ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ರಾಯಣ್ಣ -ಚೆನ್ನಮ್ಮ ಬ್ರಿಗೇಡ್ ಸಂಘಟನೆಯ ರೂಪುರೇಷೆಗಳ ಬಗ್ಗೆ ಚರ್ಚೆ ಮಾಡಲು ಅ.7ರಂದು ಹುಬ್ಬಳ್ಳಿಯಲ್ಲಿ ಮುಖಂಡರ ಸಭೆ ಕರೆಯಲಾಗಿದೆ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಹೇಳಿದರು.ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬ್ರಿಗೇಡ್ ಬಗ್ಗೆ ಚರ್ಚೆ ಶುರುವಾಗಿದೆ. ಜಮಖಂಡಿಯಲ್ಲಿ ಜಯಮೃತ್ಯುಂಜಯ ಸ್ವಾಮೀಜಿ ಬ್ರಿಗೇಡ್ ಕಟ್ಟ ಬೇಕು ಎಂದು ಹೇಳಿದ್ದರು. ಯತ್ನಾಳ್ ಮತ್ತು ನಾನು ಇಬ್ಬರೂ ಸೇರಿ ರಾಯಣ್ಣ ಮತ್ತು ಚೆನ್ನಮ್ಮ ಹೆಸರುಗಳನ್ನು ಸೇರಿಸಿ ಬ್ರಿಗೇಡ್ ಮಾಡಲಿ ಎಂದು ಆಶೀರ್ವಾದ ಮಾಡಿದ್ದಾರೆ. ಹೀಗಾಗಿ ಹುಬ್ಬಳ್ಳಿಯಲ್ಲಿ ಬ್ರಿಗೇಡ್ ಪೂರ್ವಭಾವಿ ಸಭೆ ನಡೆಸಲಿದ್ದೇವೆ ಎಂದು ತಿಳಿಸಿದರು.
ಹಿಂದುಳಿದ ವರ್ಗಗಳಿಗೆ ನ್ಯಾಯ ಕೊಡುವ ದೃಷ್ಟಿಯಿಂದ ಮತ್ತೆ ಬ್ರಿಗೇಡ್ ಸ್ಥಾಪನೆ ಮಾಡಬೇಕು ಎಂಬ ಚರ್ಚೆ ನಡೆಯುತ್ತಿದ್ದು, ಇದಕ್ಕೆ ಸಂಬಂಧಿಸಿದಂತೆ ಆರ್‌ಸಿಬಿ (ರಾಯಣ್ಣ ಚನ್ನಮ್ಮ ಬ್ರಿಗೇಡ್) ರಚನೆ ಮಾಡುವ ಬಗ್ಗೆ ಈ ಪೂರ್ವಭಾವಿ ಸಭೆಯಲ್ಲಿ ಚರ್ಚೆ ನಡೆಯಲಿದೆ. ಅದೇ ಹೆಸರಿನ ನಾಮಕರಣ ಮಾಡಬೇಕಾ ಎಂದು ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.ಬ್ರಿಗೇಡ್ ಸ್ಥಾಪನೆ ಬಗ್ಗೆ ಹೇಳಿಕೆ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿದ್ದಂತೆ ರಾಜ್ಯದ ನಾನಾ ಕಡೆಯಿಂದ ದೂರವಾಣಿ ಕರೆಗಳು ಬರುತ್ತಿವೆ. ಅನೇಕ ಮಾಜಿ ಶಾಸಕರು ದೂರವಾಣಿ ಕರೆ ಮಾಡಿದ್ದಾರೆ. ರಾಜಕೀಯ ಪಕ್ಷಗಳಿಂದ ಬೇಸತ್ತ ಅನೇಕರು ರಾಜಕೀಯೇತರ ಸಂಘಟನೆ ಕೂಡಿಕೊಳ್ಳಲು ಉತ್ಸುಕರಾಗಿದ್ದಾರೆ. ನಾವು ನಿಮ್ಮೊಂದಿಗೆ ಬರುತ್ತೇವೆ ಎಂಬ ಪ್ರಶಂಸೆಯ ಮಾತುಗಳನ್ನಾಡಿದ್ದಾರೆ ಎಂದರು.
