನೇ ಸಾಲಿಗೆ ವಿವಿಧ ಬೆಳೆಗಳಿಗೆ ಕೊಡತಕ್ಕಅಲ್ಪಾವಧಿ ಬೆಳೆಸಾಲದ ಮಿತಿಯನ್ನು ಕೃಷಿ ತಜ್ಞ ಪ್ರತಿನಿಧಿಗಳೊಂದಿಗೆ, ನಬಾರ್ಡ್, ಲೀಡ್ ಬ್ಯಾಂಕ್, ವಾಣಿಜ್ಯ ಬ್ಯಾಂಕುಗಳು, ಸಹಕಾರಿ ಇಲಾಖೆ, ತೋಟಗಾರಿಕೆ, ಕೃಷಿ ಹಾಗೂ ಇತರ ಇಲಾಖಾಧಿಕಾರಿಗಳ ಸಮಾಲೋಚನೆಯ ಮೂಲಕ ನಿಗದಿಪಡಿಸಲಾಯಿತು.ಎಸ್‌ಸಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ವಿನಯಕುಮಾರ್ ಸೂರಿಂಜೆ, ನಿರ್ದೇಶಕರಾದ ಎಂ.ವಾದಿರಾಜ್ ಶೆಟ್ಟಿ, ಶಶಿಕುಮಾರ್ ರೈ, ಎಸ್. ಬಿ.ಜಯರಾಮರೈ, ಕೆ. ಜೈರಾಜ್ ಬಿ. ರೈ, ಅಶೋಕ್ ಕುಮಾರ್ ಶೆಟ್ಟಿ, ಮೋನಪ್ಪ ಶೆಟ್ಟಿ ಎಕ್ಕಾರು, ದ.ಕ. ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಪ್ರಸಾದ್ ಕೌಶಲ್ ಶೆಟ್ಟಿ, ದ.ಕ. ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕ ಎಚ್. ಎನ್. ರಮೇಶ್, ನಬಾರ್ಡ್ ಡಿಜಿಎಂ ಸಂಗೀತಾ ಕರ್ತಾ, ಬ್ಯಾಂಕಿನ ಮುಖ್ಯಕಾರ್ಯನಿರ್ವಹಣಾಧಿಕಾರಿ ಕೆ. ಗೋಪಾಲಕೃಷ್ಣ ಭಟ್ ಕೆ., ಜಿಲ್ಲಾ ಲೀಡ್ ಬ್ಯಾಂಕ್ ಮೆನೇಜರ್ ಸುಮನ ಶಿವರಾಮ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೆಂಪೇಗೌಡ, ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಪ್ರೇಮಾ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಎಚ್. ಆರ್. ನಾಯ್ಕ್, ಸಹಾಯಕ ನಿರ್ದೇಶಕ ದರ್ಶನ್ ಕೆ.,ಪಶುಸಂಗೋಪನಾ ಇಲಾಖೆ ಉಪ ನಿರ್ದೇಶಕ ಡಾ. ಅರುಣ್ ಕುಮಾರ್ ಶೆಟ್ಟಿ, ವಲಯ ಪಶು ವೈದ್ಯಾಧಿಕಾರಿ ಡಾ. ಗಜೇಂದ್ರ ಕುಮಾರ್, ಫಿಶ್ ಮಾರ್ಕೆಟಿಂಗ್ ಫೆಡರೇಶನ್ ಎಂ.ಡಿ. ದರ್ಶನ್ ಕೆ.ಟಿ.,ಕರ್ಣಾಟಕ ಬ್ಯಾಂಕ್ ಅಧಿಕಾರಿ ಅಜಿತ್ ಕುಮಾರ್ ಕೆ. ಎ., ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ಸುಧೀರ್ ಕುಮಾರ್, ತ್ರಿವೇಣಿ ಹಾಗೂ ವಿವಿಧ ಸಹಕಾರಿ ಸಂಘಗಳ ಅಧ್ಯಕ್ಷರು, ಮುಖ್ಯಕಾರ್ಯನಿರ್ವಹಣಾಧಿಕಾರಿಗಳು ಇದ್ದರು.