ಸಾರಾಂಶ
ಸ್ಥಳೀಯ ಮಟ್ಟದಲ್ಲಿಯೇ ಅರ್ಜಿಗಳನ್ನು ವಿಲೇವಾರಿ ಮಾಡಬೇಕು. ಕೆಡಿಪಿ ಸಭೆಗಳಲ್ಲಿ ಆರ್ ಟಿಐ ಅರ್ಜಿ ವಿಲೇವಾರಿಗೆ 10 ನಿಮಿಷ ಮೀಸಲಿಟ್ಟರೆ ಹಲವು ಅರ್ಜಿಗಳನ್ನು ಇತ್ಯರ್ಥ ಮಾಡಬಹುದಾಗಿದೆ
ಕನ್ನಡಪ್ರಭ ವಾರ್ತೆ ಮೈಸೂರು
ಜಿಲ್ಲೆಯಲ್ಲಿ ವಿವಿಧ ಇಲಾಖೆಗಳಿಗೆ ಮಾಹಿತಿ ಹಕ್ಕು ಕಾಯಿದೆಯಲ್ಲಿ (ಆರ್ ಟಿಐ) ಸಲ್ಲಿಸಿರುವ 1125 ಅರ್ಜಿಗಳು ಬಾಕಿಯಿದ್ದು, ಶೀಘ್ರ ವಿಲೇವಾರಿ ಮಾಡುವಂತೆ ರಾಜ್ಯ ಮುಖ್ಯ ಮಾಹಿತಿ ಆಯುಕ್ತ ಎ.ಎಂ. ಪ್ರಸಾದ್ ಸೂಚಿಸಿದರು.ಜಿಪಂ ಸಭಾಂಗಣದಲ್ಲಿ ಸೋಮವಾರ ನಡೆದ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಮಾಹಿತಿ ಹಕ್ಕು ಅಧಿನಿಯಮದ ಅನುಷ್ಠಾನ ಕುರಿತು ಸಭೆಯಲ್ಲಿ ಮಾತನಾಡಿದ ಅವರು, ಸ್ಥಳೀಯ ಮಟ್ಟದಲ್ಲಿಯೇ ಅರ್ಜಿಗಳನ್ನು ವಿಲೇವಾರಿ ಮಾಡಬೇಕು. ಕೆಡಿಪಿ ಸಭೆಗಳಲ್ಲಿ ಆರ್ ಟಿಐ ಅರ್ಜಿ ವಿಲೇವಾರಿಗೆ 10 ನಿಮಿಷ ಮೀಸಲಿಟ್ಟರೆ ಹಲವು ಅರ್ಜಿಗಳನ್ನು ಇತ್ಯರ್ಥ ಮಾಡಬಹುದಾಗಿದೆ ಎಂದರು.ಮೈಸೂರು ಅರಮನೆ ಮಂಡಲಿ, ಮೈಸೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಸಂಬಂಧಪಟ್ಟಂತೆ ಸಾಕಷ್ಟು ಅರ್ಜಿಗಳು ಬಂದಿವೆ. ಸೆಂಚುರಿ ಕ್ಲಬ್, ನಿರ್ಮಿತಿ ಕೇಂದ್ರ, ಕಂದಾಯ ಇಲಾಖೆ, ಲೋಕೋಪಯೋಗಿ ಇಲಾಖೆಗೆ ಸಂಬಂಧಪಟ್ಟ ಅರ್ಜಿಗಳು ಬಾಕಿ ಇವೆ. ಅವುಗಳನ್ನು ವಿಲೇವಾರಿ ಮಾಡಬೇಕು ಎಂದು ಅವರು ತಿಳಿಸಿದರು.10 ರೂ. ಪಾವತಿಸಿ ಆರ್ ಟಿಐನಲ್ಲಿ ಮಾಹಿತಿ ಕೋರಿ ಅರ್ಜಿ ಸಲ್ಲಿಸಿದರೆ ಮಾಹಿತಿ ಕೊಡಲೇಬೇಕು. ಅಧಿಕಾರಿಗಳು ಅರ್ಜಿ ವಿಲೇವಾರಿಗೆ ಆದ್ಯತೆ ಕೊಡಬೇಕು. ದೇಶದಲ್ಲಿ 60 ಲಕ್ಷ ಅರ್ಜಿಗಳು ಬಾಕಿ ಇವೆ. ರಾಜ್ಯದಲ್ಲಿ 6 ಲಕ್ಷ ಅರ್ಜಿಗಳಿವೆ. ಮಾಹಿತಿ ಕೊಡಲು ಅಧಿಕಾರಿಗಳು ಭಯಪಡಬೇಕಿಲ್ಲ. ವೈಯಕ್ತಿಕ ಮಾಹಿತಿ, ತನಿಖೆಯ ಹಂತದಲ್ಲಿರುವ ಮಾಹಿತಿ, ಸರ್ಕಾರಕ್ಕೆ ಸಲ್ಲಿಕೆಯಾಗದಿರುವ ಆಡಿಟ್ ವರದಿಯನ್ನು ನೀಡಬೇಕಿಲ್ಲ. ಮಾಹಿತಿ ನೀಡುವ ಬಗ್ಗೆ ಅನುಮಾನಗಳಿದ್ದರೆ ಹಿರಿಯ ಅಧಿಕಾರಿಗಳು, ಕಾನೂನು ತಜ್ಞರ ಸಲಹೆ ಪಡೆಯಬೇಕು ಎಂದರು.