ಬ್ರಿಗೇಡ್‌ಗೆ ಯಾವ ಹೆಸರಿಡಬೇಕು. ಯಾವ ಸ್ವಾಮೀಜಿಗಳನ್ನು ಕರೆಸಬೇಕು. ಉದ್ಘಾಟನೆಯನ್ನು ಎಲ್ಲಿ ಮತ್ತು ಹೇಗೆ ಮಾಡಬೇಕೆಂಬ ವಿಚಾರವೂ ಸೇರಿದಂತೆ ಸಂಘಟನೆ ಸಂರಚನೆ ಬಗ್ಗೆ ಚರ್ಚೆ ನಡೆಸಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.ಮಾನವಂತ ರಾಜಕಾರಣ ಬೇಕು:
ಮುಡಾ ಹಗರಣ ಬೆಳಕಿಗೆ ಬಂದ ನಂತರ ರಾಜ್ಯದಲ್ಲಿನ ರಾಜಕಾರಣಿಗಳು ಎಲ್ಲೆ ಮೀರಿ ವರ್ತನೆ ಮಾಡುತ್ತಿದ್ದಾರೆ. ಗುಣಮಟ್ಟದ ಭಾಷೆ ಬಳಕೆಯಾಗುತ್ತಿಲ್ಲ. ಯಾವ ರಾಜಕಾರಣಿಗಳಿಗೂ ಇದು ಶೋಭೆ ತರುವುದಿಲ್ಲ. ಯಾರ ಮೇಲೆ ಆರೋಪ ಇದೆಯೊ ಅವರೆಲ್ಲ ಕ್ಲೀನ್ ಚಿಟ್ ಪಡೆದು ಬರಲಿ ಅಲ್ಲಿ ತನಕ ಪರಸ್ಪರ ಕೆಸರೆರೆಚಾಟ ನಿಲ್ಲಿಸಬೇಕಿದೆ. ಸಿಎಂ ಪತ್ನಿ ಅಮಾಯಕರಿದ್ದು, ಅವರನ್ನು ಪ್ರಕರಣದಲ್ಲಿ ಎಳೆದು ತರಲಾಗಿದೆ. ಅವರೂ ಕೂಡ ಕ್ಲೀನ್ ಚಿಟ್ ಪಡೆಯಲಿ ಎಂದು ನಾಡದೇವಿಯಲ್ಲಿ ಪ್ರಾರ್ಥನೆ ಮಾಡುವೆ ಎಂದು ಹೇಳಿದರು.ಜಾತಿಗಣತಿ ವರದಿ ಸಾರ್ವಜನಿಕ ಚರ್ಚೆಗೆ ಬಿಡಲಿ:
ಜಾತಿಗಣತಿ ಚರ್ಚೆಯಾಗಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಿಂದುಳಿದ ವರ್ಗಗಳ ಆರ್ಥಿಕ ಸಾಮಾಜಿಕ ಸ್ಥಿತಿಗತಿಗಳ ಸಮೀಕ್ಷಾ ವರದಿಯನ್ನು ಸಂಪುಟದ ಮುಂದೆ ಮಂಡಿಸುವುದಾಗಿ ಹೇಳಿದ್ದರು. ಈಗ ಪ್ರಮುಖರು, ಚಿಂತಕರೊಂದಿಗೆ ಚರ್ಚೆ ಮಾಡುವುದಾಗಿ ವರಸೆ ಬದಲಿಸಿದ್ದಾರೆ. ಸಿಎಂ ಅವರು ಕಾಂತ್‌ರಾಜ್ ವರದಿಯನ್ನು ಕೂಡಲೇ ಸಚಿವ ಸಂಪುಟದಲ್ಲಿ ಅಂಗಿಕರಿಸಿ ಬಳಿಕ ಸಾರ್ವಜನಿಕ ಚರ್ಚೆಗೆ ಬಿಡಲಿ ಎಂದು ಹೇಳಿದರು.