ಅಧಿಕಾರಿಗಳು ಮಾಹಿತಿ ಲಭ್ಯ ಇಲ್ಲ ಎಂದು ಹೇಳಬಾರದು. ಫೈಲ್ ಕಳುವಾಗಿದ್ದರೆ ಎಫ್ಐಆರ್ ದಾಖಲಿಸಬೇಕು. ಮಾಹಿತಿ ಕೊಡುವಿರ ಅಥವಾ ದಂಡ ಕಟ್ಟುತ್ತೀರ ಅಧಿಕಾರಿಗಳು ಯೋಚಿಸಬೇಕು. ದಂಡ ಹಾಕಿ 2- 3 ವರ್ಷ ಕಳೆದರೂ ಮಾಹಿತಿ ಸಿಕ್ಕಿಲ್ಲದಂತಹ ಪ್ರಕರಣಗಳು ಆಯೋಗದ ಮುಂದಿದ್ದು, ಇದಾಗಬಾರದು ಎಂದು ಅವರು ಎಚ್ಚರಿಸಿದರು. ಕಡ್ಡಾಯವಾಗಿ ಮಾಹಿತಿ ಕೊಡಿರಾಜ್ಯ ಮಾಹಿತಿ ಆಯುಕ್ತ ಡಾ. ಹರೀಶ್ ಕುಮಾರ್ ಮಾತನಾಡಿ, ಪಬ್ಲಿಕ್ ರೆಕಾರ್ಡ್ಸ್ ಸಂರಕ್ಷಿಸುವುದು ಅಧಿಕಾರಿಗಳ ಆದ್ಯ ಕರ್ತವ್ಯ. ರೆಕಾರ್ಡ್ಸ್ ಇಲ್ಲವೆಂದು ಹೇಳಬಾರದು. ಶಾಶ್ವತವಾಗಿ ರೆಕಾರ್ಡ್ಸ್ ಇರಬೇಕು. ಮಾಹಿತಿ ಮುಚ್ಚಿಡುವುದು ನಾನಾ ಅನುಮಾನಗಳಿಗೆ ಎಡೆಮಾಡುತ್ತದೆ. ಕಡ್ಡಾಯವಾಗಿ ಮಾಹಿತಿ ಕೊಡಬೇಕು. ಆಯೋಗದ ಪ್ರಕಟಣೆಗಳು, ನ್ಯಾಯಾಲಯದ ತೀರ್ಪುಗಳನ್ನು ಕಾಲ ಕಾಲಕ್ಕೆ ಅಧಿಕಾರಿಗಳು ಓದಿಕೊಳ್ಳಬೇಕು ಎಂದರು.ರಾಜ್ಯದಲ್ಲಿರುವ 89 ಸಾರ್ವಜನಿಕ ಪ್ರಾಧಿಕಾರಗಳಿಂದ 50 ಸಾವಿರ ಪ್ರಕರಣಗಳಿದ್ದವು. ಏಳೆಂಟು ತಿಂಗಳಲ್ಲಿ 10 ಸಾವಿರ ಪ್ರಕರಣಗಳನ್ನು ಇತ್ಯರ್ಥ ಮಾಡಿದ್ದೇವೆ. ಅಧಿಕಾರಿಗಳು ತಮ್ಮ ಹಂತದಲ್ಲಿಯೇ ಮಾಹಿತಿ ಕೊಟ್ಟು ಅರ್ಜಿಗಳನ್ನು ವಿಲೇವಾರಿ ಮಾಡಿ ಆಯೋಗದ ಮೇಲಿನ ಹೊರೆಯನ್ನು ಕಡಿಮೆ ಮಾಡಬೇಕು ಎಂದು ಅವರು ಸೂಚಿಸಿದರು.ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತರೆಡ್ಡಿ, ಜಿಪಂ ಸಿಇಒ ಎಸ್. ಯುಕೇಶ್ ಕುಮಾರ್, ಎಸ್ಪಿ ಎನ್. ವಿಷ್ಣುವರ್ಧನ್, ಡಿಸಿಪಿ ಆರ್.ಎನ್. ಬಿಂದು ಮಣಿ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಪಿ. ಶಿವರಾಜು ಮೊದಲಾದವರು ಇದ್ದರು.