ಸಚಿವ ದಿನೇಶ್ ಗುಂಡೂರಾವ್ ಅವರು ವೀರ ಸಾವರ್ಕರ್ ಬಗ್ಗೆ ಪ್ರಸ್ತಾಪಿಸಿದ್ದಾರೆ. ಸಾವರ್ಕರ್ ಬಗ್ಗೆ ಮಾತನಾಡುವ ನೈತಿಕತೆ ದಿನೇಶ್ ಗುಂಡೂರಾವ್‌ಗೆ ಇಲ್ಲ. ಅವರು ಭಗವಾನ್ ಬರೆದ ಪುಸ್ತಕ ಓದದೆ ಬೇರೆಯವರು ಬರೆದ ಪುಸ್ತಕ ಓದಿಕೊಂಡು ಮಾತನಾಡಲಿ. ಗೋವು ಮಾಂಸ ತಿನ್ನುತ್ತಿದ್ದರು ಎಂಬ ಹೇಳಿಕೆ ನೀಡಿ ಮುಸ್ಲಿಮರ ಓಲೈಕೆ ರಾಜಕಾರಣ ಮಾಡುತ್ತಿದ್ದಾರೆ. ಈ ಮಣ್ಣಿನ ಗುಣಕ್ಕೆ ಅಪಮಾನ ಮಾಡುವ ರೀತಿಯಲ್ಲಿ ಕಾಂಗ್ರೆಸ್ ನಾಯಕರು ಮಾತನಾಡುತ್ತಿದ್ದಾರೆ. ಒಬ್ಬ ರಾಷ್ಟ್ರಭಕ್ತ ನಾಯಕನ ಬಗ್ಗೆ ಕೀಳಾಗಿ ಮಾತನಾಡುವುದನ್ನು ಸಚಿವರು ಕೂಡಲೇ ನಿಲ್ಲಿಸಬೇಕು ಎಂದು ಕುಟುಕಿದರು. ಪತ್ರಿಕಾಗೋಷ್ಠಿಯಲ್ಲಿ ಮಹಾಲಿಂಗ ಶಾಸ್ತ್ರಿ, ಇ.ವಿಶ್ವಾಸ್, ಕುಪೇಂದ್ರ, ರುದ್ರೇಶ್, ಮೋಹನ್ ಮತ್ತಿತರರು.
ಬಿಜೆಪಿ ಸೇರುವ ಬಗ್ಗೆ ನಿರ್ಧಾರ ಮಾಡಿಲ್ಲ: ಈಶ್ವರಪ್ಪಬಿಜೆಪಿ ಸೇರುವ ಪ್ರಸ್ತಾಪದ ಬಗ್ಗೆ ಈಗ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಬ್ರಿಗೇಡ್ ಸಂಘಟನೆ ನಮ್ಮ ಮುಂದಿರುವ ಚಿಂತನೆ. ರಾಜ್ಯ ಬಿಜೆಪಿ ಶುದ್ಧೀಕರಣವಾಗಬೇಕೆಂಬ ವಿಚಾರ ಮುಂದಿಟ್ಟುಕೊಂಡು ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡಿದ್ದೆ. ಪಕ್ಷ ಒಂದು ಕುಟುಂಬ ಮತ್ತು ಕೆಲ ವ್ಯಕ್ತಿಗಳ ಹಿಡಿತದಿಂದ ಹೊರಬರಬೇಕೆಂಬ ನಿಲುವಿಗೆ ಈಗಲೂ ಬದ್ಧನಾಗಿರುವೆ. ನಾನು ಅಂದು ಎತ್ತಿನ ಧ್ವನಿಗೆ ಪೂರಕವಾಗಿ ಬಿಜೆಪಿಯ 18 ಕ್ಕೂ ಹೆಚ್ಚು ಮುಖಂಡರು ಆಗಾಗ ಸಭೆ ನಡೆಸುತ್ತಿದ್ದಾರೆ. ಪಕ್ಷದ ಒಳಗೆ ಶುದ್ಧೀಕರಣದ ಚರ್ಚೆ ಆರಂಭವಾಗಿರುವುದೇ ದೊಡ್ಡ ಬೆಳವಣಿಗೆ ಎಂದು ಹೇಳಿದರು.